ADVERTISEMENT

ಬೀದರ್‌: ಧರ್ಮಸ್ಥಳದ ವಿರುದ್ಧ ಒಳಸಂಚು ಆರೋಪ, ತನಿಖೆಗೆ ಆಗ್ರಹ

ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಪ್ರತಿಭಟನಾ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 14:05 IST
Last Updated 12 ಆಗಸ್ಟ್ 2025, 14:05 IST
<div class="paragraphs"><p>ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಬೀದರ್‌ನಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು</p></div>

ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ಬೀದರ್‌ನಲ್ಲಿ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು

   

ಬೀದರ್‌: ಮಂಜುನಾಥ ಸ್ವಾಮಿಯ ನೆಲೆಬೀಡಾಗಿರುವ ಪವಿತ್ರ ಧಾರ್ಮಿಕ ಕೇಂದ್ರ ಧರ್ಮಸ್ಥಳದ ವಿರುದ್ಧ ಒಳಸಂಚು ನಡೆಸಲಾಗುತ್ತಿದ್ದು, ಒಳಸಂಚಿನ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಧರ್ಮಸ್ಥಳ ಭಕ್ತಾಭಿಮಾನಿಗಳ ವೇದಿಕೆಯಿಂದ ನಗರದಲ್ಲಿ ಮಂಗಳವಾರ ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು.

ನಗರದ ಬರೀದ್‌ ಷಾಹಿ ಉದ್ಯಾನದಿಂದ ಗುರುದ್ವಾರ ಸಮೀಪದ ತಾತ್ಕಾಲಿಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿ, ಮನವಿ ಪತ್ರ ಸಲ್ಲಿಸಲಾಯಿತು.

ADVERTISEMENT

ಅನಾಮಿಕ ವ್ಯಕ್ತಿಯನ್ನು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಒಳಸಂಚು ನಡೆಸಲಾಗುತ್ತಿದೆ. ಗಿರೀಶ್‌ ಮಟ್ಟೆಣ್ಣನವರ, ಮಹೇಶ ತಿಮ್ಮರೋಡಿ, ಜಯಂತ್‌ ಟಿ. ಹಾಗೂ ಸಮೀರ್‌ ಎಂ.ಡಿ. ದೇಗುಲದ ಪಾವಿತ್ರ್ಯತೆಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ಈ ಒಳಸಂಚಿನ ತನಿಖೆಗೆ ರಾಜ್ಯ ಸರ್ಕಾರ ತನಿಖಾ ತಂಡ ರಚಿಸಬೇಕು ಎಂದು ಆಗ್ರಹಿಸಿದರು.

ಮಂಜುನಾಥ ಸ್ವಾಮಿ ದೇವಾಲಯವು ನಾಡಿನ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಹಾಲಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಸಮಾಜೋಧಾರ್ಮಿಕ ಕೆಲಸ ಮಾಡುತ್ತಿದ್ದಾರೆ. ನಿತ್ಯ ದೇಗುಲಕ್ಕೆ ಆಗಮಿಸುವ 1 ಲಕ್ಷ ಜನರಿಗೆ ಅನ್ನದಾಸೋಹ ಮಾಡುತ್ತಿದ್ದಾರೆ. ಯಾವುದೇ ಮತ, ಭೇದವಿಲ್ಲದೆ ಎಲ್ಲರನ್ನೂ ಸಮಾನರಾಗಿ ಕಾಣುತ್ತಿದ್ದಾರೆ. ಆದರೆ, ಇದರ ವಿರುದ್ಧ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದ್ದು, ಇದು ಖಂಡನಾರ್ಹ ಎಂದರು.

ಸದ್ಯ ನಡೆಯುತ್ತಿರುವ ಎಸ್‌ಐಟಿ ತನಿಖೆಯನ್ನು ನಿಗದಿತ ಅವಧಿಯೊಳಗೆ ಮುಗಿಸಿ, ಎಲ್ಲ ರೀತಿಯ ಗೊಂದಲಗಳಿಗೆ ತೆರೆ ಎಳೆಯಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿರುವ ಅಪಪ್ರಚಾರ ತಡೆಯಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಥ ಪಾಟೀಲ, ನಗರ ಮಂಡಲ ಅಧ್ಯಕ್ಷ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಮುಖಂಡರಾದ ಬಸವರಾಜ ಆರ್ಯ, ಶಿವು‌ ಲೋಖಂಡೆ, ಬಾಬುವಾಲಿ, ವೀರಶೆಟ್ಟಿ ಖ್ಯಾಮಾ, ಸೋಮನಾಥ ಅಷ್ಟೂರೆ, ಅಶೋಕ ಹೊಕ್ರಾಣ ಮತ್ತಿತರರು ಪಾಲ್ಗೊಂಡಿದ್ದರು.

ಧರ್ಮಸ್ಥಳ ಪವಿತ್ರ ಕ್ಷೇತ್ರದ ವಿರುದ್ಧ ಮಾಡುತ್ತಿರುವ ಅಪಪ್ರಚಾರ ಖಂಡನಾರ್ಹ. ಇದಕ್ಕೆ ಕಳಂಕ ತರಲು ಯತ್ನಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ವಿರೂಪಾಕ್ಷ, ಜಿಲ್ಲಾ ಸಂಚಾಲಕ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ
ಧರ್ಮಸ್ಥಳ ಅಷ್ಟೇ ಅಲ್ಲ, ಪವಿತ್ರ ಹಿಂದೂ ಧಾರ್ಮಿಕ ಸ್ಥಳಗಳ ಬಗ್ಗೆ ಒಳಸಂಚು, ಅಪಪ್ರಚಾರ ಮಾಡಲಾಗುತ್ತಿದೆ. ಇದು ತೀವ್ರ ಖಂಡನಾರ್ಹವಾದುದು.
ಈಶ್ವರ ಸಿಂಗ್‌ ಠಾಕೂರ್‌, ಬಿಜೆಪಿ ಮುಖಂಡ

ಧರ್ಮಸ್ಥಳ ಪಾವಿತ್ರ‍್ಯಕ್ಕೆ ಧಕ್ಕೆ: ಭಗವಂತ ಖೂಬಾ

ಬೀದರ್: ‘ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರ ಸಮಸ್ತ ಮಾನವ ಕುಲಕೋಟಿಗೆ ಅತ್ಯಂತ ಶೃದ್ಧೆ, ಭಕ್ತಿಯುಳ್ಳ ಪವಿತ್ರ ಧಾರ್ಮಿಕ ಕೇಂದ್ರವಾಗಿದೆ. ಆದರೆ ಇಲ್ಲಿ ಸರ್ಕಾರ ಅಸ್ಥಿಪಂಜರ ಶೋಧ ನೆಪದಲ್ಲಿ ಹಿಂದೂ ವಿರೋಧಿ ಧೋರಣೆ ತಾಳಿ, ಧರ್ಮಸ್ಥಳದ ಪಾವಿತ್ರ‍್ಯಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಶಾಸಕ ಡಾ. ಶೈಲೇಂದ್ರ ಕೆ. ಬೆಲ್ದಾಳೆ ಹಾಗೂ ಕೇಂದ್ರದ ಮಾಜಿಸಚಿವ ಭಗವಂತ ಖೂಬಾ ಟೀಕಿಸಿದ್ದಾರೆ.

‘ಧರ್ಮ ಸ್ಥಳದಲ್ಲಿ ನೂರಾರು ಹೆಣಗಳು ಹೂತಿರುವೆ. ಅಸ್ಥಿಪಂಜರ ಸಿಗುತ್ತವೆ ಎಂದು ಯಾರೋ ಅನಾಮಿಕ ಹೇಳಿದ ಮಾತ್ರಕ್ಕೆ ಸರ್ಕಾರ ಆತುರಾತುರ ವಿಶೇಷ ತನಿಖಾ ತಂಡವನ್ನೇ (ಎಸ್ಐಟಿ) ರಚಿಸಿದೆ. ಎರಡ್ಮೂರು ವಾರಗಳಿಂದ ನಡೆದ ಶೋಧದಲ್ಲಿ ಏನು ಸಿಕ್ಕಿದೆ? ತನಿಖೆ ಹೆಸರಿನಲ್ಲಿ ಸರ್ಕಾರ ಯಾವ ಘನಂದಾರಿ ಸಾಧನೆ ಮಾಡಿದೆ? ಅನಾಮಿಕ ಹೇಳಿದಂತೆ ಏನೂ ಸಿಗಲಿಲ್ಲ. ತಕ್ಷಣ ಅನಾಮಿಕನ ವಿರುದ್ಧ ಕ್ರಮ ಕೈಗೊಂಡು, ಆತನ ಹಿನ್ನೆಲೆ, ಯಾರು ಹಿಂದಿದ್ದಾರೆ ಎಂಬ ನಿಜಬಣ್ಣ ಬಯಲು ಮಾಡಬೇಕು. ಹಿಂದೂ ವಿರೋಧಿ ನೀತಿಯಿಂದ ಕಾಂಗ್ರೆಸ್‌ ಸರ್ಕಾರ ಹಿಂದೆ ಸರಿಯಬೇಕು. ಇಲ್ಲವಾದರೆ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.