ADVERTISEMENT

ಕನ್ನಡ ಭಾಷೆಯಲ್ಲೇ ವ್ಯವಹರಿಸಿ: ಪ್ರೊ. ಸಿದ್ರಾಮಪ್ಪ ಮಾಸಿಮಾಡೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 13:00 IST
Last Updated 27 ನವೆಂಬರ್ 2021, 13:00 IST
ಬೀದರ್‌ನ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಗೂ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರನ್ನು ಸನ್ಮಾನಿಸಲಾಯಿತು
ಬೀದರ್‌ನ ಜೀಜಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹಾಗೂ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರನ್ನು ಸನ್ಮಾನಿಸಲಾಯಿತು   

ಬೀದರ್: ಕನ್ನಡದ ಬೆಳವಣಿಗೆಗೆ ಕನ್ನಡಿಗರೆಲ್ಲರೂ ಮಾತೃ ಭಾಷೆಯಲ್ಲೇ ವ್ಯವಹರಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಸಲಹೆ ಮಾಡಿದರು.

ನಗರದ ಮೈಲೂರು ರಸ್ತೆಯಲ್ಲಿ ಇರುವ ಜೀತಾಮಾತಾ ಕನ್ಯಾ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಭಗವದ್ಗೀತೆ ಅಭಿಯಾನ, ಫಿಟ್ ಇಂಡಿಯಾ ಅಭಿಯಾನದ ಸಮಾರೋಪ ಹಾಗೂ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ಕೊಡಬೇಕು. ಕನ್ನಡವನ್ನು ಉಳಿಸಿ, ಬೆಳೆಸಲು ಶ್ರಮಿಸಬೇಕು ಎಂದು ತಿಳಿಸಿದರು.

ADVERTISEMENT

ಶಿಕ್ಷಣದ ಉದ್ದೇಶ ಜ್ಞಾನಾರ್ಜನೆ ಆಗಬೇಕೇ ಹೊರತು ನೌಕರಿ ಅಲ್ಲ. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸ್ವಾಮಿ ವಿವೇಕಾನಂದರಂತಹ ಮಹಾನ್ ಪುರುಷರ ಜೀವನ ಚರಿತ್ರೆಯನ್ನು ಓದಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಹೇಳಿದರು.

ಕನ್ನಡ ನಾಡು, ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಸೇವೆಗೆ ಕಂಕಣಬದ್ಧರಾಗಿರಬೇಕು ಎಂದು ನುಡಿದರು.

ಭಗವದ್ಗೀತೆ ಶ್ರೇಷ್ಠ ಗ್ರಂಥವಾಗಿದೆ. ಅದರಲ್ಲಿರುವ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ದೈಹಿಕ ಶಿಕ್ಷಣ ಪರಿವೀಕ್ಷಕ ವೆಂಕಟೇಶ ಡೊಬಾಳೆ ತಿಳಿಸಿದರು.

ಜಗದ್ಗುರು ಶಂಕರಾಚಾರ್ಯ ಸೊಂದ ಸ್ವರ್ಣವಲ್ಲಿ ಮಹಾಸಂಸ್ಥಾನ ವತಿಯಿಂದ ಭಗವದ್ಗೀತೆ ಕುರಿತು ಜನಜಾಗೃತಿಗೆ ಪ್ರತಿ ವರ್ಷ ಅಭಿಯಾನ ನಡೆಸಲಾಗುತ್ತಿದೆ. ಜೀಜಾಮಾತಾ ಶಾಲೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಎರಡನೇ ಕಾರ್ಯಕ್ರಮವಾಗಿದೆ ಎಂದು ಅರುಣೋದಯ ಶಾಲೆಯ ನಿರ್ದೇಶಕ ಸುನೀಲ್ ಗೌಳಿ ಹೇಳಿದರು.

ಸುರೇಶ ಚನಶೆಟ್ಟಿ ಹಾಗೂ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಪರಮೇಶ್ವರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ಸಾಹಿತಿ ರಮೇಶ ಬಿರಾದಾರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಶಿವಶಂಕರ ಟೋಕರೆ, ಮಲ್ಲಿಕಾರ್ಜುನ ಬೆಂಬುಳಗೆ, ವಾಸುದೇವ ರಾಠೋಡ್, ರಾಜಕುಮಾರ ಗಾದಗೆ, ಸಂಜಯ ಪಾಟೀಲ, ಅನಿಲಕುಮಾರ ಟೆಕೋಳೆ, ಆನಂದ ಜಾಧವ್, ನಾಗರತ್ನ ಜಮಾದಾರ್, ಅರ್ಜುನ ಧೂಳೆ, ಬಸವರಾಜ ರಾಯಪಳ್ಳಿ ಉಪಸ್ಥಿತರಿದ್ದರು.

ಭೀಮಷಾ ಬಸಿಲಾಪುರ ಸ್ವಾಗತಿಸಿದರು. ಶಿಕ್ಷಕ ತಾನಾಜಿ ನಿರಗುಡೆ ನಿರೂಪಿಸಿದರು. ಶಿಕ್ಷಕ ಮೋಹನ್ ಜೋಶಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.