ರಾಜಶೇಖರ ಪಾಟೀಲ
ಬೀದರ್: ‘ನಾನು ಆಕಾಂಕ್ಷಿಯಿದ್ದೇನೆ ಸನ್ಯಾಸಿಯಿದ್ದೇನಾ?’ ಹೀಗೆಂದು ಪ್ರತಿಕ್ರಿಯಿಸಿದವರು ಕಾಂಗ್ರೆಸ್ ಮುಖಂಡರೂ ಆದ ಮಾಜಿಸಚಿವ ರಾಜಶೇಖರ ಪಾಟೀಲ ಹುಮನಾಬಾದ್.
‘ಮುಂಬರುವ ಲೋಕಸಭೆ ಚುನಾವಣೆಗೆ ನೀವು ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೀರಾ’ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.
ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಯಾವುದೇ ಅಸಮಾಧಾನ ನನಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲ ಮಾಡುತ್ತಿದ್ದಾರೆ. ಅವರೊಂದಿಗಿದ್ದೇವೆ. ನಾನು ಸರ್ಕಾರದಲ್ಲೂ ಇಲ್ಲ, ಪಕ್ಷದಲ್ಲೂ ಇಲ್ಲ. ಪಕ್ಷದಲ್ಲಿ ಯಾವುದೇ ಅಧಿಕಾರದಲ್ಲಿ ಇಲ್ಲ. ಉಸ್ತುವಾರಿ ಸಚಿವರದ್ದು ಜವಾಬ್ದಾರಿ ಇದೆ. ನಾನು ಕ್ಷೇತ್ರ ವ್ಯಾಪ್ತಿಯಲ್ಲಿ ಏನು ಮಾಡಬೇಕೊ ಆ ಕೆಲಸ ಮಾಡುತ್ತೇನೆ. ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಎಂದರು.
ನಾನು ಸದ್ಯ ಯಾವುದರಲ್ಲೂ ಇಲ್ಲ. ಸದ್ಯಕ್ಕೀಗ ಮೌನವಾಗಿದ್ದೇನೆ. ಸಮಯ ಬಂದಾಗ ಎಲ್ಲ ಹೊರಗೆ ಬರುತ್ತದೆ. ಪಕ್ಷದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಅಂತಿಮ. ನಾನು ಕೂಡ ಅದಕ್ಕೆ ಬದ್ಧವಾಗಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರು ಅದನ್ನೇ ಹೇಳಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ 120 ವರ್ಷಗಳ ಇತಿಹಾಸ ಇದೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಹಿಂದೆ ಸರಿಯುತ್ತಿದ್ದಾರೆ ಎನ್ನುವುದು ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಯಾರಾದರೂ ಹೇಳಿದ್ದಾರಾ? ಅವರ ಪಕ್ಷದಲ್ಲಿ ಏನಾಗುತ್ತಿದೆ ಅದನ್ನು ಅವರು ನೋಡಿಕೊಳ್ಳಲಿ. ಶಾಸಕರಾದ ಪ್ರಭು ಚವಾಣ್, ಶರಣು ಸಲಗರ, ಮುಖಂಡ ಈಶ್ವರ ಸಿಂಗ್ ಠಾಕೂರ್ ಏನು ಹೇಳುತ್ತಿದ್ದಾರೆ ನೋಡಲಿ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.