
ಬೀದರ್: ಬೀದರ್ ಜಿಲ್ಲೆಯಲ್ಲಿ ಮಂಗಳವಾರ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಇದರೊಂದಿಗೆ ಚಳಿಯ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.
ಪ್ರಸಕ್ತ ಸಾಲಿನಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿರುವ ದಾಖಲೆಯೂ ಬರೆದಿದೆ. ನಾಲ್ಕು ದಿನಗಳ ಹಿಂದೆಯಷ್ಟೇ ಜಿಲ್ಲೆಯ ಕನಿಷ್ಠ ತಾಪಮಾನ 12 ಡಿಗ್ರಿ ಸೆಲ್ಸಿಯಸ್ ಇತ್ತು. ಇದಾದ ನಂತರ ತಾಪಮಾನ ಸತತವಾಗಿ ಇಳಿಮುಖವಾಗುತ್ತಿದೆ. ಎರಡು ದಿನಗಳ ಹಿಂದೆ 11 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನ, ಸೋಮವಾರ ರಾತ್ರಿಯಿಂದ ಮಂಗಳವಾರದ ವರೆಗೆ 10 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಭಾರಿ ಥಂಡಿಗೆ ಜನ ಅಕ್ಷರಶಃ ಥಂಡಾ ಹೊಡೆದಿದ್ದಾರೆ. 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.
ಕಿರಿಯರಿಂದ ಹಿರಿಯರ ತನಕ ಎಲ್ಲಾ ವಯೋಮಾನದವರು ಸ್ವೆಟರ್, ಮಫ್ಲರ್, ಜಾಕೆಟ್ ಧರಿಸಿಕೊಂಡು ಓಡಾಡುವುದು ಸಾಮಾನ್ಯವಾಗಿದೆ. ಅಲ್ಲಲ್ಲಿ ಜನ ಗುಂಪುಗೂಡಿ ರಸ್ತೆಬದಿಯ ವಸ್ತುಗಳನ್ನು ಸುಟ್ಟು, ಮೈ ಕಾಯಿಸಿಕೊಳ್ಳುತ್ತಿದ್ದಾರೆ. ಸಂಜೆ ನಂತರ ಹೊರಗೆ ಜನರ ಓಡಾಟವೂ ಕಡಿಮೆಯಾಗಿದೆ.
ಬರುವ ಎರಡ್ಮೂರು ದಿನಗಳಲ್ಲಿ ಉಷ್ಣಾಂಶ ಇನ್ನಷ್ಟು ಇಳಿಮುಖಗೊಳ್ಳಲಿದ್ದು, ಇದರೊಂದಿಗೆ ಶೀತ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜನ ಬೆಚ್ಚನೆಯ ಉಡುಪು ಧರಿಸಿ ಓಡಾಡಬೇಕು. ವಯಸ್ಸಾದವರು, ಐದು ವರ್ಷದೊಳಗಿನ ಮಕ್ಕಳನ್ನು ಬೆಚ್ಚನೆಯ ಪರಿಸರದಲ್ಲಿ ಇಡಬೇಕೆಂದು ವೈದ್ಯರು ಸಲಹೆ ಮಾಡಿದ್ದಾರೆ. ಬೆಳಿಗ್ಗೆ ಏಳು ಗಂಟೆಯ ನಂತರ, ಸಂಜೆ ಆರು ಗಂಟೆಯೊಳಗೆ ವಾಯು ವಿಹಾರ ಮುಗಿಸಿಕೊಂಡು ಮನೆ ಸೇರಬೇಕೆಂದು ಹಿರಿಯ ನಾಗರಿಕರಿಗೆ ಸಲಹೆ ನೀಡಿದ್ದಾರೆ.
1901ರಲ್ಲಿ ಅತಿ ಕಡಿಮೆ
ಬೀದರ್‌ನಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿದ್ದು 1901ರ ಜನವರಿ 5ರಂದು. ಆ ದಿನ ಬೀದರ್‌ನ ಕನಿಷ್ಠ ತಾಪಮಾನ 2.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಆ ದಿನ ಇಡೀ ರಾಜ್ಯದಲ್ಲೇ ಬೀದರ್‌ನಲ್ಲಿ ದಾಖಲಾಗಿದ್ದ ಅತಿ ಕಡಿಮೆ ಉಷ್ಣಾಂಶವದು.
ಸ್ವೆಟರ್ ಜಾಕೆಟ್ ಖರೀದಿ
ಜೋರು ಚಳಿಯ ಪ್ರಮಾಣ ತೀವ್ರ ಹೆಚ್ಚಾಗಿರುವುದರಿಂದ ಸ್ವೆಟರ್ ಜಾಕೆಟ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಸ್ವೆಟರ್ ಮಾರಾಟ ಮಾಡುವ ಮಳಿಗೆಗಳಲ್ಲಿ ಹೆಚ್ಚಿನ ಜನಸಂದಣಿ ಕಾಣಿಸಿಕೊಳ್ಳುತ್ತಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ತಾತ್ಕಾಲಿಕ ಸ್ವೆಟರ್ ಮಳಿಗೆಗಳು ತಲೆ ಎತ್ತಿವೆ. ನಗರದ ಮನ್ನಳ್ಳಿ ರಸ್ತೆಯ ಬಿ.ವಿ.ಭೂಮರಡ್ಡಿ ಕಾಲೇಜು ಎದುರು ಕೇಂದ್ರ ಬಸ್ ನಿಲ್ದಾಣ ರಸ್ತೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ರಸ್ತೆ ಬದಿ ಮಳಿಗೆಗಳನ್ನು ತೆರೆಯಲಾಗಿದ್ದು ವಿವಿಧ ಬಗೆಯ ಸ್ವೆಟರ್ ಮಫ್ಲರ್ ಮಂಕಿ ಕ್ಯಾಪ್‌ಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಚಳಿಯಿಂದ ಹೆಚ್ಚಿನ ಜನ ಖರೀದಿಸುತ್ತಿದ್ದು ಬೇಡಿಕೆ ಸೃಷ್ಟಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.