ADVERTISEMENT

ರಾಜ್ಯದಲ್ಲಿ ಮೂವರು ಮುಖ್ಯಮಂತ್ರಿಗಳು: ಈಶ್ವರಪ್ಪ ಟೀಕೆ

ಗುಮಾಸ್ತರಂತಾದ ಕಾಂಗ್ರೆಸ್ ಸಚಿವರು

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2018, 13:38 IST
Last Updated 3 ಡಿಸೆಂಬರ್ 2018, 13:38 IST
ಕೆ.ಎಸ್‌.ಈಶ್ವರಪ್ಪ
ಕೆ.ಎಸ್‌.ಈಶ್ವರಪ್ಪ   

ಬೀದರ್‌: ‘ರಾಜ್ಯಕ್ಕೆ ಎಚ್‌.ಡಿ. ಕುಮಾರಸ್ವಾಮಿ ಒಬ್ಬರೇ ಮುಖ್ಯಮಂತ್ರಿ ಅಲ್ಲ. ಕುಮಾರಸ್ವಾಮಿ, ರೇವಣ್ಣ ಹಾಗೂ ಎಚ್‌.ಡಿ. ದೇವೇಗೌಡ ಹೀಗೆ ಮೂವರು ಮುಖ್ಯಮಂತ್ರಿಗಳು ಇದ್ದಾರೆ. ಕಾಂಗ್ರೆಸ್‌ ಸಚಿವರು ಮಾತ್ರ ಗುಮಾಸ್ತರಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಬರ ಅಧ್ಯಯನ ತಂಡದ ನೇತೃತ್ವ ವಹಿಸಿರುವ ಶಾಸಕ ಕೆ.ಎಸ್‌.ಈಶ್ವರಪ್ಪ ಟೀಕಿಸಿದರು.

‘ರಾಜ್ಯದಲ್ಲಿ ವರ್ಗಾವಣೆ ದಂದೆ ನಡೆದಿದೆ. 700 ವರ್ಗಾವಣೆಗಳ ಪೈಕಿ 573 ವರ್ಗಾವಣೆ ನಾನೇ ಮಾಡಿದ್ದೇನೆ ಎಂದು ಎಚ್.ಡಿ. ರೇವಣ್ಣ ಹೇಳಿಕೆ ಕೊಟ್ಟಿದ್ದಾರೆ. ಯು.ಟಿ. ಖಾದರ್‌ ಹಾಗೂ ಐವಾನ್‌ ಡಿಸೋಜಾ ಕಳಿಸಿದ ವರ್ಗಾವಣೆ ಫೈಲ್‌ಗಳು ಮುಖ್ಯಮಂತ್ರಿ ಕಚೇರಿಯಲ್ಲಿ ಬಿದ್ದಿವೆ. ಕಾಂಗ್ರೆಸ್‌ ಸಚಿವರ ಕೆಲಸಗಳು ಆಗುತ್ತಿಲ್ಲ’ ಎಂದು ಬರ ಅಧ್ಯಯನಕ್ಕೆ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ವರ್ಗಾವಣೆ ದಂದೆ ವಿಷಯ ಪ್ರಸ್ತಾಪಿಸಿ ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಛಿಮಾರಿ ಹಾಕಿದೆ. ರಾಷ್ಟ್ರಪತಿ ಗಮನಕ್ಕೆ ತರಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನೂ ನೀಡಿದೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಹೊಡೆದಾಡುತ್ತಿದ್ದಾರೆ. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತಿಗೆ ಯಾವುದೇ ಬೆಲೆ ಇಲ್ಲ’ ಎಂದು ಟೀಕಿಸಿದರು.

ADVERTISEMENT

‘ಸಿದ್ದರಾಮಯ್ಯ ಅವರು ಮತ ರಾಜಕೀಯಕ್ಕಾಗಿ ಟಿಪ್ಪು ಜಯಂತಿ ಮಾಡಿದರು. ವೀರಶೈವರನ್ನು ಒಡೆದು ಲಿಂಗಾಯತ ಮಾಡಿದರು. ಜಾತಿ ಒಡೆದ ಕಾರಣ ಅಧಿಕಾರ ಕಳೆದುಕೊಂಡರು. ಬರುವ ಚುನಾವಣೆಯಲ್ಲಿ ಬೂತ್‌ ಮಟ್ಟದಲ್ಲಿ ಕಾಂಗ್ರೆಸ್‌ ಅನ್ನು ಹುಡುಕುವ ಸ್ಥಿತಿ ಬರಲಿದೆ’ ಎಂದು ಗೇಲಿ ಮಾಡಿದರು.

ಕಾಂಗ್ರೆಸ್‌ಗೆ ಬೆವರು: ‘ರಾಮ ಅಂದರೆ ಸಾಕು ಕಾಂಗ್ರೆಸ್‌ನವರಿಗೆ ಬೆವರು ಬರುತ್ತದೆ. ಚುನಾವಣೆ ಬಂದಾಗ ಹಿಂದೂ ಎನ್ನುತ್ತಾರೆ ಇನ್ನುಳಿದ ಸಮಯದಲ್ಲಿ ಜಾತ್ಯತೀತರು ಎಂದು ಹೇಳಿಕೊಳ್ಳುತ್ತಾರೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಾಬರಿ ಮಸೀದಿ ಆಗಬೇಕು ಎನ್ನುತ್ತಿದ್ದವರು ಇದೀಗ ರಾಮಮಂದಿರ ಬೇಡ ಎಂದು ಹೇಳುವ ಧೈರ್ಯ ಮಾಡುತ್ತಿಲ್ಲ’ ಎಂದು ಮೊದಲಿಸಿದರು.

ಪರಿಹಾರ ಬಿಡುಗಡೆ ಮಾಡಿ: ‘ರಾಜ್ಯ ಸರ್ಕಾರ ತಕ್ಷಣ ರೈತರಿಗೆ ₹ 1743 ಕೋಟಿ ಮುಂಗಾರು ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕು’ ಎಂದು ಕೆ.ಎಸ್‌. ಈಶ್ವರಪ್ಪ ಆಗ್ರಹಿಸಿದರು.

‘ರಾಜ್ಯದಲ್ಲಿ ಪ್ರವಾಸ ಕೈಗೊಂಡಿರುವ ಐದು ತಂಡಗಳಿಂದ ಮಾಹಿತಿ ಕ್ರೋಡೀಕರಿಸಿ ವಿಧಾನ ಮಂಡಳದಲ್ಲಿ ಪ್ರಸ್ತಾಪ ಮಾಡಲಾಗುವುದು. ರಾಜ್ಯ ಸರ್ಕಾರವು ಕೇಂದ್ರಕ್ಕೆ ಮುಂಗಾರು ಬೆಳೆ ನಷ್ಟದ ಮಾಹಿತಿ ಕಳಿಸಿ ಕೈಕಟ್ಟಿ ಕುಳಿತಿದೆ. ರೈತರಿಗೆ ಒಂದು ಪೈಸೆ ಸಹ ಬಿಡುಗಡೆ ಮಾಡಿಲ್ಲ’ ಎಂದು ಆರೋಪಿಸಿದರು.

‘ಮುಖ್ಯಮಂತ್ರಿ ಬರ ಪರಿಹಾರದ ಹೇಳಿಕೆಗಳನ್ನು ಮಾತ್ರ ಕೊಡುತ್ತಿದ್ದಾರೆ. ಕಚೇರಿಯಲ್ಲಿ ಕುಳಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರನ್ಸ್‌ ಮಾಡಿದರೆ ರೈತರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಸರ್ಕಾರ ಜಾಹೀರಾತುಗಳನ್ನು ಪ್ರಕಟಿಸುತ್ತಿದೆ ಹೊರತು ರೈತರಿಗೆ ಹಣ ಪಾವತಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.