ಬೀದರ್: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಕಾನ್‌ಸ್ಟೆಬಲ್ (ಸಿವಿಲ್), ಸೇವಾ ನಿರತ ಮತ್ತು 1,137 ಬ್ಯಾಕ್‌ಲಾಗ್ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಭಾನುವಾರ (ಫೆ.25) ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30ರ ವರೆಗೆ ನಡೆಯಲಿದ್ದು, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ವಸ್ತ್ರ ಸಂಹಿತೆ ಪಾಲಿಸಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಸೂಚಿಸಿದ್ದಾರೆ.
ಪುರುಷ ಮತ್ತು ತೃತೀಯ ಲಿಂಗದ ಪುರುಷ ಅಭ್ಯರ್ಥಿಗಳು ಅರ್ಧ ತೋಳಿನ ಕಾಲರ್ ರಹಿತ ಶರ್ಟ್ ಧರಿಸಬೇಕು. ಜಿಪ್ ಪ್ಯಾಕೆಟ್‌ಗಳು, ದೊಡ್ಡ ಬಟನ್‌ಗಳು ಇರುವ ಶರ್ಟ್‌ಗಳನ್ನು ಧರಿಸತಕ್ಕದ್ದಲ್ಲ. ಜೀನ್ಸ್ ಪ್ಯಾಂಟ್ ಮತ್ತು ಹೆಚ್ಚಿನ ಜೇಬುಗಳಿರುವ ಪ್ಯಾಂಟ್‌ಗಳನ್ನು ಧರಿಸತಕ್ಕದ್ದಲ್ಲ. ಪರೀಕ್ಷಾ ಕೇಂದ್ರದೊಳಗೆ ಶೂಗಳನ್ನು ನಿಷೇಧಿಸಲಾಗಿದೆ. ಅಭ್ಯರ್ಥಿಗಳು ತೆಳುವಾದ ಅಡಿ ಭಾಗವಿರುವ ಪಾದರಕ್ಷೆಗಳನ್ನು (ಚಪ್ಪಲಿ) ಧರಿಸುವುದು. ಕುತ್ತಿಗೆ ಸುತ್ತ ಯಾವುದೇ ಲೋಹದ ಆಭರಣಗಳು, ಉಂಗುರ, ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳಾ ಮತ್ತು ತೃತೀಯಲಿಂಗ ಮಹಿಳಾ ಅಭ್ಯರ್ಥಿಗಳು ಉದ್ದನೆಯ ಕಸೂತಿ ಹೂಗಳು, ಬ್ರೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುದು ನಿಷೇಧಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು/ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಮುಜುಗರವಾಗದಂತೆ ಧರಿಸಬೇಕು. ಎತ್ತರವಾದ ಹಿಮ್ಮಡಿ ಶೂ/ಚಪ್ಪಲಿ, ದಪ್ಪ ಅಡಿ ಭಾಗ ಹೊಂದಿರುವ ಶೂ/ ಚಪ್ಪಲಿ ಧರಿಸಬಾರದು. ತೆಳುವಾದ ಅಡಿಭಾಗ ಹೊಂದಿರುವ ಚಪ್ಪಲಿ ಧರಿಸಬೇಕು. ಮಂಗಳ ಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಬೇರೆ ಆಭರಣ ಧರಿಸಿಕೊಂಡು ಬರುವಂತಿಲ್ಲ ಎಂದು ಸೂಚಿಸಿದ್ದಾರೆ.
ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಎಸ್.ಎಂ.ಎಸ್ ಮೂಲಕ ಮಾಹಿತಿ ನೀಡಲಾಗುವುದು. ಲಿಂಕ್ ಸಹ ಕಳುಹಿಸಲಾಗುವುದು. ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ನಿಗದಿಪಡಿಸಿದ ದಿನಾಂಕ, ಸಮಯಕ್ಕೆ ಲಿಖಿತ ಪರೀಕ್ಷೆಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.