ಬಸವಕಲ್ಯಾಣದಲ್ಲಿ ಗುರುವಾರ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯ ಅವರು ಅಮರಾವತಿ ಶಿವಯ್ಯ ಹಿರೇಮಠ ಕಲಬುರಗಿ ಇವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿದರು
ಬಸವಕಲ್ಯಾಣ (ಬೀದರ್ ಜಿಲ್ಲೆ): ದಸರಾ ಧರ್ಮ ಸಮ್ಮೇಳನದ ಗುರುವಾರದ ಗೋಷ್ಠಿ ಬಳಿಕ ಕೊನೆಯಲ್ಲಿ ನಡೆದ ರಂಭಾಪುರಿಶ್ರೀ ಅವರಿಗೆ ನಜರ್ ಸಮರ್ಪಿಸುವ ಸಾಂಪ್ರದಾಯಿಕ ಕಾರ್ಯಕ್ರಮ ಗಮನ ಸೆಳೆಯಿತು.
ರಾಜಪೋಷಾಕಿನಲ್ಲಿ ಸಿಂಹಾಸನದ ಮೇಲೆ ಆಸೀನರಾಗಿದ್ದ ರಂಭಾಪುರಿಶ್ರೀ ಅವರಿಗೆ ಆನೆಯೊಂದು ಸೊಂಡಿಲಲ್ಲಿ ಪುಷ್ಪಮಾಲೆ ಹಿಡಿದುಕೊಂಡು ಬಂದು ಸಲ್ಲಿಸಿದಾಗ ಚಪ್ಪಾಳೆಗಳ ಸುರಿಮಳೆಯಾಯಿತು. ಐವರು ಮಠಾಧೀಶರು ಒಂದೇ ಸಾಲಿನಲ್ಲಿ ವೇದಿಕೆಯ ಎದುರಿನಿಂದ ನಡೆದುಕೊಂಡು ಬಂದು ಶಿರಬಾಗಿ ಗೌರವಿಸಿದರು. ಮೈಸೂರು ಪೇಟ್ ಹಾಗೂ ರಾಜ್ಯಾಡಳಿತದ ಸೈನಿಕರ ವೇಷದಲ್ಲಿದ್ದ ಕೆಲವರು ಸಹ ವಂದನೆ ಸಲ್ಲಿಸಿದರು. ಕೆಲವರು ಖಡ್ಗ, ಬೆತ್ತ ಹಿಡಿದುಕೊಂಡು ಶಿಸ್ತಿನಿಂದ ಬಂದು ಸಲಾಮ್ ಹೊಡೆದರು.
ಇದಕ್ಕೂ ಮೊದಲು ರಂಭಾಪುರಿ ವೀರಸೋಮೇಶ್ವರ ಶಿವಾಚಾರ್ಯರು ಮಾತನಾಡಿ, `ಸತ್ಯ, ಧರ್ಮ ಮಾರ್ಗದಲ್ಲಿ ನಡೆದರೆ ಮನುಷ್ಯ ಮಹಾದೇವ ಆಗಬಲ್ಲ. ಬಸವಣ್ಣನವರು ಸಹ ಕಳಬೇಡ, ಕೊಲಬೇಡ ಎಂದಿದ್ದಾರೆ. ಅವರ ಸಪ್ತ ಸೂತ್ರಗಳಲ್ಲಿ ಹುಸಿಯ ನುಡಿಯಲು ಬೇಡ ಎಂಬ ಒಂದೇ ಸೂತ್ರವನ್ನೇ ಪಾಲಿಸಿದರೆ ಭೂಲೋಕ ಸ್ವರ್ಗದಂತಾಗುತ್ತದೆ. ಶರಣರ ಧ್ಯೇಯ ಸಕಲ ಜೀವಾತ್ಮರಿಗೆ ಒಳಿತನ್ನು ಬಯಸುವುದಾಗಿತ್ತು. ಆಚಾರ್ಯರ ಮತ್ತು ಶರಣರ ಅನುಯಾಯಿಗಳ ಮಧ್ಯೆ ಕಂದಕ ತೋಡುವ ಕಾರ್ಯ ಸಲ್ಲದು' ಎಂದರು.
ಬಸವಕಲ್ಯಾಣದಲ್ಲಿ ಗುರುವಾರ ನಡೆದ ದಸರಾ ಧರ್ಮ ಸಮ್ಮೇಳನದಲ್ಲಿ ನಡೆದ ನಜರ್ ಸಮರ್ಪಣೆಯ ಕಾರ್ಯಕ್ರಮದಲ್ಲಿ ಆನೆಯೊಂದು ಸೊಂಡಿಲು ಎತ್ತಿ ರಂಭಾಪುರಿಶ್ರೀ ಅವರಿಗೆ ಗೌರವ ಸಲ್ಲಿಸಿತು
ಶಕಾಪುರ ಸಿದ್ಧರಾಮ ಶಿವಾಚಾರ್ಯರು ಮಾತನಾಡಿ, `ದಸರಾ ದೀಪಾವಳಿಗೆ ಮನೆ ಮತ್ತು ಅಂಗಡಿ ಸ್ವಚ್ಛಗೊಳಿಸುತ್ತೇವೆ. ಅದರಂತೆ ಇಂಥ ಕಾರ್ಯಕ್ರಮಗಳಲ್ಲಿನ ಗುರುವಾಣಿ ಕೇಳಿ ಅಂತರಂಗ ಶುದ್ಧವಾಗುತ್ತದೆ. ಮನದ ಮೈಲಿಗೆ ಹೋಗುತ್ತದೆ' ಎಂದರು.
ತಡೋಳಾ ರಾಜೇಶ್ವರ ಶಿವಾಚಾರ್ಯರು, ಅಫಜಲಪುರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಆಲಮೇಲ್ ಚಂದ್ರಶೇಖರ ಶಿವಾಚಾರ್ಯರು, ಚನ್ನಬಸವ ಹಿರೇಮಠ, ಮೀನಾಕ್ಷಿ ಖಂಡಿಮಠ, ಕಲ್ಪನಾ ದಯಾನಂದ ಶೀಲವಂತ, ರಮೇಶ ರಾಜೋಳೆ ಮಾತನಾಡಿದರು.
ಹಾರಕೂಡ ಚನ್ನವೀರ ಶಿವಾಚಾರ್ಯರು, ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಶಾಸಕ ಶರಣು ಸಲಗರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜ್ಞಾನೇಶ್ವರ ಮುಳೆ ಉಪಸ್ಥಿತರಿದ್ದರು. ಅಮರಾವತಿ ಶಿವಯ್ಯ ಹಿರೇಮಠ ಕಲಬುರಗಿ ಇವರಿಗೆ ಸಾಹಿತ್ಯ ಸಿರಿ ಪ್ರಶಸ್ತಿ ನೀಡಲಾಯಿತು. ರಾಜೇಶ್ರೀ ದಿಲೀಪಸ್ವಾಮಿ ಸಂಗೀತ ಪ್ರಸ್ತುತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.