ADVERTISEMENT

ಅಂಗನವಾಡಿ ಆಹಾರದಲ್ಲಿ ಶಾಸಕರಿಂದ ಭ್ರಷ್ಟಾಚಾರ; ಲೋಕಾಯುಕ್ತಕ್ಕೆ ದೂರು

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 6:03 IST
Last Updated 13 ನವೆಂಬರ್ 2025, 6:03 IST
ದೀಪಕ ಪಾಟೀಲ ಚಾಂದೋರಿ
ದೀಪಕ ಪಾಟೀಲ ಚಾಂದೋರಿ   

ಬೀದರ್: ಅಂಗನವಾಡಿ ಮಕ್ಕಳಿಗೆ ಪೂರೈಸುವ ಪೌಷ್ಟಿಕ ಆಹಾರದಲ್ಲಿ ಔರಾದ್ ಶಾಸಕ ಪ್ರಭು ಚವಾಣ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಮುಖಂಡ ದೀಪಕ್ ಪಾಟೀಲ ಚಾಂದೋರಿ ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ತನಿಖೆ ನಡೆಸಿ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕರ್ನಾಟಕ ಲೋಕಾಯುಕ್ತ, ಲೋಕಾಯುಕ್ತ ಎಡಿಜಿಪಿ ಹಾಗೂ ಬೀದರ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

ಅಂಗನವಾಡಿಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಗುತ್ತಿಗೆಯ ಟೆಂಡರ್ ಕೊಡಿಸಿದ್ದಕ್ಕೆ ಪ್ರತಿಯಾಗಿ ಸುಂದ್ರಮ್ಮ ಟ್ರೇಡಿಂಗ್ ಕಂಪನಿಯು ಭ್ರಷ್ಟಾಚಾರದ ಹಣ ಸಂಗ್ರಹಕ್ಕಾಗಿಯೇ ತೆರೆಯಲಾದ ಮುಂಬೈನಲ್ಲಿರುವ ಶಾಸಕ ಚವಾಣ್ ಮಾಲೀಕತ್ವದ ‘ಪ್ರಭು ಎಂಟರ್‌ಪ್ರೈಸೆಸ್’ಗೆ 2023-24 ರಿಂದ ಈವರೆಗೆ ₹1 ಕೋಟಿಗೂ ಅಧಿಕ ಹಣ ಸಂದಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

ADVERTISEMENT

ಸುಂದ್ರಮ್ಮ ಟ್ರೇಡಿಂಗ್ ಕಂಪನಿಯ ಖಾತೆಯಿಂದ ಪ್ರಭು ಎಂಟರ್‌ಪ್ರೈಸೆಸ್’ ಖಾತೆಗೆ ಹಣ ವರ್ಗಾವಣೆ ಆಗಿರುವುದು ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಖಾತೆಯಿಂದ ಖಾತೆಗೆ ಹಣ ವರ್ಗಾವಣೆಯಾಗಿರುವುದು ಭ್ರಷ್ಟಾಚಾರ ಎಲ್ಲೆ ಮೀರಿರುವುದರ ಸಂಕೇತ. ಸುಂದ್ರಮ್ಮ ಟ್ರೇಡಿಂಗ್ ಕಂಪನಿ ಶಾಸಕರ ಆಪ್ತರದ್ದಾಗಿದೆ. ಔರಾದ್ ಕ್ಷೇತ್ರದಲ್ಲಿ ಅಂಗನವಾಡಿಗಳಿಗೆ ವಾರ್ಷಿಕ ಸುಮಾರು ₹6 ಕೋಟಿಯ ಆಹಾರ ಪೂರೈಸುತ್ತಿದೆ. ಶಾಸಕರೊಂದಿಗಿನ ಒಪ್ಪಂದದಿಂದ ಪೌಷ್ಟಿಕ ಆಹಾರದ ಹೆಸರಲ್ಲಿ ಕಳಪೆ ಆಹಾರ ಸರಬರಾಜು ಮಾಡುತ್ತಿದೆ. ಬಡ ಮಕ್ಕಳ ಆಹಾರದಲ್ಲೂ ಶಾಸಕರು ಅವ್ಯವಹಾರ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.