ಬೀದರ್: ರಾಜ್ಯದ ಹಲವೆಡೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರ ಬೆನ್ನಲ್ಲೇ ಜಿಲ್ಲಾ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನು ಎದುರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ನಗರದ ಬೀದರ್ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಬ್ರಿಮ್ಸ್) ಆವರಣದಲ್ಲಿರುವ ಹಳೆ ಸರ್ಕಾರಿ ಆಸ್ಪತ್ರೆಯ ಕಟ್ಟಡದ ಮೊದಲ ಮಹಡಿಯಲ್ಲಿ ವೆಂಟಿಲೇಟರ್ ಸೌಲಭ್ಯ ಹೊಂದಿರುವ ಒಂಬತ್ತು ಬೆಡ್‌ಗಳ ಪ್ರತ್ಯೇಕ ವಾರ್ಡ್ ಸ್ಥಾಪಿಸಲಾಗಿದೆ. ಇನ್ನು, ಸೋಂಕಿತರಿಗೆ ಚಿಕಿತ್ಸೆ ಕೊಡುವುದಕ್ಕಾಗಿ ಅದೇ ಕಟ್ಟಡದ ನೆಲ ಮಹಡಿಯಲ್ಲಿ 20 ಹಾಸಿಗೆಗಳ ಮತ್ತೊಂದು ಪ್ರತ್ಯೇಕ ವಾರ್ಡ್ ಕೂಡ ಆರಂಭಿಸಲಾಗಿದೆ.
ಕೋವಿಡ್ ಪ್ರಕರಣಗಳ ಚಿಕಿತ್ಸೆಗಾಗಿಯೇ ವೈದ್ಯರು, ಸಿಬ್ಬಂದಿಯ ವ್ಯವಸ್ಥೆ ಮಾಡಲಾಗಿದೆ. ಆಕ್ಸಿಜನ್, ಪರೀಕ್ಷೆ, ಅಗತ್ಯ ಔಷಧೋಚಾರಕ್ಕೂ ಸಿದ್ಧತೆ ಮಾಡಿಕೊಳ್ಳಲಾಗಿದೆ.
ರಾಜ್ಯದ ಹಲವೆಡೆ ಈಗಾಗಲೇ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಆದರೆ, ಬೀದರ್ ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೆ, ತೆಲಂಗಾಣ ಮತ್ತು ಮಹಾರಾಷ್ಟ್ರದೊಂದಿಗೆ ಜಿಲ್ಲೆ ಗಡಿ ಹಂಚಿಕೊಂಡಿದೆ. ಹೈದರಾಬಾದ್, ಸೊಲ್ಲಾಪೂರ, ಪುಣೆ, ಮುಂಬೈ ಮಹಾನಗರಗಳಿಗೆ ಜನರ ಓಡಾಟ ಹೆಚ್ಚಿದೆ. ಇದನ್ನೆಲ್ಲ ಮನಗಂಡೇ ಆರೋಗ್ಯ ಇಲಾಖೆ ಹೆಚ್ಚಿನ ಎಚ್ಚರ ವಹಿಸಿದೆ.
‘ಎರಡು ದಿನಗಳಿಂದ ಜನರ ಚಲನವಲನಗಳ ಮೇಲೆ ನಿಗಾ ವಹಿಸಿದ್ದೇವೆ. ಇದುವರೆಗೆ ಯಾವುದೇ ಕೋವಿಡ್ ಪ್ರಕರಣ ವರದಿಯಾಗಿಲ್ಲ. ಅನ್ಯ ಭಾಗಗಳಿಂದ ಪ್ರಯಾಣ ಮಾಡಿಕೊಂಡು ಬಂದವರು, ರೋಗ ಲಕ್ಷಣ ಇರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
‘ನಮ್ಮಲ್ಲೇ ಸ್ವ್ಯಾಬ್ ಪರೀಕ್ಷೆಯ ಲ್ಯಾಬ್ ಇದೆ. 48 ಗಂಟೆಗಳಲ್ಲಿ ಪರೀಕ್ಷಾ ವರದಿ ಕೈಸೇರುತ್ತದೆ. ಅದನ್ನು ನೋಡಿಕೊಂಡು ಚಿಕಿತ್ಸೆ ಕೊಡಲಾಗುತ್ತದೆ. ಯಾರು ಕೂಡ ಆತಂಕ ಪಡಬೇಕಿಲ್ಲ. ಆದರೆ, ಎಚ್ಚರ ವಹಿಸಬೇಕು’ ಎಂದು ಸಲಹೆ ಮಾಡಿದ್ದಾರೆ.
‘ಈ ಹಿಂದೆ ಕೋವಿಡ್ ನಿಭಾಯಿಸಿದ ಅನುಭವ ನಮ್ಮ ವೈದ್ಯಕೀಯ ಸಿಬ್ಬಂದಿಗೆ ಇರುವುದರಿಂದ ಎಷ್ಟೇ ಪ್ರಕರಣ ಬಂದರೂ ನಿಭಾಯಿಸುತ್ತೇವೆ. ಔಷಧಿ ಸೇರಿದಂತೆ ಯಾವುದಕ್ಕೂ ಕೊರತೆ ಇಲ್ಲ. ಇದರೊಂದಿಗೆ ಡೆಂಗಿ, ಚಿಕುನ್‌ಗುನ್ಯಾ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಹೇಳಿದ್ದಾರೆ.
‘ಬೀದರ್ ಜಿಲ್ಲೆಯಾದ್ಯಂತ ಈಗ ಮದುವೆ, ಕಿರುಗುಣಿ ಸೇರಿದಂತೆ ಇತರೆ ಕಾರ್ಯಕ್ರಮಗಳು ಜಾಸ್ತಿಯಾಗಿ ನಡೆಯುತ್ತಿವೆ. ಜನ ಕೂಡ ದಂಡಿಯಾಗಿ ಸೇರುತ್ತಿದ್ದಾರೆ. ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯದ ನಂತರ ಹೆಚ್ಚಿನ ಸಂಖ್ಯೆಯ ಜನ ಓಡಾಡುತ್ತಿದ್ದಾರೆ. ಯಾರು ಕೂಡ ಅಂತರ ಕಾಯ್ದುಕೊಳ್ಳುತ್ತಿಲ್ಲ. ಇದರ ಕಡೆಗೆ ಗಮನಹರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿಕೊಂಡು ಓಡಾಡುವುದು ಕಡ್ಡಾಯಗೊಳಿಸುವ ಅಗತ್ಯವಿದೆ’ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಎದುರಾದರೆ ಸ್ವಯಂಪ್ರೇರಿತರಾಗಿ ಔಷಧಿ ತೆಗೆದುಕೊಳ್ಳುವುದರ ಬದಲು ವೈದ್ಯರನ್ನು ಕಾಣಬೇಕು.ಡಾ. ಧ್ಯಾನೇಶ್ವರ ನೀರಗುಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಸೋಮವಾರದಿಂದ (ಮೇ 26) ಸ್ವ್ಯಾಬ್ ಟೆಸ್ಟ್ ಪರೀಕ್ಷೆ ಆರಂಭಿಸಲಾಗುವುದು. ಯಾರಿಗಾದರೂ ಅನುಮಾನವಿದ್ದರೆ ಅವರು ಬಂದು ಪರೀಕ್ಷೆ ಮಾಡಿಸಿಕೊಳ್ಳಬಹುದು.ಡಾ. ಶಿವಯೋಗಿ ಬಾಳಿ ಬ್ರಿಮ್ಸ್ ಸೂಪರಿಟೆಂಡೆಂಟ್
ಯಾರ್‍ಯಾರು ಎಚ್ಚರ ವಹಿಸಬೇಕು?
ಮಧುಮೇಹ ರಕ್ತದೊತ್ತಡ ಉಸಿರಾಟದ ಸಮಸ್ಯೆ ಇರುವವರು ಕ್ಯಾನ್ಸರ್‌ನಿಂದ ಬಳಲುತ್ತಿರುವವರಿಗೆ ಕೋವಿಡ್ ಸೋಂಕು ಬೇಗ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಅವರು ಹೆಚ್ಚಿನ ಎಚ್ಚರ ವಹಿಸಬೇಕು ಎಂದು ವೈದ್ಯರು ಸಲಹೆ ಮಾಡಿದ್ದಾರೆ. ‘ಗರ್ಭಿಣಿಯರು ವಯಸ್ಸಾದವರು ಕೂಡ ಹೆಚ್ಚು ಎಚ್ಚರದಿಂದ ಇರಬೇಕು. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಂಡ ಬಂದರೂ ತಕ್ಷಣವೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಧ್ಯಾನೇಶ್ವರ ನೀರಗುಡಿ ತಿಳಿಸಿದ್ದಾರೆ.
ಏನೇನು ಎಚ್ಚರ ಅಗತ್ಯ?
ಅಧಿಕ ಜನ ಸೇರುವ ಸ್ಥಳಗಳಿಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು. ಒಂದುವೇಳೆ ಜನದಟ್ಟಣೆಯಿರುವ ಕಡೆಗಳಿಗೆ ಹೋದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಹೋಗಬೇಕು ಎಂದು ಬ್ರಿಮ್ಸ್ ಸೂಪರಿಟೆಂಡೆಂಟ್ ಡಾ. ಶಿವಯೋಗಿ ಬಾಳಿ ಸಲಹೆ ಮಾಡಿದ್ದಾರೆ. ಮೈ ಕೈ ನೋವು ಜ್ವರ ಬಂದರೆ ತಕ್ಷಣವೇ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಳ್ಳಬೇಕು. ಸ್ವಚ್ಛ ಹಾಗೂ ಬಿಸಿಯಾದ ಆಹಾರ ಸೇವಿಸಬೇಕು. ಅನಗತ್ಯ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ. ಸತತವಾಗಿ ಮಳೆ ಸುರಿಯುತ್ತಿದ್ದು ಶೀತ ಜ್ವರ ಸೇರಿದಂತೆ ಇತರೆ ಕಾಯಿಲೆಗಳು ಬರಬಹುದು. ಇವುಗಳು ಬಂದರೆ ಉಪೇಕ್ಷೆ ಮಾಡದೇ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.