ADVERTISEMENT

ಬೀದರ್ | ಮೂವರು ಮಹಿಳೆಯರಿಗೆ ಕೋವಿಡ್ ಸೋಂಕು ದೃಢ

ಜಿಲ್ಲೆಯಲ್ಲಿ ವೈರಾಣು ಪೀಡಿತರ ಸಂಖ್ಯೆ 79ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 23 ಮೇ 2020, 14:49 IST
Last Updated 23 ಮೇ 2020, 14:49 IST
ಬೀದರ್‌ನ ಬರೀದ್‌ಶಾಹಿ ಉದ್ಯಾನದ ಆವರಣದಲ್ಲಿ ತರಕಾರಿ ಮಾರುಕಟ್ಟೆಗೆ ಅವಕಾಶ ಮಾಡಿಕೊಡಲಾಗಿದ್ದು, ಬಿಸಿಲಿನ ತಾಪಕ್ಕೆ 11 ಗಂಟೆಗೆ ರೈತರು ಗಂಟುಮೂಟೆ ಕಟ್ಟಿಕೊಂಡು ಮನೆಗೆ ತೆರಳಿದರು
ಬೀದರ್‌ನ ಬರೀದ್‌ಶಾಹಿ ಉದ್ಯಾನದ ಆವರಣದಲ್ಲಿ ತರಕಾರಿ ಮಾರುಕಟ್ಟೆಗೆ ಅವಕಾಶ ಮಾಡಿಕೊಡಲಾಗಿದ್ದು, ಬಿಸಿಲಿನ ತಾಪಕ್ಕೆ 11 ಗಂಟೆಗೆ ರೈತರು ಗಂಟುಮೂಟೆ ಕಟ್ಟಿಕೊಂಡು ಮನೆಗೆ ತೆರಳಿದರು   

ಬೀದರ್: ಜಿಲ್ಲೆಯಲ್ಲಿ ಶನಿವಾರ ಮೂವರಿಗೆ ಕೋವಿಡ್ 19 ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 79ಕ್ಕೆ ಏರಿದೆ.

ನಗರದ ಓಲ್ಡ್‌ಸಿಟಿಯ 55 ವರ್ಷದ ಮಹಿಳೆಗೆ ಸೋಂಕಿತರ ಸಂಪರ್ಕದಿಂದ ಸೋಂಕು ಹರಡಿದರೆ, ಮಹಾರಾಷ್ಟ್ರದಿಂದ ಹಿಂದಿರುಗಿರುವ ಕುಂಬಾರವಾಡದ 55 ಹಾಗೂ 25 ವರ್ಷದ ಮಹಿಳೆಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
21 ಜನರನ್ನು ಬ್ರಿಮ್ಸ್‌ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಜಿಲ್ಲೆಯಲ್ಲಿ 56 ಪ್ರಕರಣಗಳು ಸಕ್ರೀಯವಾಗಿವೆ. ಈವರೆಗೆ 13,348 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಇದರಲ್ಲಿ 10,184 ಜನರ ವರದಿ ನೆಗೆಟಿವ್‌ ಹಾಗೂ 79 ಜನರ ವರದಿ ಪಾಸಿಟಿವ್‌ ಬಂದಿದೆ. 216 ಜನರನ್ನು ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿದೆ.

ಬಸ್‌ ಸಂಚಾರ ಇಲ್ಲ
ಬೀದರ್‌:
ರಾಜ್ಯ ಸರ್ಕಾರ ಭಾನುವಾರ ಲಾಕ್‌ಡೌನ್‌ ಘೋಷಿಸಿರುವ ಕಾರಣ ಬೀದರ್‌ನಿಂದ ಭಾನುವಾರ ಯಾವುದೇ ಬಸ್‌ಗಳು ಹೊರಡುವುದಿಲ್ಲ ಎಂದು ಎನ್ಇಕೆಆರ್‌ಟಿಸಿಯ ಬೀದರ್‌ ವಿಭಾಗೀಯ ಸಂಚಾರ ನಿಯಂತ್ರಣ ಅಧಿಕಾರಿ ಶ್ರೀಮಂತ ಘಂಟೆ ತಿಳಿಸಿದ್ದಾರೆ.

ADVERTISEMENT

‘ಸೋಮವಾರ ಬೆಳಿಗ್ಗೆ 7 ಗಂಟೆಗೆ ಮತ್ತೆ ಎಂದಿನಂತೆ ಬಸ್‌ ಸಂಚಾರ ಶುರುವಾಗಲಿದೆ. ಸಂಜೆ ಬೆಂಗಳೂರು ಬಸ್‌ಗಳು ಸಹ ಹೊರಡಲಿವೆ’ ಎಂದು ಹೇಳಿದ್ದಾರೆ.

‘ಬೀದರ್‌ನಿಂದ ಶನಿವಾರ ಒಟ್ಟು 8 ಬಸ್‌ಗಳಲ್ಲಿ 181 ಜನರು ಬೆಂಗಳೂರಿಗೆ, 10 ಬಸ್‌ಗಳಲ್ಲಿ 204 ಜನ ಕಲಬುರ್ಗಿಗೆ ಹೋಗಿದ್ದಾರೆ. ಕಲಬುರ್ಗಿ ಘಟಕದ ಬಸ್‌ಗಳು ಸಹ ಹುಮನಾಬಾದ್‌ ವರೆಗೆ ಬಂದು ಹೋಗಿವೆ’ ಎಂದು ತಿಳಿಸಿದ್ದಾರೆ.
ಇಲ್ಲಿಂದ ಕಲಬುರ್ಗಿ ಹಾಗೂ ಜಿಲ್ಲೆಯ ತಾಲ್ಲೂಕು ಕೇಂದ್ರಗಳಿಗೆ ಬಸ್‌ ಸಂಚಾರ ಆರಂಭಿಸಿ ಐದು ದಿನಗಳಾದರೂ ಕೋವಿಡ್ 19 ಸೋಂಕಿನ ಭಯಯದಿಂದ ನಿರೀಕ್ಷೆಯಷ್ಟು ಪ್ರಯಾಣಿಕರು ಬರುತ್ತಿಲ್ಲ.

ಬೆಳಿಗ್ಗೆ 9 ಗಂಟೆಯ ವೇಳೆಗೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರೇ ಇರಲಿಲ್ಲ. ಸಾರಿಗೆ ಸಂಸ್ಥೆಯ ಬಸ್‌ಗಳ ಚಾಲಕರು ಹಾಗೂ ನಿರ್ವಾಹಕರು ಬಹಳ ಹೊತ್ತಿನವರೆಗೂ ಪ್ರಯಾಣಿಕರಿಗಾಗಿಯೇ ಕಾದು ಕುಳಿತು ಕೊಳ್ಳಬೇಕಾಯಿತು.
ಚಾಲಕರು ಪ್ರಯಾಣಿಕರ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ಸಿಂಪಡಿಸಿದರೆ, ನಿರ್ವಾಹಕರು ಕೈಗವಸು ಹಾಕಿಕೊಂಡು ಟಿಕೆಟ್‌ ವಿತರಿಸಿದರು. ಬಸ್‌ನಲ್ಲಿ ಮಾರ್ಕ್‌ ಮಾಡಿದ ಆಸನಗಳಲ್ಲೇ ಪ್ರಯಾಣಿಕರಿಗೆ ಕುಳಿತುಕೊಳ್ಳುವಂತೆ ತಿಳಿಸಲಾಯಿತು.

ತರಕಾರಿ ಮಾರುಕಟ್ಟೆ ಸ್ಥಳಾಂತರ
ಬೀದರ್‌:
ಲಾಕ್‌ಡೌನ್‌ ಸಂದರ್ಭದಲ್ಲಿ ಬೀದರ್‌ನ ಕೇಂದ್ರ ಬಸ್‌ ನಿಲ್ದಾಣದಲ್ಲಿ ಆರಂಭಿಸಲಾಗಿದ್ದ ತರಕಾರಿ ಮಾರುಕಟ್ಟೆಯನ್ನು ನಗರದ ಬರೀದ್‌ಶಾಹಿ ಉದ್ಯಾನದ ಮೈದಾನಕ್ಕೆ ಸ್ಥಳಾಂತರಿಸಲಾಗಿದೆ.

ನಾಲ್ಕು ದಿನ ಉದಗಿರ್‌ ರಸ್ತೆಯ ಕಾರ್‌ ಪಾರ್ಕಿಂಗ್‌ ಸ್ಥಳದಲ್ಲಿ ವ್ಯಾಪಾರಿಗಳು ತರಕಾರಿ ಮಾರಾಟ ಮಾಡಿದರು. ಅಲ್ಲಿ ಕಾರುಗಳನ್ನು ತಂದು ನಿಲ್ಲಿಸಿದ ಕಾರಣ ಬರೀದ್‌ ಶಾಹಿ ಉದ್ಯಾನದ ಆವರಣದಲ್ಲಿ ವ್ಯವಸ್ಥೆ ಮಾಡಿಕೊಡಲಾಯಿತು.

ಶನಿವಾರ ಬೆಳಿಗ್ಗೆ 7 ಗಂಟೆಗೆ ಬಂದಿದ್ದ ರೈತರು ತರಕಾರಿ ಮಾರಾಟ ಮಾಡಿದರು. 11 ಗಂಟೆಗೆ ನೆತ್ತಿ ಸುಡುವ ಬಿಸಿಲು ಇದ್ದ ಕಾರಣ ಗ್ರಾಹಕರೇ ಇರಲಿಲ್ಲ. ತರಕಾರಿ ಬಾಡಲು ಶುರುವಾದ ಮೇಲೆ ಗಂಟುಮೂಟೆ ಕಟ್ಟಿಕೊಂಡು ಮನೆಗಳಿಗೆ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.