ADVERTISEMENT

ಮಳೆಯಿಂದ ಹಾನಿ: ತುರ್ತು ಪರಿಹಾರಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 15:47 IST
Last Updated 17 ಸೆಪ್ಟೆಂಬರ್ 2020, 15:47 IST
ಸಚಿವ ಪ್ರಭು ಚವಾಣ್
ಸಚಿವ ಪ್ರಭು ಚವಾಣ್   

ಬೀದರ್: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳೆ ಹಾನಿ, ಪ್ರಾಣ ಹಾನಿ, ರಸ್ತೆ ಸಂಪರ್ಕ ಕಡಿತ ಸೇರಿದಂತೆ ಸಾಕಷ್ಟು ಹಾನಿಯಾಗಿರುವುದು ವರದಿಯಾಗಿದೆ. ಜಿಲ್ಲೆಯ ಅಧಿಕಾರಿಗಳು ಪರಿಶೀಲಿಸಿ ತುರ್ತು ಪರಿಹಾರಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಸೂಚಿಸಿದ್ದಾರೆ.

ಕೋವಿಡ್‌ ಕಾರಣದಿಂದಾಗಿ ಹೋಮ್ ಕ್ವಾರಂಟೈನ್‍ನಲ್ಲಿರುವ ಸಚಿವರು ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ವಿವರಣೆ ಪಡೆದರು. ಆಯಾ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ವಿಷಯಕ್ಕನುಗುಣ ತುರ್ತಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು. ಹಾನಿಯ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ನದಿ ತೀರದ ಪ್ರದೇಶಗಳು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಬೆಳೆ ಹಾನಿಯಾಗಿದೆ. ಸರ್ಕಾರವು ಈಗಾಗಲೇ ಜಿಲ್ಲೆಯ ತಾಲ್ಲೂಕುಗಳನ್ನು ಪ್ರವಾಹ ಪೀಡಿತವೆಂದು ಘೋಷಿಸಿದೆ. ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ADVERTISEMENT

ಮಳೆಯ ಅಬ್ಬರಕ್ಕೆ ಅನೇಕ ಸೇತುವೆಗಳು ಮುಳುಗಿವೆ. ರಸ್ತೆಗಳು ಹಾಳಾಗಿರುವ ಬಗ್ಗೆ ದೂರುಗಳು ಬರುತ್ತಿವೆ. ಇಂತಹ ರಸ್ತೆಗಳನ್ನು ಪರಿಶೀಲಿಸಿ ಕೂಡಲೇ ದುರಸ್ತಿ ಪಡಿಸಬೇಕು. ಸಂಚಾರ ಸ್ಥಗಿತಗೊಂಡಿದ್ದರೆ ಪರ್ಯಾಯವಾಗಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಲೋಕೋಪಯೋಗಿ ಇಲಾಖೆಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ನೀರಿನ ರಭಸಕ್ಕೆ ಜಿಲ್ಲೆಯ ಕೆಲ ಕೆರೆಗಳು ಉಕ್ಕಿ ಹರಿದು ನೀರು ಮನೆಗಳು ಮತ್ತು ಕೃಷಿ ಭೂಮಿಗೆ ನುಗ್ಗಿರುವ ಮಾಹಿತಿ ಇದೆ. ಹಲವು ಗ್ರಾಮಗಳಲ್ಲಿ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೆಲವೆಡೆ ಹಾನಿಯಾಗಿರುವ ಬಗ್ಗೆ ವರದಿಗಳು ಬಂದಿವೆ. ಉರುಳಿ ಬಿದ್ದ ಕಂಬಗಳನ್ನು ಸರಿಪಡಿಸಿ ಯಾವುದೇ ಭಾಗದಲ್ಲಿ ವಿದ್ಯುತ್ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಮಳೆಯಿಂದ ಜಾನುವಾರುಗಳು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ. ಜಾನುವಾರುಗಳಿಗೆ ಹಾನಿ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.