ADVERTISEMENT

ಎಸ್‌ಎಜಿಗಳಿಗೆ ಲಾಭಾಂಶ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 5:22 IST
Last Updated 18 ಜೂನ್ 2021, 5:22 IST
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಶಿವರಾಯ ಫ್ರಭು ಹಾಗೂ ಶ್ರೀ ಜೋತಿರ್ಮಯಾನಂದ ಸ್ವಾಮೀಜಿ ಜಂಟಿಯಾಗಿ ಸ್ವಸಹಾಯ ಸಂಘದ ಸದಸ್ಯೆಯರಿಗೆ ಲಾಭಾಂಶ ವಿತರಿಸಿದರು
ಬೀದರ್‌ನ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಶಿವರಾಯ ಫ್ರಭು ಹಾಗೂ ಶ್ರೀ ಜೋತಿರ್ಮಯಾನಂದ ಸ್ವಾಮೀಜಿ ಜಂಟಿಯಾಗಿ ಸ್ವಸಹಾಯ ಸಂಘದ ಸದಸ್ಯೆಯರಿಗೆ ಲಾಭಾಂಶ ವಿತರಿಸಿದರು   

ಬೀದರ್‌: ‘ಬೀದರ್ ಜಿಲ್ಲೆಯಲ್ಲಿ 13 ಸಾವಿರ ಸಂಘಗಳಿಗೆ ಒಟ್ಟು ₹5 ಕೋಟಿ ಲಾಭಾಂಶ ವಿತರಣೆ ಮಾಡಲಾಗುತ್ತಿದೆ. ಸಂಘಗಳ ಸದಸ್ಯರು ಉತ್ತಮ ವ್ಯವಹಾರ ನಡೆಸಿ ₹30ರಿಂದ 40 ಸಾವಿರ ಲಾಭ ಪಡೆದುಕೊಂಡಿದ್ದಾರೆ’ ಎಂದು ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಪ್ರಾದೇಶಿಕ
ವಿಭಾಗದ ನಿರ್ದೇಶಕ ಶಿವರಾಯ ಫ್ರಭು ಹೇಳಿದರು.

ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ ಟ್ರಸ್ಟ್ ವತಿಯಿಂದ ಬೀದರ್ ತಾಲ್ಲೂಕಿನ ಸ್ವಸಹಾಯ ಸಂಘಗಳಿಗೆ ಐದು ವರ್ಷದ ಲಾಭಾಂಶ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದ 15 ಸಾವಿರ ಕುಟುಂಬಗಳಿಗೆ ಆಹಾರಧಾನ್ಯ ಕಿಟ್ ವಿತರಿಸಲಾಗಿದೆ.
ಜಿಲ್ಲೆಗೆ 5 ಟನ್ ಆಕ್ಸಿಜನ್ ಪೂರೈಕೆ, 5 ಆಮ್ಲಜನಕ ಸಾಂದ್ರಕಗಳನ್ನು ಕೊಡಲಾಗಿದೆ’ ಎಂದು ತಿಳಿಸಿದರು.

ADVERTISEMENT

ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತಾನಾಡಿ, ‘ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಮೂಲಕ ಜಿಲ್ಲೆಯ ಮಹಿಳೆಯರ ಆರ್ಥಿಕ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಇದು ಕುಟುಂಬದ ಅಭಿವೃಧ್ಧಿಗೆ ನೆರವಾಗಿದೆ’ ಎಂದು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಐದು ವರ್ಷಗಳ ಹಿಂದೆ ಬೀದರ್ ಜಿಲ್ಲೆಗೆ ಪಾದಾರ್ಪಣೆ ಮಾಡಿದೆ. ಆರಂಭದಲ್ಲಿ ಅನುಮಾನದಿಂದ ನೋಡಿದ ಜನರೇ ಇಂದು ಸಂಘಗಳಲ್ಲಿ ಸೇರಿಕೊಂಡು ಪ್ರಗತಿ ಸಾಧಿಸಿದ್ದಾರೆ’ ಎಂದರು.

ಕೆನರಾ ಬ್ಯಾಂಕ್ ಬೀದರ್ 2ನೇ ಮುಖ್ಯ ಶಾಖೆಯ ಮುಖ್ಯ ವ್ಯವಸ್ಥಾಪಕ ಶಿವಪ್ರಸಾದ ಮಾತನಾಡಿ, ‘ಕೆನರಾ ಬ್ಯಾಂಕ್ ಮೂಲಕ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆ ಸ್ವ ಸಹಾಯ ಸಂಘಗಳಿಗೆ ಪ್ರಗತಿ ನಿಧಿ ವಿತರಿಸಲಾಗುತ್ತಿದೆ. ಸದಸ್ಯರು ಇದರ ಪೂರ್ಣ ಲಾಭ ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಬೀದರ್ ತಾಲ್ಲೂಕಿನ ಯೋಜನಾಧಿಕಾರಿ ರಮೇಶ ನಾಯ್ಕ, ಹಣಕಾಸು ಪ್ರಬಂಧಕ ಯಮನೂರಪ್ಪ, ಕಚೇರಿ ಸಹಾಯಕ ರೋಹನ್, ಸೇವಾ ಪ್ರತಿನಿಧಿಗಳಾದ ಮಂಜುಳಾ, ಶಾಂತಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.