ADVERTISEMENT

ಮನೆ ಬಾಗಿಲಿಗೆ ಬಂದ ಕುಡಿಯುವ ನೀರು

ಹಿರೇನಾಗಾಂವಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದ ತಂಡ ಭೇಟಿ

​ಪ್ರಜಾವಾಣಿ ವಾರ್ತೆ
Published 14 ಮೇ 2019, 13:58 IST
Last Updated 14 ಮೇ 2019, 13:58 IST
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ(ಬಿ) ಸಮೀಪದ ಮುಲ್ಲಾಮಾರಿ ಜಲಾಶಯದಿಂದ ಹಿರೇನಾಗಾಂವ ವರೆಗೆ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಸ್ಥಳವನ್ನು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಪರಿಶೀಲಿಸಿದರು
ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ(ಬಿ) ಸಮೀಪದ ಮುಲ್ಲಾಮಾರಿ ಜಲಾಶಯದಿಂದ ಹಿರೇನಾಗಾಂವ ವರೆಗೆ ಕುಡಿಯುವ ನೀರಿನ ಪೈಪ್‌ಲೈನ್‌ ಅಳವಡಿಸುವ ಕಾಮಗಾರಿ ಸ್ಥಳವನ್ನು ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ ಪರಿಶೀಲಿಸಿದರು   

ಬೀದರ್‌: ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಬಸವಕಲ್ಯಾಣ ತಾಲ್ಲೂಕಿನ ಹಿರೇನಾಗಾಂವ ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿ ಜನರ ಸಮಸ್ಯೆ ಆಲಿಸಿತು. ಅಷ್ಟೇ ಅಲ್ಲ; ಮನೆಗಳ ಮುಂದೆ ಟ್ಯಾಂಕರ್‌ಗಳನ್ನು ನಿಲ್ಲಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಿತು.

‘ನೀರಿಗಾಗಿ ಗ್ರಾಮಸ್ಥರ ಪರದಾಟ’ ಶೀರ್ಷಿಕೆಯಡಿ ಮಂಗಳವಾರ ಪ್ರಜಾವಾಣಿಯಲ್ಲಿ ಪ್ರಕಟವಾದ ವಿಶೇಷ ವರದಿಗೆ ಸ್ಪಂದಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಮಹಾಂತೇಶ ಬೀಳಗಿ, ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ್ ಅವರು ಗ್ರಾಮದ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸಿದರು.

ಗ್ರಾಮದ ಹೊರವಲಯದಲ್ಲಿರುವ ತೆರೆದ ಬಾವಿಗೆ ನೀರು ಸುರಿಯುತ್ತಿದ್ದ ಟ್ಯಾಂಕರ್‌ ಮನೆಗಳ ಮುಂದೆ ಬಂದು ನಿಂತಾಗ ಗ್ರಾಮಸ್ಥರು ಮುಗಿಬಿದ್ದು ನೀರು ಪಡೆದುಕೊಳ್ಳಲು ಶುರು ಮಾಡಿದರು. ಇದರಿಂದ ತಳ್ಳಾಟ, ನೂಕಾಟ ಶುರುವಾಯಿತು. ‘ನಮಗೆ ತೊಂದರೆಯಾದರೂ ಚಿಂತೆಯಿಲ್ಲ ಊರ ಹೊರಗಿನ ಬಾವಿಗೆ ನೀರು ಸುರಿಯಿರಿ’ ಎಂದು ಕೆಲ ಪುರುಷರು ಪಟ್ಟು ಹಿಡಿದರು. ಮಹಿಳೆಯರು ಗ್ರಾಮದಲ್ಲೇ ಕುಡಿಯುವ ನೀರು ಕೊಡಿ ಎಂದು ಒತ್ತಾಯಿಸಿದರು. ಗೊಂದಲ ಹೆಚ್ಚಾದಾಗ ಪೊಲೀಸರನ್ನು ಸ್ಥಳಕ್ಕೆ ಕರೆಸಬೇಕಾಯಿತು.

ADVERTISEMENT

‘ಜಿಲ್ಲಾ ಆಡಳಿತ ಹಿರೇನಾಗಾಂವ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಿದೆ. ₹ 40 ಲಕ್ಷ ವೆಚ್ಚದಲ್ಲಿ ಮುಲ್ಲಾಮಾರಿ ಜಲಾಶಯದಿಂದ ಗ್ರಾಮದವರೆಗೂ ಪೈಪ್‌ಲೈನ್‌ ಅಳವಡಿಸಿ ಮನೆ ಮನೆಗೆ ನಲ್ಲಿ ಮೂಲಕ ನೀರು ಕೊಡಲಾಗುವುದು’ ಎಂದು ಸಿಇಒ ಭರವಸೆ ನೀಡಿದರು.

‘ಕಾಮಗಾರಿ ಪೂರ್ಣಗೊಳ್ಳುವವರೆಗೂ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುವುದು. ಗ್ರಾಮದ ಬಾವಿ, ಜಲಕುಂಭಗಳಲ್ಲೂ ನೀರು ಸಂಗ್ರಹಿಸಲಾಗುವುದು. ಅಲ್ಲಿಂದಲೂ ನೀರು ಪಡೆಯಬಹುದು’ ಎಂದು ತಿಳಿಸಿದರು.

‘ಮಳೆಗಾಲ ಆರಂಭವಾಗುವ ಮೊದಲು ಕುಡಿಯುವ ನೀರಿನ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬೀಳಗಿ ಅವರು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರಾಚಪ್ಪ ಪಾಟೀಲ, ಬಸವಕಲ್ಯಾಣ ತಹಶೀಲ್ದಾರ್‌ ಸಾವಿತ್ರಿ ಸಲಗರ, ತಾಲ್ಲೂಕು ಪಂಚಾಯಿತಿ ಇಒ ಪಿ.ಎಸ್‌. ಮಡೋಳಪ್ಪ ಹಾಗೂ ಪಿಡಿಒ ಭೀಮಶಪ್ಪ ದಂಡಿನ್ ಮುಲ್ಲಾಮಾರಿ ಜಲಾಶಯದಿಂದ ಹಿರೇನಾಗಾಂವ ಗ್ರಾಮದ ವರೆಗೆ ಒಂದೂವರೆ ಕಿ.ಮೀ ಪೈಪ್‌ಲೈನ್‌ ಅಳವಡಿಸಲು ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.