ADVERTISEMENT

ನಾಟಕ ವೀಕ್ಷಣೆ ಆಸಕ್ತಿ ಬೆಳೆಸಿಕೊಳ್ಳಿ: ನಾಗಶೆಟ್ಟಿ ಬಿರಾದಾರ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 15:09 IST
Last Updated 18 ಜನವರಿ 2022, 15:09 IST
ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದಲ್ಲಿ ಕಲಾವಿದ ದೇವದಾಸ ಹಾಗೂ ತಂಡದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯದ ಕುರಿತು ಜನಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು
ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದಲ್ಲಿ ಕಲಾವಿದ ದೇವದಾಸ ಹಾಗೂ ತಂಡದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯದ ಕುರಿತು ಜನಜಾಗೃತಿ ಮೂಡಿಸುವ ಬೀದಿ ನಾಟಕ ಪ್ರದರ್ಶಿಸಿದರು   

ಜನವಾಡ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 2021-22ನೇ ಸಾಲಿನ ವಿಶೇಷ ಘಟಕ ಉಪ ಯೋಜನೆಯಡಿ ನಂದೀಶ್ವರ ನಾಟ್ಯ ಸಂಘವು ಬೀದರ್ ತಾಲ್ಲೂಕಿನ ಚಿಮಕೋಡ್ ಗ್ರಾಮದಲ್ಲಿ ಪ್ರದರ್ಶಿಸಿದ ಬೀದಿ ನಾಟಕ ಗಮನ ಸೆಳೆಯಿತು.

ಕಲಾವಿದ ದೇವದಾಸ ಚಿಮಕೋಡ ಹಾಗೂ ತಂಡದವರು ಪ್ರದರ್ಶಿಸಿದ ನಾಟಕವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೇಲಿನ ದೌರ್ಜನ್ಯದ ಮೇಲೆ ಬೆಳಕು ಚೆಲ್ಲಿತು. ಜನರಲ್ಲಿ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಿತು.

ನಾಟಕ ಆಸಕ್ತಿ ಬೆಳೆಸಿಕೊಳ್ಳಿ: ಹಲಿಗೆ ಬಾರಿಸಿ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗಶೆಟ್ಟಿ ಬಿರಾದಾರ ಅವರು, ಯುವಕರು ದುಶ್ಚಟಗಳಿಂದ ದೂರ ಇರಬೇಕು. ಸಮಾಜಕ್ಕೆ ಸಂದೇಶ ನೀಡುವ ನಾಟಕಗಳ ವೀಕ್ಷಣೆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಜಕುಮಾರ ಪಾಟೀಲ ಮಾತನಾಡಿ, ಇಂದಿನ ಯುಗದಲ್ಲಿ ಮೊಬೈಲ್‍ಫೋನ್‍ನಿಂದಾಗಿ ಯುವಜನರು ಕಲೆ, ಸಾಹಿತ್ಯ, ಸಂಗೀತ, ನಾಟಕಗಳಿಂದ ದೂರ ಸರಿಯುತ್ತಿದ್ದಾರೆ. ಹೀಗಾಗಿ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಚಿಟ್ಟಾ, ಸದಸ್ಯ ಕಾಮಶೆಟ್ಟಿ ಸಿರಗೊಂಡೆ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶ್ರೀಕಾಂತ ಕಂದಗೂಳೆ ಉಪಸ್ಥಿತರಿದ್ದರು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.