ಬೀದರ್: ‘ಬರ ಪರಿಹಾರದ ಹಣವನ್ನು ತಕ್ಷಣವೇ ರೈತರಿಗೆ ಬಿಡುಗಡೆಗೊಳಿಸಬೇಕು’ ಎಂದು ‘ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ’ ಜಿಲ್ಲಾಧ್ಯಕ್ಷ ಮುಬಾಶಿರ್ ಶಿಂಧೆ ಆಗ್ರಹಿಸಿದ್ದಾರೆ.
‘ರಾಜ್ಯ ಸರ್ಕಾರ ಬರ ಘೋಷಿಸಿದೆ. ಹಣ ಬಿಡುಗಡೆಗೊಳಿಸಿದರೂ ರೈತರ ಖಾತೆಗಳಿಗೆ ಜಮೆ ಮಾಡಿಲ್ಲ. ರೈತರು ಕಚೇರಿಗಳಿಗೆ ಅಲೆದಾಡುವಂತಾಗಿದೆ. ಮುಂಗಾರು ಬೆಳೆ ನೆಲಕಚ್ಚಿರುವುದರಿಂದ ರೈತರು ತೊಂದರೆಗೆ ಒಳಗಾಗಿದ್ದಾರೆ. ಬರ ಪರಿಹಾರ ಕಾಮಗಾರಿಗಳನ್ನು ಯುದ್ಧೋಪಾದಿಯಲ್ಲಿ ಆರಂಭಿಸಬೇಕು’ ಎಂದು ಬುಧವಾರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯನ್ನು ವರ್ಷಪೂರ್ತಿ ವಿಸ್ತರಿಸಬೇಕು. ರೈತರು ಗುಳೆ ಹೋಗುವುದನ್ನು ತಪ್ಪಿಸಬೇಕು. ಬರಪೀಡಿತ ಗ್ರಾಮಗಳಲ್ಲಿ ಉಚಿತ ಶುದ್ಧ ಕುಡಿಯುವ ನೀರು ಒದಗಿಸಬೇಕು. ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕು. ಶಾಲಾ-ಕಾಲೇಜು ಮಕ್ಕಳ ಶುಲ್ಕವನ್ನು ಮನ್ನಾ ಮಾಡಬೇಕು. ಎಲ್ಲಾ ಅರ್ಹ ಬಡ ಕುಟುಂಬಗಳಿಗೆ ವರ್ಷವಿಡೀ ಉಚಿತ ಪಡಿತರ ನೀಡಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಕೆರೆ ಜೋಡಣೆ ಯೋಜನೆ ಜಾರಿಗೊಳಿಸಿ ನೀರಿನ ಸಮಸ್ಯೆಯ ಶಾಶ್ವತ ಮುಕ್ತಿಗಾಗಿ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.