ADVERTISEMENT

ಪಾಪನಾಶ ಕೆರೆ ಅಭಿವೃದ್ಧಿಗೆ ನಿರ್ಧಾರ

ಬಾಬುವಾಲಿ ಅಧ್ಯಕ್ಷತೆಯಲ್ಲಿ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2021, 15:34 IST
Last Updated 17 ಜೂನ್ 2021, 15:34 IST
ಬೀದರ್‌ನಲ್ಲಿ ಗುರುವಾರ ನಡೆದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಮಾತನಾಡಿದರು. ರಘುನಾಥರಾವ್ ಮಲ್ಕಾಪುರೆ, ರಹೀಂಖಾನ್, ಅರವಿಂದಕುಮಾರ ಅರಳಿ ಇದ್ದರು
ಬೀದರ್‌ನಲ್ಲಿ ಗುರುವಾರ ನಡೆದ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಮಾತನಾಡಿದರು. ರಘುನಾಥರಾವ್ ಮಲ್ಕಾಪುರೆ, ರಹೀಂಖಾನ್, ಅರವಿಂದಕುಮಾರ ಅರಳಿ ಇದ್ದರು   

ಬೀದರ್: ಬೀದರ್ ನಗರಾಭಿವೃದ್ಧಿ ಪ್ರಾಧಿಕಾರವು ಇಲ್ಲಿಯ ಐತಿಹಾಸಿಕ ಪಾಪನಾಶ ಕೆರೆ ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಇಲ್ಲಿ ನಡೆದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಅಧ್ಯಕ್ಷರ ಪ್ರಸ್ತಾವದ ಮೇರೆಗೆ ಕೆರೆ ಅಭಿವೃದ್ಧಿ ನಿಧಿಯಿಂದ ಕೆರೆ ಅಭಿವೃದ್ಧಿಪಡಿಸಿ, ಪ್ರವಾಸಿ ತಾಣವನ್ನಾಗಿ ಮಾಡಿ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಪ್ರಾಧಿಕಾರದ ಆಯುಕ್ತ ಅಭಯಕುಮಾರ ತಿಳಿಸಿದ್ದಾರೆ.

ADVERTISEMENT

ಪ್ರಾಧಿಕಾರದ ವಸತಿ ಅಭಿವೃದ್ಧಿ ಯೋಜನೆಯಾದ ಗೋರನಳ್ಳಿ (ಬಿ) ಗ್ರಾಮದ ಸರ್ವೇ ಸಂಖ್ಯೆ 22/1 (ಬಿ.ಎಸ್. ಯಡಿಯೂರಪ್ಪ ಬಡಾವಣೆ) ರಲ್ಲಿ ಕಾಯ್ದಿರಿಸಿದ ಉದ್ಯಾನದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಹಯೋಗ ಹಾಗೂ ಅನುದಾನದಡಿ ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಸುಸಜ್ಜಿತ ಹೊಂಡ ನಿರ್ಮಿಸುವುದಕ್ಕಾಗಿ ಪ್ರಸ್ತಾವ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಪ್ರಾಧಿಕಾರದಿಂದ ತೆರವುಗೊಳಿಸಲಾದ ಉದ್ದೇಶಿತ ಮಹಾ ಯೋಜನೆ ರಸ್ತೆಗಳನ್ನು ಶಾಸಕರ ಅನುದಾನದಡಿ ಅಭಿವೃದ್ಧಿಪಡಿಸಲು, ಪ್ರಾಧಿಕಾರ ವ್ಯಾಪ್ತಿಯ ಸರ್ಕಾರಿ ಜಮೀನು, ಕೆರೆ ಹಾಗೂ ಅನಧಿಕೃತ ವಿನ್ಯಾಸಗಳ ಒತ್ತುವರಿಯನ್ನು ತೆರವುಗೊಳಿಸಲು, ಪ್ರಾಧಿಕಾರದಿಂದ ವಿನ್ಯಾಸ ಅನುಮೋದನಗೊಂಡ ಉದ್ಯಾನಗಳನ್ನು ನಿರ್ವಹಣೆಗಾಗಿ ಸಂಘ– ಸಂಸ್ಥೆಗಳಿಗೆ ಹಸ್ತಾಂತರಿಸಲು ಹಾಗೂ ಪ್ರಾಧಿಕಾರದ ಕರಡು ವಿನ್ಯಾಸಗಳಲ್ಲಿ ಅನಧಿಕೃತವಾಗಿ ಖಾತೆ ಮಾಡಿ ನಿವೇಶನಗಳ ನೋಂದಣಿ ಮಾಡುತ್ತಿರುವುದನ್ನು ತಡೆಯಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಧಿಕಾರದ ಉದ್ಯಾನಗಳಲ್ಲಿ ಪ್ರತಿ ಭಾನುವಾರ ಸಸಿ ನೆಟ್ಟು ಬೀದರ್ ನಗರದ ಸೌಂದರ್ಯ ಹೆಚ್ಚಿಸಲು ಸಹ ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಶಾಸಕ ರಹೀಂಖಾನ್, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ್ ಮಲ್ಕಾಪುರೆ, ಅರವಿಂದಕುಮಾರ ಅರಳಿ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಸದಸ್ಯ ಕೆ.ಎಂ. ಸತೀಶ್, ರಮೇಶ ಪಾಟೀಲ, ಎನ್. ಲಿಂಗರಾಜು, ರಾಜಶೇಖರ ಮಠ, ಅರವಿಂದ ಸಿ. ಬೋರಾಳೆ, ನರೇಂದ್ರಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.