
ಭಾಲ್ಕಿ: ‘ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಗಳಿಸುವಲ್ಲಿ ನಿರಂತರ ಪ್ರಯತ್ನ, ವಿಷಯದ ಆಳವಾದ ಜ್ಞಾನ, ಸಮಯದ ಸದ್ಬಳಕೆ ತುಂಬಾ ಮಹತ್ವಪೂರ್ಣ ಪಾತ್ರ ವಹಿಸುತ್ತವೆ’ ಎಂದು ಕೆಎಎಸ್ ಪರೀಕ್ಷೆ ಉತ್ತೀರ್ಣರಾದ ಪ್ರಕಾಶ ಸೂರ್ಯವಂಶಿ ಹೇಳಿದರು.
ಪಟ್ಟಣದ ಚನ್ನಬಸವೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನಲ್ಲಿ ಹೊಸದಾಗಿ ಆರಂಭಿಸಿದ ಜ್ಞಾನ ಸಾಗರ ಸ್ಪರ್ಧಾತ್ಮಕ ತರಬೇತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸಾಗಲು ಸಾಮಾನ್ಯ ಜ್ಞಾನದ ಜೊತೆಗೆ ಪಠ್ಯ ಸಂಬಂಧಿತ ವಿಷಯಗಳ ಆಳ ಮತ್ತು ವಿಸ್ತೃತವಾದ ಜ್ಞಾನ ಪಡೆದುಕೊಳ್ಳುವುದು ಅತ್ಯಗತ್ಯ. ಜೊತೆಗೆ ಪರೀಕ್ಷಾ ಕೇಂದ್ರದಲ್ಲಿ ಸಮಯದ ನಿರ್ವಹಣೆ ತುಂಬಾ ಜಾಣ್ಮೆಯಿಂದ ನಿರ್ವಹಿಸಬೇಕು’ ಎಂದು ತಿಳಿಸಿದರು.
ಆಡಳಿತಾಧಿಕಾರಿ ಅಂಕುಶ ಢೋಲೆ ಮಾತನಾಡಿ, ‘ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಓದಿಗೆ ಪೂರಕ ವಾತಾವರಣ ಮತ್ತು ಸಕಲ ಸೌಲಭ್ಯಗಳು ಲಭ್ಯ ಇವೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆ ಮಾಡಬೇಕು’ ಎಂದರು.
ಪ್ರಾಚಾರ್ಯ ಸಂತೋಷಕುಮಾರ ಎಸ್. ತೀರ್ಥೆ, ಮೀನಾಕುಮಾರಿ ಪಾಟೀಲ ಮಾತನಾಡಿದರು. ವಿವಿಧ ವಿಭಾಗಗಳ ಪ್ರಮುಖರಾದ ಮಲ್ಲಿಕಾರ್ಜುನ, ಆಕಾಶ ಸಿರ್ಸೆ, ನಾಗನಾಥ ಕೋಟೆ, ಕಮಲಾ ಸಿರ್ಸೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.