ADVERTISEMENT

ಪಂಚಪೀಠಾಧೀಶರು ವೀರಶೈವರೇ ಅಥವಾ ಹಿಂದೂಗಳೇ ಎಂಬುದು ನಿರ್ಣಯಿಸಲಿ: ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2025, 12:34 IST
Last Updated 11 ಮಾರ್ಚ್ 2025, 12:34 IST
<div class="paragraphs"><p>ಬಸವಲಿಂಗ ಪಟ್ಟದ್ದೇವರು</p></div>

ಬಸವಲಿಂಗ ಪಟ್ಟದ್ದೇವರು

   

ಬೀದರ್‌: ‘ಪಂಚಪೀಠದ ಜಗದ್ಗುರುಗಳು ಹತಾಶರಾಗಿ ಲಿಂಗಾಯತ ಕುರಿತು ಮಿಥ್ಯ ಹಾಗೂ ದ್ವಂದ್ವ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆ ಖಂಡನಾರ್ಹ’ ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರೂ ಆದ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ಎಲ್ಲ ಲಿಂಗಾಯತ ಹಾಗೂ ವೀರಶೈವ ಸಂಘಟನೆಗಳು ಒಗ್ಗೂಡಿ ಮಾಡಿದ `ವಚನ ದರ್ಶನ ಮಿಥ್ಯ, ಸತ್ಯ’ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮ ಅದ್ದೂರಿಯಾಗಿ ಯಶಸ್ವಿಯಾಗಿರುವುದು ಪಂಚಪೀಠದ ಜಗದ್ಗುರುಗಳ ನಿದ್ದೆಗೆಡಿಸಿದೆ. ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಅವರು ಭಾಗವಹಿಸಿ ಲಿಂಗಾಯತ ಸಮಾಜ ಸಂಘಟನೆ ಮತ್ತು ಬಸವತತ್ವದ ಪರವಾಗಿ ಮಾತನಾಡಿರುವುದು ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ ಎಂದು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪಂಚಪೀಠದ ಜಗದ್ಗುರುಗಳ ಹೇಳಿಕೆಯಲ್ಲಿ ವೀರಶೈವ ಧರ್ಮದ ಪ್ರಾಚೀನತೆ, ಶರಣರ ವಚನಗಳಲ್ಲಿ ವೀರಶೈವ ಪದಬಳಕೆ, ಹಿಂದೂ ಕಾಯ್ದೆಗಳು ಹಾಗೂ ಕೆಲವು ಅಧಿವೇಶನಗಳ ನಿರ್ಣಯಗಳ ಕುರಿತು ನಿಲುವು ಸ್ಪಷ್ಟಪಡಿಸುವಲ್ಲಿ ದ್ವಂದ್ವ ನೀತಿ ಅನುಸರಿಸಿದ್ದಾರೆ. ಒಂದು ಕಡೆ ವೀರಶೈವ ಧರ್ಮ ಪ್ರಾಚೀನ ಎಂದು ಹೇಳುತ್ತಲೇ ಅದು ಹಿಂದೂ ಧರ್ಮದ ಭಾಗವೆಂದು ಘೋಷಿಸಿದ್ದಾರೆ. ಪಂಚಪೀಠಾಧಿಶರು ವೀರಶೈವರೇ ಅಥವಾ ಹಿಂದೂಗಳೇ ಎಂಬುದು ಮೊದಲು ನಿರ್ಣಯಿಸಿಕೊಳ್ಳಬೇಕು. ಒಂದು ಧರ್ಮದಲ್ಲಿ ಇನ್ನೊಂದು ಧರ್ಮ ಇರಲು ಸಾಧ್ಯವಿಲ್ಲ. ಪಂಚಪೀಠಗಳಿಗೆ ವೀರಶೈವ ಧರ್ಮ ಎಂದು ಹೇಳುವುದಾದರೆ ಅವರು ಹಿಂದೂಗಳಲ್ಲ ಎಂದು ಹೇಳಬೇಕಾಗುತ್ತದೆ. ಅವರು ನಾವು ಹಿಂದೂಗಳು ಎಂದು ಹೇಳುವುದಾದರೆ ವೀರಶೈವ ಧರ್ಮದವರಲ್ಲ ಎಂದು ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.

ಬಸವಾದಿ ಶರಣರ ವಚನಗಳಲ್ಲಿ ವೀರಶೈವ ಪದ ಬಳಕೆಯ ಬಗ್ಗೆ ಪಂಚಪೀಠದವರು ಹೇಳಿದ್ದಾರೆ. ಶರಣರ ವಚನಗಳಲ್ಲಿ ಹದಿನೈದನೆ ಶತಮಾನದ ನಂತರ ಸೇರಿಸಲಾದ ಸಂಸ್ಕೃತ ಶ್ಲೋಕಗಳಲ್ಲಿ ವೀರಶೈವ ಪದ ಹೆಚ್ಚಿನ ರೀತಿಯಲ್ಲಿ ಬಳಕೆಯಾಗಿರುವುದು ನಾಡಿನ ವಿದ್ವಾಂಸರು ಖಚಿತಪಡಿಸಿದ್ದಾರೆ ಎಂದಿದ್ದಾರೆ.

ವಚನಗಳಲ್ಲಿ ಬರುವ ಲಿಂಗಾಯತ, ಲಿಂಗವಂತ ಪದ ಪ್ರಯೋಗ ಮೂಲ ವಚನಗಳಲ್ಲಿದೆ. ಅದು ಸಹಜವಾಗಿ ಬಳಕೆಯಾಗಿದೆ. ಕೇವಲ ಯಾವುದೇ ಒಂದು ಶಬ್ದದ ಬಳಕೆಯಿಂದ ಆ ಧರ್ಮದ ಇತಿಹಾಸ ಮತ್ತು ಸಿದ್ದಾಂತ ಹೇಳಲು ಸಾಧ್ಯವಿಲ್ಲ. ಯಾವ ಶಬ್ದ ಯಾವ ಅರ್ಥದಿಂದ ಬಳಕೆಯಾಗಿದೆ ಎಂಬುದು ಹೆಚ್ಚು ಅರ್ಥಪೂರ್ಣ. ಶರಣರ ಸಮಗ್ರ ಚಿಂತನೆ ಯಾವ ಸಿದ್ದಾಂತವನ್ನು ಪ್ರತಿಪಾದಿಸುತ್ತದೆ ಎಂಬ ಅರಿವಿನಿಂದ ಅವರ ವಚನಗಳನ್ನು ಅರ್ಥೈಸಬೇಕೆ ವಿನಃ ತಮ್ಮ ಪೂರ್ವಗ್ರಹಪೀಡಿತ ಆಲೋಚನೆಗಳು ಶರಣರ ಮೇಲೆ ಹೇರಿ ಲಿಂಗಾಯತ ಸಮಾಜದ ಮೇಲೆ ಮಾಡುತ್ತಿರುವ ಸವಾರಿಯನ್ನು ಪಂಚಪೀಠಗಳು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಪಂಚಪೀಠದ ಜಗದ್ಗುರುಗಳು ಮಾತಿನ ಭರಾಟೆಯಲ್ಲಿ ನಾಡಿನ ಖ್ಯಾತ ಚಿಂತಕ ಗೊ.ರು.ಚನ್ನಬಸಪ್ಪನವರ ಕುರಿತು ಏಕವಚನದಲ್ಲಿ ಮಾತನಾಡಿರುವುದು ಅವರ ಗುರುತ್ವಕ್ಕೆ ಅವರೇ ಮಾಡಿದ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಂಚಪೀಠದ ಹೇಳಿಕೆಗಳಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದ ನಿರ್ಣಯಗಳ ಕುರಿತು ಉಲ್ಲೇಖ ಇದೆ. ಆದರೆ, 2023 ರಲ್ಲಿ ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆಯ 26ನೇ ಅಧಿವೇಶನದಲ್ಲಿ ವೀರಶೈವ-ಲಿಂಗಾಯತರು ಹಿಂದೂಗಳಲ್ಲ ಎಂಬ ನಿರ್ಣಯ ತೆಗೆದುಕೊಂಡಿರುವುದು ಪಂಚಪೀಠಗಳಿಗೆ ಮರೆವು ಆದಂತೆ ಕಾಣುತ್ತಿದೆ. ಈ ನಿರ್ಣಯ ಮಂಡನೆಯ ಸಂದರ್ಭದಲ್ಲಿ ವೇದಿಕೆಯಲ್ಲಿ ಪಂಚಪೀಠದ ಕೆಲ ಪೀಠಾಧೀಶರು ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ಅವರು ತಾಳಿದ ಮೌನ ಏನೂ ಸೂಚಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.

ಪಂಚಪೀಠದವರು ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರ ನೀಡಿರುವ ಉತ್ತರದಲ್ಲಿ 1) ಲಿಂಗಾಯತದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರು ಇದ್ದಾರೆ. ಲಿಂಗಾಯತರನ್ನು ಪ್ರತ್ಯೇಕ ಧರ್ಮ ಎಂದು ಘೋಷಿಸಿದರೆ ಅವರಿಗೆ ದೊರೆಯುವ ಎಲ್ಲ ಸೌಲಭ್ಯಗಳು ನಿಂತು ಹೋಗುತ್ತವೆ. 1871ರ ಜನಗಣತಿಯಿಂದ ಈವರೆಗಿನ ಎಲ್ಲ ಜನಗಣತಿಯಲ್ಲಿ ಲಿಂಗಾಯತರನ್ನು ಹಿಂದೂ ಧರ್ಮದ ಒಂದು ಶಾಖೆಯೆಂದು ಪರಿಗಣಿಸಲಾಗಿದೆ. ಹಾಗಾಗಿ ಲಿಂಗಾಯತರನ್ನು ಪ್ರತ್ಯೇಕ ಧರ್ಮವೆಂದು ಘೋಷಿಸಲು ಕಷ್ಟ ಆಗುತ್ತಿದೆ. ಕೇಂದ್ರ ಸರ್ಕಾರ ಈ ಎರಡು ಕಾರಣಗಳನ್ನು ತಿಳಿಸಿದೆ. ಆದರೆ, ಈ ಎರಡು ಕಾರಣಗಳು ಮಿಥ್ಯ, ತಪ್ಪು ಗ್ರಹಿಕೆಯ ಮೇಲೆ ನಿಂತಿವೆ. ಪಂಚಪೀಠದ ಸ್ವಾಮೀಜಿಗಳು ಕೇಂದ್ರ ಸರ್ಕಾರದ ಉತ್ತರವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು ಎಂದು ತಾಕೀತು ಮಾಡಿದ್ದಾರೆ.

ಪಂಚಪೀಠದ ಪೂಜ್ಯರು ತಮ್ಮ ಹೇಳಿಕೆಯಲ್ಲಿ ಹಿಂದೂ ಕಾಯ್ದೆಯ ಉಲ್ಲೇಖ ಮಾಡಿದ್ದಾರೆ. ಹಿಂದೂ ಕಾಯ್ದೆಯ ಪ್ರಕಾರ ಬೌದ್ಧ, ಜೈನ, ಸಿಖ್ಖರು ಹಿಂದೂಗಳೇ ಆಗಿರುತ್ತಾರೆ. ಆದರೆ, ಅವರಿಗೆ ಕೇಂದ್ರ ಸರ್ಕಾರ ಪ್ರತ್ಯೇಕ ಧರ್ಮವೆಂದು ಪರಿಗಣಿಸಿದೆ. ಈ ದೃಷ್ಟಿಯಿಂದ ಲಿಂಗಾಯತ ಕೂಡ ಪ್ರತ್ಯೇಕ ಧರ್ಮವೆಂದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.

ಪಂಚಪೀಠಗಳು ಪದೇ ಪದೇ ಧರ್ಮ ಒಡೆಯುವ ಮಾತನಾಡಿ ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಲಿಂಗಾಯತ ಹೋರಾಟ ಅಖಂಡ ಲಿಂಗಾಯತ ಸಮಾಜ ಒಗ್ಗೂಡಿಸುವ ಲಿಂಗಾಯತ ಧರ್ಮದಲ್ಲಿರುವ ನೂರಾರು ಒಳಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹೋರಾಡುವ ಹೋರಾಟವಾಗಿದೆ. ಇದನ್ನರಿತು ಪಂಚಪೀಠದ ಜಗದ್ಗುರುಗಳು ಸಮಸ್ತ ಲಿಂಗಾಯತ ಸಮಾಜದ ಅಸ್ಮಿತೆಯ ಹೋರಾಟಕ್ಕೆ ಪದೇ ಪದೇ ಅಡ್ಡಗಾಲು ಹಾಕುವ ಬದಲು ಈ ಹೋರಾಟಕ್ಕೆ ಬೆಂಬಲಿಸಬೇಕು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.