ADVERTISEMENT

ಬೀದರ್: ತೈಲ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಜಿಲ್ಲೆಯ ಹೋಬಳಿ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾರ್ಯಕರ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 15:31 IST
Last Updated 13 ಜೂನ್ 2021, 15:31 IST
ಬೀದರ್ ದಕ್ಷಿಣ ಕ್ಷೇತ್ರದ ಬಗದಲ್ ಹೋಬಳಿಯ ಬಾಪೂರ ಬಂಕ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಬೀದರ್ ದಕ್ಷಿಣ ಕ್ಷೇತ್ರದ ಬಗದಲ್ ಹೋಬಳಿಯ ಬಾಪೂರ ಬಂಕ್‌ನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಅಶೋಕ ಖೇಣಿ ಸೂಚನೆಯಂತೆ ಅವರ ಬೆಂಬಲಿಗರು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಬೀದರ್‌ ತಾಲ್ಲೂಕಿನ ಕಮಠಾಣ ಹೊರವಲಯದ ಪೆಟ್ರೋಲ್‌ ಬಂಕ್‌ನಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು.

ಜೀವನಾವಶ್ಯಕ ವಸ್ತುಗಳಾದ ಅಡುಗೆ ಎಣ್ಣೆ, ಗ್ಯಾಸ್ ಸಿಲಿಂಡರ್ ಬೆಲೆಯನ್ನೂ ಹೆಚ್ಚಿಸಲಾಗಿದೆ. ಲಾಕ್‌ಡೌನ್‌ ಕಾರಣ ದುಡಿಮೆ ಇಲ್ಲದೆ ಬಡವರು, ರೈತರು, ಶ್ರಮಿಕರು ಕಂಗಾಲಾಗಿದ್ದಾರೆ. ಇದರ ಬೆನ್ನಲ್ಲೆ ಎಲ್ಲ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಿಸಿರುವುದು ಎಷ್ಟು ಸರಿ ಎಂದು ಬ್ಲಾಕ್ ಕಾಂಗ್ರೆಸ್‌ ಕಮಿಟಿ ಗ್ರಾಮೀಣ ಘಟಕದ ಅಧ್ಯಕ್ಷ ಚಂದ್ರಶೇಖರ ಚನಶಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅಜ್ಮತ್ ಅಲ್ಲೂರಿ, ಬ್ಲಾಕ್‌ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷ ಕರಿಮ್ ಸಾಬ್ ಕಮಠಾಣ ,
ಜಿಲ್ಲಾ ಕಾರ್ಮಿಕ ಘಟಕದ ರಮೇಶ ಹೌದಖಾನಿ, ಗ್ರಾಮ ಪಂಚಾಯಿತಿ ಸದಸ್ಯರಾದ ಖಯಾಮ್, ಸಾಮಾಜಿಕ ಜಾಲತಾಣ ಘಟಕದ ಅಧ್ಯಕ್ಷ ಲೋಕೇಶ ಕನಶಟ್ಟಿ, ಖಮರ್, ಅಹ್ಮದ್, ಗೌಸೊದ್ದಿನ್, ರಾಜ್ ಮಹ್ಮದ್, ಪ್ರಶಾಂತ ಜೈನ, ರಾಜಕುಮಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಬಗದಲ್‌: ಬೀದರ್ ದಕ್ಷಿಣ ಕ್ಷೇತ್ರದ ಬಗದಲ್ ಹೋಬಳಿಯ ಬಾಪೂರ ಪೆಟ್ರೋಲ್ ಬಂಕ್‌ ಸಮೀಪ ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಮುಖಂಡ ಚಂದ್ರಾಸಿಂಗ್‌ ಸೂಚನೆಯಂತೆ ಕಾಂಗ್ರೆಸ್‌ ಕಾರ್ಯಕರ್ತರು ತೈಲ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿಭಟನೆ ನಡೆಸಿದರು.

ಕೇಂದ್ರದ ಜನ ವಿರೋಧಿ ನೀತಿಯಿಂದ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದಕ್ಷಿಣ ಕ್ಷೇತ್ರದ ಶಿಕ್ಷಕರ ಹಾಗೂ ಪದವೀಧರ ಮತಕ್ಷೇತ್ರದ ಅಧ್ಯಕ್ಷ ಮಾರುತಿ ಮಾಸ್ಟರ್ ಆಕ್ರೋಶ ವ್ಯಕ್ತಪಡಿಸಿದರು.

ಬಗದಲ್ ಗ್ರಾಮದ ಕಾಂಗ್ರೆಸ್ ಮುಖಂಡ ಜಮೀಲ್ ಪಟೇಲ್, ಮಹಮ್ಮದ್‌ ಶರೀಫ್, ಸ್ಟಾಲಿನ್, ಸೂರ್ಯಕಾಂತ ಚಟ್ನಳ್ಳಿ, ಸಾಜೀದ್ ಮಸ್ತಾನ್, ಸನಾವುಲ್ಲಾ, ಹಾಜಿ ಭೈರನಳ್ಳಿ, ಯಾಖೂಬ ಹಾಗೂ ಜಮೀರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಅಸಮರ್ಪಕ ಆರ್ಥಿಕ ನೀತಿ’
ಭಾಲ್ಕಿ:
ತಾಲ್ಲೂಕಿನ ಹಲಬರ್ಗಾ ಗ್ರಾಮದ ಪೆಟ್ರೋಲ್‌ ಬಂಕ್‌ ಎದುರಗಡೆ ಭಾನುವಾರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್‌, ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದತ್ತು ಮೂಲಗೆ, ಜಿಲ್ಲಾ ಪಂಚಾಯಿತಿ ಸದಸ್ಯ ಅಂಬಾದಾಸ ಕೋರೆ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು.

‘ಕೋವಿಡ್-19 ನಡುವೆಯೇ ಸಂವೇದನಾ ರಹಿತ ಕೇಂದ್ರ ಸರ್ಕಾರದ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೇ ಹೆಚ್ಚುತ್ತಿರುವುದು ಜನಸಾಮಾನ್ಯರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ’ ಎಂದು ಶಿವರಾಜ ಹಾಸನಕರ್ ಆಕ್ರೋಶ ವ್ಯಕ್ತಪಡಿಸಿದರು.

‘ಕೇಂದ್ರ, ರಾಜ್ಯ ಸರ್ಕಾರದ ದುರಾಡಳಿಕ್ಕೆ ಬೆಸತ್ತಿರುವ ಜನತೆ ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಲೆ ಏರಿಕೆಯಿಂದಾಗಿ ಗೃಹಬಳಕೆ, ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಗಗನಕ್ಕೇರಿವೆ. ಕಳೆದ 13 ತಿಂಗಳುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ಕ್ರಮವಾಗಿ ₹25.72, ₹23.93 ರಷ್ಟು ಏರಿಕೆಯಾಗಿದೆ. ಕಳೆದ 5 ತಿಂಗಳುಗಳಲ್ಲಿ 43 ಬಾರಿ ತೈಲ ಬೆಲೆ ಹೆಚ್ಚಳವಾಗಿದೆ. ಶೀಘ್ರದಲ್ಲಿ ತೈಲ ಬೆಲೆ ಇಳಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ದತ್ತಾತ್ರಿ ಮೂಲಗೆ ಆಗ್ರಹಿಸಿದರು.

ಸುಧಾಕರ್ ಮಲ್ಲಿಗೆ, ಧನರಾಜ್ ಪಾಟೀಲ, ರಮೇಶ ಪ್ರಭಾ, ಉಮೇಶ್ ಕುಲ್ಕರ್ಣಿ, ದತ್ತಾತ್ರಿ ಪಾಟೀಲ, ಶಿವ ಕುಮಾರ ಪಾಟೀಲ, ಸತೀಶ ಮಡಿವಾಳ, ಗೋರಕ ಶ್ರೀಮಾಳೆ, ಘಾಳೆಪ್ಪ ನಾಗೂರೆ, ರಾಜಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.