ADVERTISEMENT

ಕಾಂಗ್ರೆಸ್ ಜನರಿಂದ ತಿರಸ್ಕಾರಕ್ಕೊಳಗಾದ ಪಕ್ಷ: ಸಚಿವ ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 19 ಜುಲೈ 2022, 14:38 IST
Last Updated 19 ಜುಲೈ 2022, 14:38 IST

ಬೀದರ್‌: ಕಾಂಗ್ರೆಸ್ ದೇಶದ ಜನರಿಂದ ತಿರಸ್ಕಾರಕ್ಕೊಳಗಾದ ಪಕ್ಷ. ಕೇಂದ್ರ ಹಾಗೂ ರಾಜ್ಯದಲ್ಲಿ ತಿರಸ್ಕಾರಕ್ಕೆ ಒಳಗಾದರೂ ಕಾಂಗ್ರೆಸ್‌ ಮುಖಂಡರು ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ನಾನೇ ಮುಂದಿನ ಮುಖ್ಯಮಂತ್ರಿ ಅಂದರೆ, ಕೆಪಿಸಿಸಿ ಅಧ್ಯಕ್ಷ ಡಿಕೆಸಿ ನಾನು ಮುಂದಿನ ಸಿಎಂ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು.

ಸಿದ್ದರಾಮಯ್ಯ ಭಸ್ಮಾಸುರ ಇದ್ದ ಹಾಗೆ. ಸಿದ್ದರಾಮಯ್ಯ ಯಾವ ಪಕ್ಷಕ್ಕೆ ಹೋಗಿದ್ದಾರೋ ಆ ಪಕ್ಷವನ್ನು ಮುಳುಗಿಸಿ ಬಂದಿದ್ದಾರೆ. ಅವರಿಗೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಷದ ಬೆಂಬಲದ ಮೇಲೆ ಹಾರಾಡುತ್ತಿದ್ದಾರೆ. ಹಿಂದುಳಿದ ಜಾತಿಯ ‌ಹೆಸರು ಹೇಳಿಕೊಂಡು ರಾಜಕೀಯ ‌ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ADVERTISEMENT

ಬಾದಾಮಿಯಲ್ಲಿ ಮತದಾರರು ನನ್ನನ್ನು ಸೋಲಿಸಿ ಪಶ್ಚಾತಾಪ ಪಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತೆ ಸ್ಫರ್ಧಿಸಿದರೆ ಠೇವಣಿ ಕಳೆದುಕೊಳ್ಳಲಿದ್ದಾರೆ. ಎಂಎಲ್‌ಎ ಕ್ಷೇತ್ರವನ್ನೇ ಹುಡುಕಾಡುತ್ತಿರುವ ಅವರು ಮುಂದಿನ ಸಿ.ಎಂ ಆಗಲು ಸಾಧ್ಯವಿಲ್ಲ ಎಂದರು.

ಪಕ್ಷ ಸೂಚನೆ ನೀಡಿದರೆ ಮತ್ತೆ ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧೆ ಮಾಡುವೆ. ಕಳೆದ ಚುನಾವಣೆಯಲ್ಲಿ ಪ್ರಚಾರಕ್ಕೆ ಹೆಚ್ಚು ಸಮಯ ದೊರೆಯಲಿಲ್ಲ. ಹೀಗಾಗಿ ಸೋಲ ಅನುಭವಿಸಬೇಕಾಯಿತು ಎಂದು ತಿಳಿಸಿದರು.

ನ್ಯಾಯಮೂರ್ತಿ ನಾಗಮೋಹನ್‌ ದಾಸ ಸಮಿತಿ ನೀಡಿದ ವರದಿ ಸರಿಯಾಗಿಯೇ ಇದೆ. ಪರಿಶಿಷ್ಟ ಪಂಗಡದವರ ಮೀಸಲಾತಿ ಪ್ರಮಾಣವೂ ಹೆಚ್ಚಾಗಬೇಕು. ಇದಕ್ಕೆ ನನ್ನ ಬೆಂಬಲ ಕೂಡ ಇದೆ. ಸರ್ಕಾರದ ಮಟ್ಟದಲ್ಲಿ ತೀರ್ಮಾನ ಆಗಬೇಕಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.