ADVERTISEMENT

ಕೊರೊನಾ ನಂತರ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ: ಸಚಿವ ಪ್ರಭು ಚವಾಣ್

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 15:12 IST
Last Updated 25 ಜುಲೈ 2020, 15:12 IST
ಪ್ರಭು ಚವಾಣ್‌
ಪ್ರಭು ಚವಾಣ್‌   

ಬೀದರ್: ‘ಕೊರೊನಾ ಮುಗಿದ ನಂತರ ಗೋಹತ್ಯೆ ನಿಷೇಧ ಕಾಯ್ದೆ ಅಧ್ಯಯನಕ್ಕೆ ಗುಜರಾತ್‌ ಹಾಗೂ ಉತ್ತರಪ್ರದೇಶಕ್ಕೆ ತಜ್ಞರ ತಂಡವೊಂದನ್ನು ಕಳಿಸಿ ಸಮಗ್ರ ಮಾಹಿತಿ ಪಡೆಯುವ ಮೂಲಕ ರಾಜ್ಯದಲ್ಲೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ತಿಳಿಸಿದರು.

‘ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಗೋಹತ್ಯೆ ನಿಷೇಧ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಲಾಗುವುದು’ ಎಂದು ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಪ್ರಯುಕ್ತ ನಗರದಲ್ಲಿ ಶನಿವಾರ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಅವರು ಹೇಳಿದರು.

‘ಈಗಾಗಲೇ ರಾಜ್ಯ ಗೋ ಸೇವಾ ರಚನೆಯಾಗಿದೆ. ಪಕ್ಷದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡಿ ಗೋವುಗಳ ರಕ್ಷಣೆಗೆ ಒತ್ತು ಕೊಡಲಾಗುವುದು. ಗೋವುಗಳ ರಕ್ಷಣೆ, ಸಂವರ್ಧನೆ, ಗೋಶಾಲೆಗಳ ಅಭಿವೃದ್ಧಿ, ಗೋವು ಉತ್ಪನ್ನಗಳ ತಯಾರಿಗೆ ಸಂಬಂಧಪಟ್ಟ ಕಾರ್ಯಗಳನ್ನು ಚುರುಕುಗೊಳಿಸಲಾಗುವುದು’ ಎಂದು ತಿಳಿಸಿದರು.
‘ಮಹಾರಾಷ್ಟ್ರ, ಆಂಧ್ರಪ್ರದೇಶ. ತೆಲಂಗಾಣ, ತಮಿಳನಾಡು, ರಾಜಸ್ಥಾನ, ಬಿಹಾರ, ಚಂಡಿಗಢ್‌, ಛತ್ತೀಸಗಢ್‌, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಮಧ್ಯಪ್ರದೇಶ, ಉತ್ತರಪ್ರದೇಶ, ಅಸ್ಸಾಂ, ಒಡಿಶಾ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ’ ಎಂದರು.

ADVERTISEMENT

‘2010ರಲ್ಲಿ ಕರ್ನಾಟಕ ಗೋಹತ್ಯೆ ಪ್ರತಿಬಂಧಕ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆಯ ಬದಲಾಗಿ ‘ಕರ್ನಾಟಕ ಜಾನುವಾರು ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ 2010’ ಅಂದಿನ ಸರ್ಕಾರದ ಅವಧಿಯಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆಯಾಗಿತ್ತು. ಕೇಂದ್ರ ಸರ್ಕಾರ ಕೆಲವು ತಿದ್ದುಪಡಿಗೆ ಸೂಚನೆ ನೀಡಿತ್ತು’ ಎಂದು ಹೇಳಿದರು.

‘ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದರೆ ಗೋಮಾಂಸ ಮಾರಾಟ ಹಾಗೂ ಬಳಕೆ ನಿಷೇಧ ಆಗಲಿದೆ. ವಧೆಗಾಗಿ ರಾಜ್ಯದಲ್ಲಿ ಹಾಗೂ ಹೊರ ರಾಜ್ಯಗಳಿಗೆ ಜಾನುವಾರುಗಳ ಅಕ್ರಮ ಸಾಗಣೆ, ವಧೆಗಾಗಿ ಜಾನುವಾರುಗಳ ಖರೀದಿ, ಮಾರಾಟ, ವಿಲೇವಾರಿಗೆ ಕಡಿವಾಣ ಬೀಳಲಿದೆ ಎಂದು ತಿಳಿಸಿದರು.

₹ 44.63 ಕೋಟಿ ವೆಚ್ಚದಲ್ಲಿ ವಧಾಗಾರ

‘ಶಿರಾ ತಾಲ್ಲೂಕಿನ ಚೀಲನಹಳ್ಳಿ ಸಮೀಪ 20 ಎಕರೆ ಪ್ರದೇಶದಲ್ಲಿ ನಬಾರ್ಡ್ ಮೂಲಕ ₹ 44.63 ಕೋಟಿ ವೆಚ್ಚದಲ್ಲಿ ವಧಾಗಾರ (ಕುರಿ ಮತ್ತು ಮೇಕೆ ಮಾಂಸ ಸಂಸ್ಕರಣಾ ಘಟಕ) ನಿರ್ಮಾಣ ಮಾಡಲಾಗುತ್ತಿದೆ’ ಎಂದು ಸಚಿವ ಚವಾಣ್ ತಿಳಿಸಿದರು.

‘ಲಾಕ್‌ಡೌನ್‌ ಸಮಯದಲ್ಲಿ ನಿತ್ಯ 7.75 ಲಕ್ಷ ಲೀಟರ್ ಹಾಲನ್ನು ಬಡವರಿಗೆ, ಕೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಉಚಿತವಾಗಿ ನೀಡಲಾಗಿದೆ. ಜಾನುವಾರು ಉತ್ಪನ್ನಗಳ ಸಾಗಾಟಕ್ಕೆ ಮತ್ತು ಮಾರಾಟಕ್ಕೆ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಫೆಬ್ರುವರಿವರೆಗೂ ಹಾಲು ಪೂರೈಕೆದಾರರಿಗೆ ₹ 1.24 ಪ್ರೋತ್ಸಾಹಧನ ನೀಡಲಾಗಿದೆ. ಮಾರ್ಚ್‌ನಿಂದ ಜೂನ್‌ವರೆಗೆ ಡಿ.ಬಿ.ಟಿ ಮೂಲಕ ರೈತರಿಗೆ ₹ 535 ಕೋಟಿ ಪ್ರೋತ್ಸಾಹಧನ ಕೊಡಲಾಗಿದೆ’ ಎಂದು ತಿಳಿಸಿದರು.

ಪಶು ಚಿಕಿತ್ಸಾ ವಾಹನ

‘ರೈತರು ಹಾಗೂ ಜಾನುವಾರು ಸಾಕಣೆಯಲ್ಲಿ ತೊಡಗಿರುವವರ ಜಾನುವಾರುಗಳ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪಶು ಸಂಗೋಪನೆ ಇಲಾಖೆಯಿಂದ ಪ್ರತಿ ಜಿಲ್ಲೆಗೂ ಆಂಬುಲನ್ಸ್ ಸೇವೆ ಒದಗಿಸಲಾಗುವುದು‘ ಎಂದು ಹೇಳಿದರು..

‘ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳಿಗೆ ಸುಸಜ್ಜಿತವಾದ ಸಂಚಾರಿ ಆಂಬುಲನ್ಸ್ ಕೊಡಲಾಗುವುದು. ಎಲ್ಲ ತುರ್ತು ಸಮಯದಲ್ಲಿ ರೈತರ ಮನೆ ಬಾಗಿಲಿಗೆ ಸೇವೆ ಒದಗಿಸಲಾಗುವುದು. ಅತ್ಯಾಧುನಿಕ, ಸುಸಜ್ಜಿತವಾದ ಈ ವಾಹನದಲ್ಲಿ ವಿಶೇಷವಾದ ಪಶು ಸೇವಾ ಸೌಲಭ್ಯಗಳಿವೆ. ಶಸ್ತ್ರ ಚಿಕಿತ್ಸಾ ಘಟಕ, ಪ್ರಯೋಗ ಶಾಲೆ, ಸ್ಕ್ಯಾನಿಂಗ್ ವ್ಯವಸ್ಥೆ ಇದೆ’ ಎಂದು ಮಾಹಿತಿ ನೀಡಿದರು.

ವಾರ್ ರೂಮ್

ಪಶುಪಾಲಕರು ಮತ್ತು ಜಾನುವಾರು ಸಾಕಣೆಯಲ್ಲಿ ತೊಡಗಿಸಿಕೊಂಡವರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪಶುವೈದ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ವಾರ್‌ ರೂಮ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವ ಪ್ರಭು ಚವಾಣ್‌ ಹೇಳಿದರು.

ರಾಜ್ಯದಲ್ಲಿ ಮೊದಲ ಬಾರಿಗೆ ಇಂತಹ ದ್ದೊಂದು ಪ್ರಯೋಗ ಮಾಡಲಾಗುತ್ತಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ. ಪಶು ಪಾಲಕರು ಉಚಿತ ಸಹಾಯವಾಣಿಗೆ ಕರೆ ಮಾಡಿದ 4 ಗಂಟೆಗಳ ಅವಧಿಯಲ್ಲಿ ಸೇವೆ ಒದಗಿಸಲಿದೆ. ಕರೆ ಮಾಡಿದ ಮೊಬೈಲ್ ನಂಬರ್‌ಗೆ ಎಸ್ಎಂಎಸ್ ಮೂಲಕ ಸಂದೇಶ ಬರಲಿದೆ’ ಎಂದು ತಿಳಿಸಿದರು.

‘ಸೇವೆ ಮತ್ತು ಕರೆಗಳ ಎಲ್ಲ ಮಾಹಿತಿ ಸಚಿವರು ಮತ್ತು ಇಲಾಖೆಯ ಕಾರ್ಯದರ್ಶಿ ಗಮನಕ್ಕೆ ತರುವ ವ್ಯವಸ್ಥೆ ಇರಲಿದೆ.
ವಾರ್ ರೂಮ್ ಮೂಲಕ ರೈತರು, ಪಶುಪಾಲಕರು, ಕೋಳಿ, ಕುರಿ, ಹಂದಿ ಸಾಕಾಣಿಕೆದಾರರು ಜಾನುವಾರು ಆರೋಗ್ಯ ಸಂಬಂಧಿತ ವಿಷಯ, ಆಪ್ತಸಮಾಲೋಚನೆ ಮತ್ತು ಸಲಹೆ ಪಡೆದುಕೊಳ್ಳಬಹುದು. ಇದರಿಂದ ಪಶುಪಾಲನಾ ಚಟುವಟಿಕೆಗಳು ಮತ್ತಷ್ಟು ವ್ಯವಸ್ಥಿತವಾಗಿ ನಡೆಯಲಿವೆ. ರೈತರಿಗೆ ಆಗುವ ಆರ್ಥಿಕ ನಷ್ಟ ತಪ್ಪಿಸಬಹುದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.