ಬೀದರ್: ‘ಧರ್ಮಸ್ಥಳದ ಅರಣ್ಯ ಪ್ರದೇಶದಲ್ಲಿ ಶವಕ್ಕಾಗಿ ಹುಡುಕಾಟ ನಡೆದಿದ್ದು, ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ’ ಎಂದು ಅರಣ್ಯ, ಪರಿಸರ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಈಗಾಗಲೇ ತನಿಖೆ ನಡೆಯುತ್ತಿದೆ. ವರದಿ ಬಂದ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆರೋಪಗಳು- ಪ್ರತ್ಯಾರೋಪಗಳು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ. ಉತ್ತಮ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ನಗರದಲ್ಲಿ ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಚುನಾವಣೆಯಲ್ಲಿ ಮತಗಳನ್ನತನದ ಆರೋಪದ ಕುರಿತು ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಚುನಾವಣಾ ಆಯೋಗ ಹಾಗೂ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮತಗಳನ್ನು ಕದ್ದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಕೆಲಸ ಮಾಡಿದ್ದಾರೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಮತಗಳ ಏರು- ಪೆರು ನಡೆದಿರುವುದು ತಿಳಿದು ಬಂದಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಆ.5ರಂದು ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಉಳಿವಿಗಾಗಿ ನಿರಂತರ ಹೋರಾಟ ಮಾಡುತ್ತೇವೆ. ಪಾರದರ್ಶಕವಾಗಿ ಚುನಾವಣೆ ನಡೆದರೆ ಜಾತ್ಯತೀತ ಶಕ್ತಿಗಳು ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.