
ಹುಲಸೂರ: ಬೇಲೂರು ಸರ್ಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಸಂಗೀತಾ ಅವರ ಪಾಠದ ವಿಧಾನ, ಸಮಯ ಪಾಲನೆ ಮತ್ತು ವರ್ತನೆಗೆ ವಿರೋಧ ವ್ಯಕ್ತಪಡಿಸಿ ಜನವರಿ 24ರಂದು ವಿದ್ಯಾರ್ಥಿಗಳು ಶಾಲೆ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ಜಿ. ಸುರೇಶ್ ಅವರು ಜನವರಿ 27ರಂದು ಸಂಜೆ ಶಾಲೆಗೆ ಭೇಟಿ ನೀಡಿ, 8ನೇ, 9ನೇ ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿದರು.
ವಿಜ್ಞಾನ ಶಿಕ್ಷಕಿ ವಿರುದ್ಧ ವಿದ್ಯಾರ್ಥಿಗಳಲ್ಲಿ ನಕಾರಾತ್ಮಕ ಭಾವನೆ ಕಂಡುಬಂದಿದ್ದು, ತಮ್ಮ ಅಸಮಾಧಾನವನ್ನು ಲಿಖಿತ ರೂಪದಲ್ಲಿ ನೀಡಿದ್ದಾರೆ ಎಂದು ಡಿಡಿಪಿಐ ತಿಳಿಸಿದರು.
ವಿಜ್ಞಾನ ಶಿಕ್ಷಕಿ ವರ್ಷಗಳಿಂದ ತಡವಾಗಿ ಶಾಲೆಗೆ ಆಗಮಿಸುವುದು ಹಾಗೂ ಶಾಲಾ ಅವಧಿ ಪೂರ್ಣಗೊಳಿಸುವ ಮೊದಲು ಹೊರಡುವ ಕುರಿತು ಮುಖ್ಯಶಿಕ್ಷಕರು ಶಿಕ್ಷಣ ಇಲಾಖೆಗೆ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಅವರಿಗೆ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದರು. ಅಲ್ಲದೆ, ವಿಜ್ಞಾನ ಶಿಕ್ಷಕಿ ಸಂಗೀತಾ ಅವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗುವುದು. ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ತಕ್ಷಣವೇ ಹೊಸ ವಿಜ್ಞಾನ ಶಿಕ್ಷಕರನ್ನು ನಿಯೋಜಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಕುಮಾರ ಪಾಟೀಲ, ರಾಜಕುಮಾರ ಚಕಾರೆ, ಸಂಗಪ್ಪ ಜವಳಗೆ, ನವೀನ್ ಗುಂಗೆ, ಮಲ್ಲಿಕಾರ್ಜುನ ಬರಗಲೆ, ಪ್ರಶಾಂತ ಚಿಲ್ಲಾಬಟ್ಟೆ, ಸಾಗರ ಮಡಕೆ, ಬಸವರಾಜ ಪಾಟೀಲ, ಗಣೇಶ ವೀರಣ್ಣನವರ, ಬಸವ ಕಾಮಣ್ಣ, ರೇವಣ್ಣ ಕುರೆ, ಧರ್ಮರಾಜ ಭೋಗೆ, ಆಕಾಶ ರಾಜೋಳೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.