ADVERTISEMENT

ಹಾಲಹಳ್ಳಿಯಲ್ಲಿ ಸಿಪೆಟ್ ಆರಂಭಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪತ್ರ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2021, 7:43 IST
Last Updated 29 ಡಿಸೆಂಬರ್ 2021, 7:43 IST
ಈಶ್ವರ ಖಂಡ್ರೆ
ಈಶ್ವರ ಖಂಡ್ರೆ   

ಭಾಲ್ಕಿ: ತಾಲ್ಲೂಕಿನ ಹಾಲಹಳ್ಳಿಯ ಕಲಬುರ್ಗಿ ವಿಶ್ವಾವಿದ್ಯಾಲಯಕ್ಕೆ ನೀಡಿರುವ ಜಮೀನಿನಲ್ಲೇ ಕೇಂದ್ರ ಸರ್ಕಾರದಿಂದ ಬೀದರ್ ಜಿಲ್ಲೆಗೆ ಮಂಜೂರಾಗಿರುವ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕುರಿತ ರಾಷ್ಟ್ರೀಯ ಸಂಸ್ಥೆಯನ್ನು (ಸಿಪೆಟ್) ಆರಂಭಿಸುವಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಮತ್ತು ಜಿಲ್ಲೆಯ ಸಂಸದರಿಗೆ ಪತ್ರ ಬರೆದಿರುವ ಅವರು, ಕಳೆದ 3 ವರ್ಷಗಳ ಹಿಂದೆಯೇ ಜಿಲ್ಲೆಗೆ ಸಿಪೆಟ್ ಮಂಜೂರಾಗಿದ್ದರೂ, ಈ ವಿಷಯವನ್ನು ಇಷ್ಟು ವರ್ಷ ಬಹಿರಂಗ ಪಡಿಸದೆ ಮುಚ್ಚಿಟ್ಟಿರುವ ಸರ್ಕಾರದ ನಿಲುವ ಬೇಸರ ತರಿಸಿದೆ. ಈ ವಿಚಾರವನ್ನು ಜಿಲ್ಲೆಯ 6 ವಿಧಾನಸಭಾ ಸದಸ್ಯರು ಮತ್ತು 4 ವಿಧಾನ ಪರಿಷತ್ ಸದಸ್ಯರು ಸೇರಿ 10 ಶಾಸಕರ ಗಮನಕ್ಕೆ ತಂದಿದ್ದರೆ, ಅದು ಕಾರ್ಯಗತವಾಗುತ್ತಿತ್ತು. ಈ ವಿಳಂಬಕ್ಕೆ ಯಾರು ಹೊಣೆ? ಎಂದು ಪ್ರಶ್ನೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಕೇಂದ್ರ ಆರಂಭವಾಗುವುದರಿಂದ ಹಲವು ಯುವಕರಿಗೆ ನೇರ ಉದ್ಯೋಗಾವಕಾಶ ಲಭಿಸುತ್ತದೆ ಮತ್ತು ಬೀದರ್, ಕಲಬುರಗಿ ಜಿಲ್ಲೆಯ ಯುವಜನರ ಕೌಶಲಾಭಿವೃದ್ಧಿ ಮತ್ತು ಸ್ವಯಂ ಉದ್ಯೋಗಕ್ಕೂ ಸಹಕಾರಿಯಾಗುತ್ತದೆ. ಇನ್ನು ವಿಳಂಬ ಮಾಡದೆ, ಜಮೀನು ಹುಡುಕಲು ಸಮಯ ವ್ಯರ್ಥ ಮಾಡದೆ, ಹಾಲಹಳ್ಳಿಯಲ್ಲೇ ಸಿಪೆಟ್ ಅನ್ನು ತ್ವರಿತವಾಗಿ ಆರಂಭಿಸಲು ಆಗ್ರಹಿಸಿದ್ದಾರೆ.

ADVERTISEMENT

ಈ ವರ್ಷದ ಬೀದರ್ ಜಿಲ್ಲೆಯ ಸಿಪೆಟ್‌ ಕೇಂದ್ರದ ಯೋಜನೆಗೆ ತಕ್ಷಣ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಹೆಚ್ಚುವರಿ ಕ್ರಿಯಾ ಯೋಜನೆಯಲ್ಲಿ ಹಣ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಿರುವುದಾಗಿಯೂ ತಿಳಿಸಿರುವ ಅವರು ಹಾಲಹಳ್ಳಿಯಲ್ಲಿ ಸಿಪೆಟ್ ಆರಂಭಿಸಲು ಕ್ರಮ ವಹಿಸಿದರೆ ಕ್ಷೇತ್ರದ ಶಾಸಕನಾಗಿ ಸಂಪೂರ್ಣ ಬೆಂಬಲ ನೀಡುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.