
ಬೀದರ್: ನಗರದಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆಮಾಡಿದ್ದು ನಗರದ ಪ್ರಮುಖ ಚರ್ಚ್‌ಗಳು, ಮಾರ್ಗಗಳು ಝಗಮಗಿಸುವ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ಚರ್ಚ್‌ಗಳಿಗಂತೂ ತಳಿರು ತೋರಣ, ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಕ್ರಿಸ್‌ಮಸ್ ಟ್ರೀ, ಸಾಂತಾ ಕ್ಲಾಸ್ ಪ್ರತಿಕೃತಿಗಳು ಗಮನ ಸೆಳೆಯುತ್ತಿವೆ. ಕ್ರೈಸ್ತರ ಮನೆಗಳಲ್ಲಿ ನಕ್ಷತ್ರ ಆಕಾರದ ಆಕಾಶ ಬುಟ್ಟಿಗಳು ಕಂಗೊಳಿಸುತ್ತಿವೆ.
ಡಿ.25ರಂದು ಕ್ರಿಸ್‌ಮಸ್ ಹಬ್ಬವನ್ನು ದೊಡ್ಡ ಮಟ್ಟದಲ್ಲಿ ಆಚರಿಸಲಾಗುತ್ತದೆ. ಆದರೆ, ಡಿ.1ರಿಂದಲೇ ಅಡ್ವೆಂಟ್ ಕ್ರಿಸ್‌ಮಸ್ ಹಬ್ಬದ ಆಚರಣೆಗಳು ಆರಂಭಗೊಂಡಿವೆ. ನಿತ್ಯ ಸಂಗೀತ ದರ್ಬಾರ್, ಪ್ರವಚನ, ಡ್ರಾಮಾ, ಡಾನ್ಸ್, ಏಸು ಕ್ರಿಸ್ತರ ಕುರಿತ ನಾಟಕಗಳು, ಭಜನೆ ಸ್ಪರ್ಧೆಗಳು ನಡೆಯುತ್ತಿವೆ.
ಬೈಬಲ್ ಕ್ವಿಜ್, ಪ್ರತಿಯೊಬ್ಬ ಕ್ರೈಸ್ತರ ಮನೆಗೆ ಹೋಗಿ ಕ್ಯಾರಲ್ ಸಿಂಗಿಂಗ್ ಮೂಲಕ ಕ್ರಿಸ್ತನ ಜನನ ಸಂದೇಶ ಸಾರಲಾಗುತ್ತಿದೆ. ಬಡವರಿಗೆ ಹೊಸ ಬಟ್ಟೆ, ಬ್ಲ್ಯಂಕೆಟ್, ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಗುತ್ತಿದೆ. ಇದು ಹೊಸ ವರ್ಷಾಚರಣೆ ವರೆಗೆ ಮುಂದುವರಿಯಲಿದೆ.
ಬೀದರ್ ನಗರದ 60 ಸೇರಿದಂತೆ ಜಿಲ್ಲೆಯಾದ್ಯಂತ ಇರುವ 200ಕ್ಕೂ ಅಧಿಕ ಚರ್ಚ್‌ಗಳು ಸುಣ್ಣ, ಬಣ್ಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ಬುಧವಾರ (ಡಿ.24) ಮಧ್ಯರಾತ್ರಿಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಬುಧವಾರ ಮಧ್ಯರಾತ್ರಿ ಕ್ಯಾಂಡಲ್ ಬೆಳಗಿಸಿ, ವಿಶೇಷ ಪ್ರಾರ್ಥನೆ ನಡೆಯುತ್ತದೆ. 25ರಂದು ಬೆಳಿಗ್ಗೆ 9ರಿಂದ ವಿಶೇಷ ಪ್ರಾರ್ಥನೆ, ಏಸು ಕ್ರಿಸ್ತನ ಶಾಂತಿ ಸಂದೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಬಳಿಕ ಬಂಧು–ಬಳಗ, ಸ್ನೇಹಿತರನ್ನು ಮನೆಗೆ ಕರೆಸಿ, ಸಿಹಿ ಉಣಬಡಿಸಿ ಸೌಹಾರ್ದತೆ ಮೆರೆಯುತ್ತಾರೆ.
ಸೆಂಟ್ರಲ್ ಚರ್ಚ್‌ನಲ್ಲಿ
ಪ್ರಧಾನ ಕಾರ್ಯಕ್ರಮ ಬೀದರ್ ನಗರದ ಮಂಗಲಪೇಟ್ ಸಮೀಪದ ಸೇಂಟ್ ಪಾಲ್ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಧಾನ ಕಾರ್ಯಕ್ರಮಗಳು ಜರುಗಲಿವೆ ಎಂದು ಚರ್ಚಿನ ಜಿಲ್ಲಾ ಮೇಲ್ವಿಚಾರಕ ಡಿಸೋಜ್ ಥಾಮಸ್ ತಿಳಿಸಿದ್ದಾರೆ. ಅಂದು ಬೆಳಿಗ್ಗೆ 9ಕ್ಕೆ ವಿಶೇಷ ಪ್ರಾರ್ಥನೆ ನಡೆಯಲಿದೆ. ಬಳಿಕ ಏಸು ಕ್ರಿಸ್ತರ ಸಂದೇಶಗಳ ಮಹತ್ವ ಸಾರಲಾಗುವುದು. ಜಿಲ್ಲೆಯ ವಿವಿಧ ಭಾಗಗಳಿಂದ ಕ್ರೈಸ್ತರು ಜನಪ್ರತಿನಿಧಿಗಳು ಅಧಿಕಾರಿಗಳು ಪಾಲ್ಗೊಳ್ಳುವರು. ಹಬ್ಬಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.