ADVERTISEMENT

ಬಿಜೆಪಿ ಗದ್ದಲದ ನಡುವೆ ಬೀದರ್‌ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 13:23 IST
Last Updated 7 ಫೆಬ್ರುವರಿ 2026, 13:23 IST
<div class="paragraphs"><p>ಬಿಜೆಪಿ ಗದ್ದಲದ ನಡುವೆ ಬೀದರ್‌ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ</p></div>

ಬಿಜೆಪಿ ಗದ್ದಲದ ನಡುವೆ ಬೀದರ್‌ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ

   

ಬೀದರ್‌: ಬಿಜೆಪಿಯ ಪ್ರತಿಭಟನೆ, ಗದ್ದಲದ ನಡುವೆ ನಗರದ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಶನಿವಾರ ದೇಗುಲದ ಆವರಣದಲ್ಲಿ ಚಾಲನೆ ನೀಡಲಾಯಿತು.

2024ರ ಮಾರ್ಚ್‌ 7ರಂದು ಪ್ರಧಾನಿ ನರೇಂದ್ರ ಮೋದಿಯವರು ವರ್ಚುವಲ್‌ ಮೂಲಕ ದೇಗುಲದ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಾಮಗಾರಿ ಉತ್ತಮವಾಗಿ ನಡೆಯಲಿ ಹಾಗೂ ಪ್ರಧಾನಿಯವರ ಆರೋಗ್ಯಕ್ಕೆ ಹಾರೈಸಿ ಜಿಲ್ಲಾ ಬಿಜೆಪಿ ಪಾಪನಾಶಿನಿಯಲ್ಲಿ ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ADVERTISEMENT

ಆದರೆ, ಬೆಳಿಗ್ಗೆ 11ಕ್ಕೆ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯು ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕೊಡುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾನೂನು ಸುವ್ಯವಸ್ಥೆ ಹದಗೆಡಬಹುದೆಂದು ಬಿಜೆಪಿಯವರಿಗೆ ಪೂಜೆ ಸಲ್ಲಿಕೆಗೆ ಅವಕಾಶ ನಿರಾಕರಿಸಲಾಯಿತು.

ಪಾಪನಾಶ ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸುವ ಎರಡೂ ಮಾರ್ಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಳವಡಿಸಿ, ಬಿಗಿ ಬಂದೋಬಸ್ತ್‌ ಮಾಡಿದರು. ಬಿಜೆಪಿಯ ನಾಯಕರು, ಕಾರ್ಯಕರ್ತರನ್ನು ಅಲ್ಲೇ ತಡೆದರು. ಪೊಲೀಸರ ಈ ಕ್ರಮವನ್ನು ಖಂಡಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ‘ಜೈ ಶ್ರೀರಾಮ್‌’, ‘ಜೈ ಮಹಾದೇವ್‌’, ‘ಈಶ್ವರ ಖಂಡ್ರೆ, ಸಾಗರ ಖಂಡ್ರೆಯವರಿಗೆ ದಿಕ್ಕಾರ’ ಎಂದು ಘೋಷಣೆಗಳನ್ನು ಹಾಕಿದರು. ಈ ವೇಳೆ ಪೊಲೀಸರು ಹಾಗೂ ಬಿಜೆಪಿ ಮುಖಂಡರ ನಡುವೆ ವಾಗ್ವಾದವೂ ನಡೆಯಿತು.

‘ಒಂದುವೇಳೆ ನಮಗೆ ಪೂಜೆ ಸಲ್ಲಿಸಲು ಅವಕಾಶ ಕೊಡದಿದ್ದರೆ ಬೇರೆಯವರಿಗೂ ನೀಡಬಾರದು. ದೇಗುಲದೊಳಗೆ ಬೇರೆಯವರನ್ನು ಬಿಟ್ಟರೆ ನಾವು ಸುಮ್ಮನಿರಲ್ಲ’ ಎಂದು ಬಿಜೆಪಿ ನಾಯಕರು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಇದೇ ವೇಳೆ ನೌಬಾದ್‌ ರಸ್ತೆ ಮೂಲಕ ಪಾಪನಾಶ ಕಡೆಗೆ ಬಂದ ಈಶ್ವರ ಖಂಡ್ರೆ, ಸಾಗರ ಖಂಡ್ರೆಯವರ ಬೆಂಬಲಿಗರಿಗೆ ದೇಗುಲದೊಳಗೆ ಬಿಡುತ್ತಿರುವುದಕ್ಕೆ ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸಿದರು. ಇದರ ವಿರುದ್ಧ ಘೋಷಣೆಗಳನ್ನು ಹಾಕಿದರು. ರಸ್ತೆತಡೆದು ಪ್ರತಿಭಟನೆಗೆ ಮುಂದಾದರು. ಇದರಿಂದ ಬೀದರ್‌–ಭಾಲ್ಕಿ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತು, ಸಂಚಾರ ಅಸ್ತವ್ಯಸ್ತಗೊಂಡಿತು. ಆನಂತರ ಪೊಲೀಸರು ಬಿಜೆಪಿ ನಾಯಕರು, ಕಾರ್ಯಕರ್ತರನ್ನು ವಶಕ್ಕೆ ಪಡೆದು, ವ್ಯಾನ್‌ನಲ್ಲಿ ಬೇರೆಡೆ ಕರೆದೊಯ್ದರು.

ಕೇಂದ್ರದ ಮಾಜಿಸಚಿವ ಭಗವಂತ ಖೂಬಾ, ಶಾಸಕರಾದ ಡಾ. ಶೈಲೇಂದ್ರ ಕೆ. ಬೆಲ್ದಾಳೆ, ಡಾ. ಸಿದ್ದಲಿಂಗಪ್ಪ ಪಾಟೀಲ್‌, ವಿಧಾನ ಪರಿಷತ್‌ ಸದಸ್ಯ ಎಂ.ಜಿ. ಮುಳೆ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಉಪಾಧ್ಯಕ್ಷ ವಿಜಯಕುಮಾರ್‌ ಪಾಟೀಲ್‌ ಗಾದಗಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ರೆಡ್ಡಿ, ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ, ಮಾಜಿಶಾಸಕ ಪ್ರಕಾಶ್‌ ಖಂಡ್ರೆ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಉಲ್ಲಾಸಿನಿ ಮುದಾಳೆ ಸೇರಿದಂತೆ ಇತರರನ್ನು ವಶಕ್ಕೆ ಪಡೆದರು. ವಾತಾವರಣ ತಿಳಿಗೊಂಡ ನಂತರ ವಾಹನ ಸಂಚಾರ ಆರಂಭಗೊಂಡಿತು. ಸಹಜ ಸ್ಥಿತಿಗೆ ಬರಲು ಅರ್ಧಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡಿತು.

ಇದಾದ ಅರ್ಧ ಗಂಟೆ ನಂತರ ಪಾಪನಾಶ ದೇವಸ್ಥಾನದ ಪ್ರಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಸಂಸದ ಸಾಗರ ಖಂಡ್ರೆ ಅವರು ಕೇಂದ್ರ ಪ್ರವಾಸೋದ್ಯಮ ಇಲಾಖೆಯ ‘ಪ್ರಸಾದ’ ಯೋಜನೆಯಡಿ ಮಂಜೂರಾದ ₹22.41 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಇಬ್ಬರು, ಶಿವಲಿಂಗಕ್ಕೆ ಪೂಜೆ ಸಲ್ಲಿಸಿದರು.

ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ. ನಾರಾಯಣರಾವ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್‌ ಬದೋಲೆ, ಬೀದರ್‌ ಮಹಾನಗರ ಪಾಲಿಕೆ ಆಯುಕ್ತ ಮುಕುಲ್‌ ಜೈನ್‌, ಅಧ್ಯಕ್ಷ ಮುಹಮ್ಮದ್‌ ಗೌಸ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಇದ್ದರು.

‘ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ಸಲ್ಲದು’

‘ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜಕೀಯ ತರಬಾರದು. ದೇವಸ್ಥಾನದ ಅಭಿವೃದ್ಧಿಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ. ಉತ್ತಮ ಅಭಿವೃದ್ಧಿ ಮಾಡುತ್ತಿದ್ದೀರಿ ಎಂದು ನಮ್ಮ ವಿರೋಧಿಗಳು ಹೇಳಬಹುದು ಅಂದುಕೊಂಡಿದ್ದೆ. ಅವರು ಇದರಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿದಿದ್ದೆ. ಆದರೆ, ಅವರು ಈ ರೀತಿ ಮಾಡುತ್ತಾರೆ ಎಂಬುದಾಗಿ ಅಂದುಕೊಂಡಿರಲಿಲ್ಲ’ ಎಂದು ಸಂಸದ ಸಾಗರ ಖಂಡ್ರೆ ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರವಿದೆ. ಕಾಮಗಾರಿಗಳಿಗೆ ಟೆಂಡರ್‌ ಆಗಿ, ಚಾಲನೆ ಕೊಡಲಾಗುತ್ತದೆ. ಬಿಜೆಪಿ ಶಾಸಕರು ಚಾಲನೆ ಕೊಡುವುದಿಲ್ಲವೇ? ಅವರು ಕೊಟ್ಟರೆ ಸರಿ. ನಾನು ಮಾಡಿದರೆ ಅದೇಗೆ ತಪ್ಪಾಗುತ್ತದೆ ಎಂದು ಪ್ರಶ್ನಿಸಿದರು.

‘ಘೋಷಣೆ ಅನೇಕ, ಕಾರ್ಯಗತ ಮುಖ್ಯ’

‘ಅನೇಕ ಯೋಜನೆಗಳನ್ನು ಘೋಷಣೆ ಮಾಡಲಾಗುತ್ತದೆ. ಆದರೆ, ಅವುಗಳನ್ನು ಕಾರ್ಯಗತಗೊಳಿಸುವುದು ಬಹಳ ಮುಖ್ಯ. 2024ರ ಮಾರ್ಚ್‌ 7ರಂದು ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಅದು ಕಾರ್ಯಗತ ಆಗಿರಲಿಲ್ಲ. ಸಾಗರ ಖಂಡ್ರೆ ಅವರು ಸಂಸದರಾದ ನಂತರ ಪ್ರಯತ್ನಿಸಿ ಕಾರ್ಯಗತಗೊಳಿಸುತ್ತಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

15 ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿತ್ತು. ಆದರೆ, ಆ ಕೆಲಸ ಆಗಿರಲಿಲ್ಲ. ನಾನು ಸಚಿವನಾದ ನಂತರ ಚಾಲನೆ ಕೊಟ್ಟಿದ್ದೇನೆ. ಈಗ ಅದರ ನಿರ್ಮಾಣ ಕೆಲಸ ನಡೆಯುತ್ತಿದೆ. ಪಾಪನಾಶ ಕಾಮಗಾರಿ ಕೂಡ ನನೆಗುದಿಗೆ ಬಿದ್ದಿತ್ತು. ಸಾಗರ ಖಂಡ್ರೆ ಅವರು ಪ್ರಯತ್ನ ಪಟ್ಟು ಮಾಡಿಸಿದ್ದಾರೆ. ಕೆಲಸ ಮಾಡಿದವರಿಗೆ ಹೆಸರು. ಕೆಲಸ ಮಾಡದವರಿಗೆ ಜನ ಮನೆಯಲ್ಲಿ ಕೂರಿಸುತ್ತಾರೆ. ನಿಮ್ಮ ದುರಹಂಕಾರದ ವರ್ತನೆಗಾಗಿಯೇ ಜನ ನಿಮ್ಮನ್ನು ಮನೆಯಲ್ಲಿ ಕೂರಿಸಿದ್ದಾರೆ. ಈಗ ಜ್ಞಾನೋದಯವಾದವರಂತೆ ವರ್ತಿಸುತ್ತಿದ್ದಾರೆ. ಈಗ ನಿಮ್ಮ ಮಾತು ಯಾರೂ ನಂಬಲ್ಲ ಎಂದು ಭಗವಂತ ಖೂಬಾ ಅವರ ಹೆಸರು ಪ್ರಸ್ತಾಪಿಸದೇ ಕುಟುಕಿದರು.

ದೇವಸ್ಥಾನದ ಅಭಿವೃದ್ಧಿಯಲ್ಲಿ ಏನೇನಿದೆ?

* ಕೇಂದ್ರ ಸರ್ಕಾರದ ‌‘ಪ್ರಸಾದ’ ಯೋಜನೆಯಡಿ ₹22.41 ಕೋಟಿ ಅನುದಾನ

* ಶೌಚಾಲಯ, ವಾಹನ ನಿಲುಗಡೆ ಪ್ರದೇಶ ಅಭಿವೃದ್ಧಿ

* ಪ್ರಸಾದ ನಿಲಯ, ವಿಶ್ರಾಂತಿ ಗೃಹ, ಬಯಲು ರಂಗಮಂದಿರ

* ಅನ್ನದಾಸೋಹ ಭವನ, ಸ್ವಾಗತ ಕಮಾನು, ಜಾತ್ರೆ ಸಂಕೀರ್ಣ

* ದೇವಸ್ಥಾನದ ಪ್ರವೇಶ ದ್ವಾರ, ವಾಕ್‌ ವೇ, ಕಾಂಪೌಂಡ್ ನಿರ್ಮಾಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.