ADVERTISEMENT

ಕಾವೇರಿ ನೀರಿನ ವಿಚಾರದಲ್ಲಿ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 11:40 IST
Last Updated 1 ಸೆಪ್ಟೆಂಬರ್ 2023, 11:40 IST
   

ಬೀದರ್‌: ‘ಕಾವೇರಿ ನೀರಿನ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರ ರಾಜ್ಯದ ರೈತರಿಗೆ ಬಹಳ ದೊಡ್ಡ ಅನ್ಯಾಯ ಮಾಡಿದೆ’ ಎಂದು ಮಾಜಿಸಚಿವ ಬಿ. ಶ್ರೀರಾಮುಲು ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾವೇರಿ ಪ್ರಾಧಿಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರವು ತಮಿಳುನಾಡಿಗೆ ನೀರು ಹರಿಸಿದೆ. ಆದರೆ, ಕೋರ್ಟಿಗೆ ಮೊದಲೇ ಪ್ರಮಾಣ ಪತ್ರ ಸಲ್ಲಿಸಿದ್ದರೆ ಈ ಪ್ರಸಂಗ ಬರುತ್ತಿರಲಿಲ್ಲ. ನಮ್ಮ ಸರ್ಕಾರವಿದ್ದಾಗ ನಾವು ಮೊದಲೇ ಅಫಿಡೆವಿಟ್‌ ಹಾಕುತ್ತಿದ್ದೆವು. ಈ ಸಲ ಕಾಂಗ್ರೆಸ್‌ ಸರ್ಕಾರ ತಡ ಮಾಡಿದ್ದರಿಂದ ನೀರು ಹರಿಸಬೇಕಾದ ಪರಿಸ್ಥಿತಿ ಬಂತು ಎಂದು ಆರೋಪಿಸಿದರು.

‘ಇಂಡಿಯಾ’ ಮೈತ್ರಿಕೂಟದಲ್ಲಿ ತಮಿಳುನಾಡಿನ ಡಿಎಂಕೆ ಪಕ್ಷ ಇದೆ. ಅಲ್ಲಿ ಆ ಪಕ್ಷದ ಎಂ.ಕೆ. ಸ್ಟಾಲಿನ್‌ ನೇತೃತ್ವದ ಸರ್ಕಾರಕ್ಕೆ ಸಹಾಯ ಮಾಡಿದೆ ಎಂದು ಬಿಂಬಿಸಲು ಕಾಂಗ್ರೆಸ್‌ ಈ ರೀತಿ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯ ಸರ್ಕಾರ ಸ್ಟಾಲಿನ್‌ ಅವರನ್ನು ಮೆಚ್ಚಿಸಲು ರಾಜ್ಯದ ರೈತರಿಗೆ ಅನ್ಯಾಯ ಮಾಡಿದ್ದಾರೆ. ಹಿಂದೆ ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದಾಗ ತಕ್ಷಣವೇ ನೀರು ಹರಿಸುತ್ತಿರಲಿಲ್ಲ. ಮೊದಲು ರಾಜ್ಯದ ರೈತರಿಗೆ ಆದ್ಯತೆ ಕೊಡುತ್ತಿದ್ದೆವು ಎಂದರು.

ADVERTISEMENT

‘ಇಂಡಿಯಾ’ ಮೈತ್ರಿಕೂಟದಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ಸಾಧ್ಯವಿಲ್ಲ. ಈಗಾಗಲೇ ಮೈತ್ರಿಕೂಟದಲ್ಲಿ ಕಿತ್ತಾಟಗಳು ಪ್ರಾರಂಭವಾಗಿವೆ. ಮೊತ್ತೊಂದು ಸಲ ಮೋದಿಯವರು ಪ್ರಧಾನಿಯಾಗುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಖೂಬಾ–ಚವಾಣ್‌ ಕಿತ್ತಾಟ ಹೈಕಮಾಂಡ್‌ ಗಮನಕ್ಕೆ:

ಕೇಂದ್ರ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹಾಗೂ ಔರಾದ್‌ ಶಾಸಕ ಪ್ರಭು ಚವಾಣ್‌ ಅವರ ಕಿತ್ತಾಟ ಹೈಕಮಾಂಡ್‌ ಗಮನಕ್ಕೆ ಬಂದಿದೆ. ಇಬ್ಬರು ಅನುಭವಿ ರಾಜಕಾರಣಿಗಳು ಇದ್ದಾರೆ. ಪಕ್ಷ ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.