ADVERTISEMENT

ಬೀದರ್ | ನಿರ್ಣಾ ಗ್ರಾಮದಲ್ಲಿ 250 ಹಂದಿಗಳ ಸಾವು: ತಜ್ಞರಿಂದ ರಕ್ತದ ಮಾದರಿ ಸಂಗ್ರಹ

ರಕ್ತ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ ಪಶು ವೈದ್ಯರು

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 10:29 IST
Last Updated 27 ಜುಲೈ 2020, 10:29 IST
ಮರಿಗಳಿಗೆ ಹಾಲುಣಿಸುತ್ತಿರುವ ಹಂದಿ (ಸಂಗ್ರಹ ಚಿತ್ರ)
ಮರಿಗಳಿಗೆ ಹಾಲುಣಿಸುತ್ತಿರುವ ಹಂದಿ (ಸಂಗ್ರಹ ಚಿತ್ರ)   

ಚಿಟಗುಪ್ಪ: ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಇದುವರೆಗೂ 250ಕ್ಕೂ ಹೆಚ್ಚು ಹಂದಿಗಳು ಮೃತಪಟ್ಟಿದ್ದು, ಪಶು ಸಂಗೋಪನಾ ಇಲಾಖೆ ಅಧಿಕಾರಿಗಳ ಹಾಗೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.

‘ಮೃತ ಕೆಲ ಹಂದಿಗಳ ಕಳೆಬರ ತಪಾಸಣೆ ನಡೆಸಲಾಯಿತು. ಹಂದಿ ಜ್ವರ ಹಂದಿಯಿಂದ ಹಂದಿಗೆ ಮಾತ್ರ ಹರಡುವ ಕಾಯಿಲೆ. ಅದು ಮನುಷ್ಯರಿಗೆ ಹರಡುವುದಿಲ್ಲ. ಸಾರ್ವಜನಿಕರು ಈ ಕುರಿತು ಆತಂಕಪಡುವ ಅಗತ್ಯವಿಲ್ಲ’ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಗೋವಿಂದ ಹೇಳಿದರು.

‘ಸಾಮಾನ್ಯವಾಗಿ ಮನುಷ್ಯರಂತೆ ಹಂದಿಗಳಿಗೂ ಜ್ವರ ಬರುತ್ತದೆ. ಅವು ಒಂದರ ಮೇಲೊಂದು ಬಿದ್ದುಕೊಂಡು ಒಂದೇ ಕಡೆ ವಾಸ ಮಾಡುವ ಹಾಗೂ ಕಲುಷಿತ ಆಹಾರ ಸೇವಿಸುವ ಕಾರಣ ರೋಗ ಹರಡಿ ಸಾಯುತ್ತವೆ. ಒಂದು ವಾರದಲ್ಲಿಯೇ ನೈಸರ್ಗಿಕವಾಗಿ ಚೇತರಿಸಿಕೊಳ್ಳುವ ಶಕ್ತಿ ಅವುಗಳಿಗೆ ಇದೆ. ಹಂದಿಗಳಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಜನರು ಭಯಪಡುವ ಅಗತ್ಯ ಇಲ್ಲ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

‘ಗ್ರಾಮ ಪಂಚಾಯಿತಿ ನೆರವಿನಿಂದ ಇಲಾಖೆ ವೈದ್ಯರು ಹಂದಿಗಳ ಶವ ಪರೀಕ್ಷೆ ನಡೆಸಿ ರಕ್ತ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಕಳಿಸಿಕೊಟ್ಟಿದ್ದಾರೆ. ಎರಡು ದಿನಗಳಲ್ಲಿ ಮಾಹಿತಿ ಲಭ್ಯವಾಗಲಿದೆ. ನಿರ್ಣಾ ಗ್ರಾಮದಲ್ಲಿ ಹಂದಿಗಳನ್ನು ಹಿಡಿಯಲು ಅವುಗಳ ಮಾಲೀಕರು ಸಹಕರಿಸುತ್ತಿಲ್ಲ’ ಎಂದು ತಿಳಿಸಿದ್ದಾರೆ.

ಪಶು ವೈದ್ಯಾಧಿಕಾರಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.