ADVERTISEMENT

ಕೋಮುವಾದ ಕೋವಿಡ್‌ಗಿಂತಲೂ ಅಪಾಯಕಾರಿ: ಮಹಮ್ಮದ್ ಆಸಿಫುದ್ದೀನ್

ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಸಲಹಾ ಮಂಡಳಿ ಸದಸ್ಯ ಮಹಮ್ಮದ್ ಆಸಿಫುದ್ದೀನ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2022, 15:05 IST
Last Updated 12 ಜನವರಿ 2022, 15:05 IST
ಬೀದರ್‌ನ ಹೋಟೆಲ್ ಗೇಟ್‌ವೇ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ನೇಹಕೂಟದಲ್ಲಿ ರಾಜ್ಯ ಸಲಹಾ ಮಂಡಳಿ ಸದಸ್ಯ ಮಹಮ್ಮದ್ ಆಸಿಫುದ್ದೀನ್ ಮಾತನಾಡಿದರು (ಚಿತ್ರದಲ್ಲಿ ಕೊನೆಯವರು). ಸೈಯ್ಯದ್ ಅಬ್ದುಲ್ ಸತ್ತಾರ್, ಮಹಮ್ಮದ್ ನಿಜಾಮುದ್ದಿನ್ ಇದ್ದಾರೆ
ಬೀದರ್‌ನ ಹೋಟೆಲ್ ಗೇಟ್‌ವೇ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ನೇಹಕೂಟದಲ್ಲಿ ರಾಜ್ಯ ಸಲಹಾ ಮಂಡಳಿ ಸದಸ್ಯ ಮಹಮ್ಮದ್ ಆಸಿಫುದ್ದೀನ್ ಮಾತನಾಡಿದರು (ಚಿತ್ರದಲ್ಲಿ ಕೊನೆಯವರು). ಸೈಯ್ಯದ್ ಅಬ್ದುಲ್ ಸತ್ತಾರ್, ಮಹಮ್ಮದ್ ನಿಜಾಮುದ್ದಿನ್ ಇದ್ದಾರೆ   

ಬೀದರ್: ‘ಎರಡು ವರ್ಷಗಳಿಂದ ಕೋವಿಡ್‌ ನಮ್ಮೆಲ್ಲರನ್ನು ಬೆಂಬಿಡದಂತೆ ಕಾಡುತ್ತಿದೆ. ಕೋಮುವಾದದ ಸೋಂಕು ಕೋವಿಡ್‌ಕಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೂ ಅ‍ಪಾಯ ತಂದೊಡುತ್ತದೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಸಲಹಾ ಮಂಡಳಿ ಸದಸ್ಯ ಮಹಮ್ಮದ್ ಆಸಿಫುದ್ದೀನ್ ಹೇಳಿದರು.

ಇಲ್ಲಿಯ ಹೋಟೆಲ್ ಗೇಟ್‌ವೇ ಸಭಾಂಗಣದಲ್ಲಿ ಜಮಾಅತೆ ಇಸ್ಲಾಮಿ ಹಿಂದ್‌ನ ಜಿಲ್ಲಾ ಘಟಕದ ವತಿಯಿಂದ ಬುಧವಾರ ಆಯೋಜಿಸಿದ್ದ ಸ್ನೇಹಕೂಟದಲ್ಲಿ ಅವರು ಮಾತನಾಡಿದರು.

‘ದೇಶದ ಸಂವಿಧಾನದ ಆಧಾರದ ಮೇಲೆ ರಾಷ್ಟ್ರ ಮುನ್ನಡೆಯಬೇಕಿದೆ. ನಾನು, ನನ್ನದು ಎನ್ನುವುದು ಹೆಚ್ಚು ಅಪಾಯಕಾರಿ. ಇತಿಹಾಸ ತಿರುಚುವ ಕೆಲಸವೂ ಆಗಬಾರದು. ಇತಿಹಾಸ ಕನ್ನಡಿಯಷ್ಟೇ ಪಾರದರ್ಶಕವಾಗಿರಬೇಕು’ ಎಂದು ತಿಳಿಸಿದರು.

ADVERTISEMENT

'ಸಂವಿಧಾನ ಎಲ್ಲ ಸಮುದಾಯದವರಿಗೂ ಸಮಾನ ಹಕ್ಕು ಕಲ್ಪಿಸಿದೆ. ಯಾವುದೇ ಒಂದು ಸಮಾಜವನ್ನು ದುರ್ಬಲಗೊಳಿಸಲು ಯತ್ನಿಸಿದರೂ ರಾಷ್ಟ್ರ ದುರ್ಬಲಗೊಳ್ಳುತ್ತದೆ. ಜಮಾಅತೆ ಇಸ್ಲಾಮಿ ಹಿಂದ್‌ ರಾಷ್ಟ್ರದ ಹಿತರಕ್ಷಣೆಯ ಸಂಘಟನೆಯಾಗಿದೆ. ಸಂಘಟನೆಯ ಸದಸ್ಯರೇ ದೇಣಿಗೆ ರೂಪದಲ್ಲಿ ಹಣ ಸಂಗ್ರಹಿಸಿ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ’ ಎಂದು ತಿಳಿಸಿದರು.

'ನಮ್ಮ ಸಂಘಟನೆ 10 ದಿನಗಳ ಅಭಿಯಾನ ಆರಂಭಿಸಿ ಪ್ರವಾದಿ ಮಹಮ್ಮದರ ಜೀವನ ಚರಿತ್ರೆಯ ಬಗೆಗೆ ತಿಳಿವಳಿಕೆ ನೀಡಿದೆ. ಬಹುಭಾಷಾ ಕವಿಗೋಷ್ಠಿ ಆಯೋಜಿಸಿ ಭಾಷಾ ಬಾಂಧ್ಯವ್ಯ ಬೆಸೆಯಲು ಯತ್ನಿಸಿದೆ. ಜಿಲ್ಲೆಯ 105 ವಿಧವೆಯರಿಗೆ ಪ್ರತಿ ತಿಂಗಳು ತಲಾ ₹500 ಮಾಸಾಶನ ಕೊಡುತ್ತಿದೆ. ಬಡ ರೋಗಿಗಳನ್ನು ಸಾಗಿಸಲು ಆಂಬುಲೆನ್ಸ್‌ ದೇಣಿಗೆಯಾಗಿ ಕೊಟ್ಟಿದೆ’ ಎಂದು ತಿಳಿಸಿದರು.

‘ಕೋವಿಡ್‌ ಅವಧಿಯಲ್ಲಿ ಸಂಕಷ್ಟದಲ್ಲಿದ್ದ ಬಡವರಿಗೆ ಸಾವಿರಾರು ರೂಪಾಯಿ ಮೌಲ್ಯದ ಔಷಧಿಗಳ ವಿತರಣೆ ಮಾಡಿದೆ. ಆಹಾರ, ಆಹಾರ ಸಾಮಗ್ರಿ, ಹೊದಿಕೆಗಳನ್ನು ವಿತರಿಸಿ ಬಡವರಿಗೆ ನೆರವಾಗಿದೆ’ ಎಂದು ಹೇಳಿದರು.

‘ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಸದ್ಭಾವನೆ ನೆಲೆಸುವಂತಾಗಲು ಸರ್ವ ಧರ್ಮಗುರುಗಳನ್ನು ಒಳಗೊಂಡು ಸದ್ಭಾವನಾ ಮಂಚ್‌ ರಚಿಸಿದೆ. ಇದರ ಸಂಚಾಲಕರಾಗಿ ಗುರುನಾಥ ಗಡ್ಡೆ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಸೈಯ್ಯದ್ ಅಬ್ದುಲ್ ಸತ್ತಾರ್ ಮಾತನಾಡಿ, ‘ದೇವರ ಭಯ ಇರಿಸಿಕೊಂಡು ಒಳ್ಳೆಯ ಕೆಲಸ ಮಾಡೋಣ. ದೇಶ ಅಭಿವೃದ್ಧಿಗೆ ಒಗ್ಗೂಡಿ ಶ್ರಮಿಸೋಣ’ ಎಂದು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್ ಸದಸ್ಯ ಮಹಮ್ಮದ್ ನಿಜಾಮುದ್ದಿನ್ ಮಾತನಾಡಿ, ‘ಜಮಾಅತೆ ಇಸ್ಲಾಮಿ ಹಿಂದ್ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಯಾಗಿದೆ. ಮಾನವೀಯ ಮೌಲ್ಯಗಳನ್ನು ಬಿತ್ತರಿಸುವುದು, ಬಡವರ ಸೇವೆ ಮಾಡುವುದು ಹಾಗೂ ದೇವರ ಬಗೆಗೆ ಭಕ್ತರಿಗೆ ಸರಿಯಾದ ತಿಳಿವಳಿಕೆ ಕೊಡುವುದು ಸಂಘಟನೆಯ ಮೂಲ ಉದ್ದೇಶವಾಗಿದೆ’ ಎಂದರು.

ಮಹಮ್ಮದ್ ಆರಿಫುದ್ದೀನ್, ಮುಜ್‍ತಬಾ ಖಾನ್, ಮಹಮ್ಮದ್ ನಜೀಬುದ್ದೀನ್, ಮಹಮ್ಮದ್ ಮುಜಿಬುದ್ದಿನ್, ನಸೀಮುನ್ನಿಸಾ, ತೌಹಿದಾ ಶಿಂಧೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.