ಬೀದರ್: ‘ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಕುರ್ಚಿಗಾಗಿ ನಡೆಸುತ್ತಿರುವ ಕಾದಾಟದಲ್ಲಿ ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ’ ಎಂದು ಸಂಸದ ಗೋವಿಂದ ಕಾರಜೋಳ ಆರೋಪಿಸಿದರು.
ಮುಖ್ಯಮಂತ್ರಿ ಆಗಲು ಡಿ.ಕೆ. ಶಿವಕುಮಾರ ಅವರು ಎರಡು ವರ್ಷಗಳಿಂದ ಪ್ರಯತ್ನಿಸುತ್ತಿದ್ದಾರೆ. ಅವರು ಸಿಎಂ ಆಗಬಾರದು ಎಂದು ಸಿದ್ದರಾಮಯ್ಯನವರ ಬೆಂಬಲಿಗರು ನಿರಂತರ ಹೋರಾಟ ಮಾಡುತ್ತಿದ್ದಾರೆ. ಇವರಿಬ್ಬರ ಜಗಳದಲ್ಲಿ ಆಡಳಿತ ಕುಸಿದು ಹೋಗಿದೆ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಡಿ.ಕೆ. ಶಿವಕುಮಾರ ಅವರಿಗೆ ಜ್ಯೋತಿಷ ಕೇಳುವುದು ಹವ್ಯಾಸ ಆಗಿದೆ. ಅದನ್ನು ನಂಬಿ ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಭಾವಿಸಿದ್ದಾರೆ. ಆದರೆ, ಅವರು ತಿಪ್ಪರಲಾಗ ಹಾಕಿದರೂ ಕಾಂಗ್ರೆಸ್‌ನವರು ಶಿವಕುಮಾರ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ. ಕಾಂಗ್ರೆಸ್ ಪಕ್ಷದಿಂದ ರಾಜ್ಯದಲ್ಲಿ ಸಿದ್ದರಾಮಯ್ಯನವರೇ ಕೊನೆಯ ಮುಖ್ಯಮಂತ್ರಿ. ವಿಜಯನಗರ ಸಾಮ್ರಾಜ್ಯದ ಕೊನೆಯ ಅರಸ ಅಳಿಯ ರಾಮರಾಯ ಆಗಿದ್ದರು. ಅದೇ ತರಹ ಸಿದ್ದರಾಮಯ್ಯನವರೇ ಕಡೆಯ ಕಾಂಗ್ರೆಸ್ಸಿನ ಸಿಎಂ ಎಂದು ಕುಟುಕಿದರು.
ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆದ ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶ ಪೀರಪ್ಪ ಔರಾದೆ, ಮುಖಂಡರಾದ ಗುರುನಾಥ ಜ್ಯಾಂತಿಕರ್, ಗುಂಡಪ್ಪ ವಕೀಲ, ಬಸವರಾಜ ಆರ್ಯ, ಈಶ್ವರ ಸಿಂಗ್ ಠಾಕೂರ್, ಫರ್ನಾಂಡಿಸ್ ಹಿಪ್ಪಳಗಾಂವ್, ಸುಧೀರ್ ಹಾಜರಿದ್ದರು.
‘ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ’
‘ರಾಜ್ಯ ಬಿಜೆಪಿಯಲ್ಲಿ ಗೊಂದಲ ಇರುವುದು ನಿಜ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಕೆಲವೇ ದಿನಗಳಲ್ಲಿ ಪಕ್ಷದಲ್ಲಿನ ಎಲ್ಲ ಸಮಸ್ಯೆ ಬಗೆಹರಿಯಲಿವೆ’ ಎಂದು ಸಂಸದ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು. ಮೂರು ರಾಜ್ಯಗಳ ಚುನಾವಣೆ ಇದ್ದದ್ದರಿಂದ ರಾಷ್ಟ್ರೀಯ ನಾಯಕರು ಕರ್ನಾಟಕದಲ್ಲಿನ ಗೊಂದಲ ನಿವಾರಿಸಲು ಕಾಲಾವಕಾಶ ಸಿಕ್ಕಿರಲಿಲ್ಲ. ಈಗ ಚುನಾವಣೆಗಳು ಮುಗಿದಿವೆ. ಎಲ್ಲ ರೀತಿಯ ಗೊಂದಲಗಳನ್ನು ನಿವಾರಿಸುತ್ತಾರೆ. ಪುನಃ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.
ಪತ್ರಕರ್ತರ ಪ್ರಶ್ನೆಗೆ ಸಿಟ್ಟಾದ ಕಾರಜೋಳ
‘ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿಲ್ಲ. ಮೊದಲ ಚುನಾವಣೆಯಲ್ಲಿ ಡಾ.ಅಂಬೇಡ್ಕರ್ ಅವರನ್ನು ಸೋಲಿಸಿದ್ದು ಕಾಂಗ್ರೆಸ್. ಅಂಬೇಡ್ಕರ್ ಅಂತ್ಯಕ್ರಿಯೆಗೆ ಜಾಗ ಕೊಟ್ಟಿರಲಿಲ್ಲ. ಅವರಿಗೆ ಭಾರತ ರತ್ನ ಸಹ ಕೊಡಲಿಲ್ಲ ಎಂದು ಹೇಳುತ್ತ ಕೊನೆಯಲ್ಲಿ ವ್ಯಂಗ್ಯವಾಗಿ ಹೇಳಿದ್ದರು. ಆದರೆ ಅದನ್ನೇ ದೊಡ್ಡ ವಿಷಯವಾಗಿ ಕಾಂಗ್ರೆಸ್ ಬಿಂಬಿಸಿತು’ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು. ‘ಅಮಿತ್ ಶಾ ಅವರು ಅಂಬೇಡ್ಕರ್ ಕುರಿತು ವ್ಯಂಗ್ಯವಾಗಿ ಹೇಳಿದ್ದರೋ ಅಥವಾ ಕಾಂಗ್ರೆಸ್ ಕುರಿತು ಹೇಳಿದ್ದರೋ’ ಎಂದು ಪತ್ರಕರ್ತರು ಪ್ರಶ್ನಿಸಿದಾಗ ವೋಟ್ ಬ್ಯಾಂಕಿಗಾಗಿ ಅಂಬೇಡ್ಕರ್ ಎನ್ನುವುದರ ಬದಲು ದೇವರೆಂದರೆ ಪಾಪ ಹೋಗುತ್ತಿತ್ತು ಎಂದು ಕಾಂಗ್ರೆಸ್‌ನವರಿಗೆ ಚುಚ್ಚಿ ಅಮಿತ್ ಶಾ ಹೇಳಿದ್ದರು. ನನ್ನ ಮಾತು ತಪ್ಪಾಗಿ ಅರ್ಥೈಸಿಕೊಳ್ಳಬೇಡಿ ಎಂದು ಸಿಟ್ಟಾದರು. ಬಳಿಕ ಸಾವರಿಸಿಕೊಂಡು ಮಾತನಾಡಿದ ಅವರು ಕಾಂಗ್ರೆಸ್ ಪಕ್ಷಕ್ಕೆ ಬೆನ್ನೆಲುಬಾಗಿ ನಿಂತವರಿಗೆ ಆ ಪಕ್ಷದವರು ಅನ್ಯಾಯ ಮಾಡಿದ್ದಾರೆ. ಡಿ. ದೇವರಾಜ ಅರಸು ವೀರೇಂದ್ರ ಪಾಟೀಲ ಇದಕ್ಕೆ ಉತ್ತಮ ಉದಾಹರಣೆ. ಈಗ ಮಲ್ಲಿಕಾರ್ಜುನ ಖರ್ಗೆ ಡಿ.ಕೆ. ಶಿವಕುಮಾರ ಅವರ ಪಾಳಿ. ಖರ್ಗೆ ಈ ಹಿಂದೆ ಕಲಬುರಗಿಯಿಂದ ಗೆದ್ದಾಗಲೇ ಅವರನ್ನು ದೇಶದ ಪ್ರಧಾನಿ ಮಾಡಬಹುದಿತ್ತು. ಆದರೆ ಮನಮೋಹನ್ ಸಿಂಗ್ ಅವರನ್ನು ಮಾಡಿದ್ದರು. ಎರಡನೇ ಅವಧಿಯಲ್ಲೂ ಅವಕಾಶ ಕೊಟ್ಟಿರಲಿಲ್ಲ. ಇಡೀ ಕಾಂಗ್ರೆಸ್ ಪಕ್ಷವನ್ನು ಸೋನಿಯಾ ಗಾಂಧಿ ರಾಹುಲ್ ಗಾಂಧಿ ಪ್ರಿಯಾಂಕಾ ಗಾಂಧಿ ಮುನ್ನಡೆಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ನಾಮಕಾವಸ್ತೆ ಅಧ್ಯಕ್ಷರಾಗಿದ್ದಾರೆ. ರಾಜ್ಯದಲ್ಲಿ ದಲಿತ ಸಿಎಂ ಮಾಡಬೇಕೆಂಬ ಕೂಗು ಇದೆ. ಖರ್ಗೆ ಅವರನ್ನು ಸಿಎಂ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.