ADVERTISEMENT

ಮೂರು ದಿನಗಳ ‘ಬಿದರಿ ಉತ್ಸವ’ ಕ್ಕೆ  ನಿರ್ಧಾರ

`ಬಿದರಿ' ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ

​ಪ್ರಜಾವಾಣಿ ವಾರ್ತೆ
Published 21 ಮೇ 2022, 14:54 IST
Last Updated 21 ಮೇ 2022, 14:54 IST
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರಲ್ಲಿ ನಡೆದ ‘ಬಿದರಿ’ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ಸಭೆಯಲ್ಲಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿದರು
ಬೀದರ್‌ನ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರಲ್ಲಿ ನಡೆದ ‘ಬಿದರಿ’ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ಸಭೆಯಲ್ಲಿ ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿದರು   

ಬೀದರ್: ಸಂಗೀತ, ಸಾಹಿತ್ಯ ಹಾಗೂ ಶೈಕ್ಷಣಿಕ ಪಥದ ಪ್ರಗತಿ ಉದ್ದೇಶಿತ ಮೂರು ದಿನಗಳ ಬಿದರಿ ಉತ್ಸವವನ್ನು ಜಿಲ್ಲಾ ಕೇಂದ್ರದಲ್ಲಿ ಬರುವ ಆಗಸ್ಟ್ ತಿಂಗಳಲ್ಲಿ ಆಯೋಜಿಸಲು ‘ಬಿದರಿ’ ಬೀದರ್ ಜಿಲ್ಲೆಯ ಸಾಂಸ್ಕೃತಿಕ ವೇದಿಕೆ ನಿರ್ಧರಿಸಿದೆ.

ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಸಂಗೀತದ ರಸದೌತಣ ಉಣಬಡಿಸುವ ಮೂಲಕ ಜಿಲ್ಲೆಯ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿರುವ ಬಿದರಿ ವೇದಿಕೆಯು ಸಾಮಾಜಿಕ ಕಾಳಜಿಯನ್ನೂ ತನ್ನ ಉದ್ದೇಶಿತ ಯೋಜನೆಗಳಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚೆನಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿದರಿ ವೇದಿಕೆ ಹಮ್ಮಿಕೊಳ್ಳಲಿರುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೋತ್ಸಾಹಿಸುವ ಚಟುವಟಿಕೆಗಳಿರಲಿ. ಅವರಲ್ಲಿರುವ ಪ್ರತಿಭೆಯನ್ನು ಹೊರ ಹಾಕುವ ನಿಟ್ಟಿನಲ್ಲಿ ಡೊಳ್ಳು, ಹಲಿಗೆ ಮತ್ತಿತರ ವಾದ್ಯಗಳನ್ನು ನುಡಿಸುವ ತರಬೇತಿ ಕೊಡಿಸಲಿ. ಕವಿ ಕಾವ್ಯ ಪರಿಚಯ, ಶಾಲೆಗೊಂದು ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಕಸಾಪ ಸಹಭಾಗಿತ್ವ ವಹಿಸಲು ಸಿದ್ಧವಿದೆ ಎಂದು ಹೇಳಿದರು.

ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ ಮಾತನಾಡಿ, ಗ್ರಾಮೀಣ ಕ್ರೀಡೆಗಳಿಗೆ ಬಿದರಿಯ ಈ ಉತ್ಸವದಲ್ಲಿ ಪ್ರಾತಿನಿಧ್ಯ ಸಿಗಲಿ. ಸಂಗೀತ ಸುಧೆ ಹರಿಸಲು ಆರಂಭವಾದ ಈ ಸಂಸ್ಥೆ ಎಲ್ಲ ಆಯಾಮಗಳಲ್ಲಿಯೂ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.

ಬಿಡಿಎ ಅಧ್ಯಕ್ಷ ಬಾಬು ವಾಲಿ ಮಾತನಾಡಿ, ಕಲಾವಿದರನ್ನು ಗುರುತಿಸುವಂಥ ಕಾರ್ಯವಾಗಲಿ. ಬಿದರಿ ವೇದಿಕೆಯ ಕಾರ್ಯಕ್ರಮಕ್ಕೆ ಬಿಡಿಎ ಸಹ ಸಹಭಾಗಿತ್ವ ನೀಡಲಿದೆ ಎಂದು ಭರವಸೆ ನೀಡಿದರು.

ಹಿರಿಯ ಸಾಹಿತಿ ಭಾರತಿ ವಸ್ತ್ರದ್ ಮಾತನಾಡಿ, ಮಹಿಳೆಯರಿಗೂ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಿ, ಒಗಟು, ಒಡಪುಗಳನ್ನು ಹೇಳುವ, ಸಾಂಪ್ರದಾಯಿಕ ಜನಪದ ಶೈಲಿಯ ಉಡುಗೆ, ತೊಡುಗೆ ಹಾಗೂ ಅಡುಗೆ ಸ್ಪರ್ಧೆಯೂ ಇರಲಿ ಎಂದು ಸಲಹೆ ನೀಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್ ಮನೋಹರ, ಕಥೆಗಾರ್ತಿ ಪಾರ್ವತಿ ಸೋನಾರೆ ಮಾತನಾಡಿ, ಹಿರಿಯ ಸಾಹಿತಿ ಕಸ್ತೂರಿ ಪಟಪಳ್ಳಿ, ಹಿರಿಯ ಚಿತ್ರ ಕಲಾವಿದ ಯೋಗೀಶ ಮಠದ, ಶ್ರೀಮಂತ ಸಪಾಟೆ, ವಿರೂಪಾಕ್ಷ ಗಾದಗಿ, ದಾನಿ ಬಾಬುರಾವ್ ಸಲಹೆ ನೀಡಿದರು.

ಬಿದರಿ ವೇದಿಕೆ ಅಧ್ಯಕ್ಷೆ ರೇಖಾ ಸೌದಿ ಮಾತನಾಡಿ, ಎಲ್ಲರ ಸಲಹೆಗಳಂತೆ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸಲಾಗುವುದು. ಮೂರು ದಿನಗಳ ಬಿದರಿ ಉತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಶಂಭುಲಿಂಗ ವಾಲ್ದೊಡ್ಡಿ, ವಿಜಯಕುಮಾರ ಸೋನಾರೆ, ಪ್ರಭಾಕರ ಎ.ಎಸ್, ವೀರಭದ್ರಪ್ಪ ಉಪ್ಪಿನ್, ಸುನೀಲ ಭಾವಿಕಟ್ಟಿ, ರೇವಣಸಿದ್ದಪ್ಪ ಡೋಂಗರಗಾಂವ್, ಅರವಿಂದ ಕುಲಕರ್ಣಿ, ಶಿವಕುಮಾರ ಕಟ್ಟೆ, ಶಿವಕುಮಾರ ಕೋತ್ಮಿರ್, ಎಂ.ಪಿ ಮುದಾಳೆ, ದಿಲೀಪ ಕಾಡವಾದ, ರಾಜೇಶ ಕುಲಕರ್ಣಿ, ಶರತ್ ಅಭಿಮಾನ, ಪ್ರದೀಪ ದೇಸಾಯಿ, ಸಂತೋಷ ಜೋಳದಾಪಕೆ, ಮಾರುತಿ ಕಂಟಿ, ದೇವಿದಾಸ ಜೋಷಿ, ಮುಕುಂದ ಹುಂಡೇಕರ್, ಮಾಧವ್ ಮಾತನಾಡಿದರು. ವೀರಶೆಟ್ಟಿ ಮೈಲೂರಕರ್ ನಿರೂಪಿಸಿದರು.

ಸಭೆಗೂ ಮುನ್ನ ದಿ. ಚಂದ್ರಗುಪ್ತ ಚಾಂದಕವಠೆ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿ ಮೌನಾಚರಣೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT