ADVERTISEMENT

ಬಸವಕಲ್ಯಾಣ | ಅನುಭವ ಮಂಟಪಕ್ಕೆ ಪಟೇಲ್ ಜಾಗ ಕಾಣಿಕೆ: ಕುಪೇಂದ್ರ ಪಾಟೀಲ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2025, 6:13 IST
Last Updated 21 ಡಿಸೆಂಬರ್ 2025, 6:13 IST
ಬಸವಕಲ್ಯಾಣದಲ್ಲಿ ಶನಿವಾರ ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಅವರಿಗೆ ಡಾ.ಬಿ.ವಿ.ಪಟೇಲ್ ಕಾಯಕ ಸೇವಾರತ್ನ ರಾಜ್ಯ ಪ್ರಶಸ್ತಿ ಮತ್ತು ಗೌತಮ ಶಿಂಧೆ, ಕೆ.ಜಿ.ಶರಣಪ್ಪ ಅವರಿಗೆ ಕಾಯಕ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗುರುನಾಥ ಗಡ್ಡೆ ಮತ್ತು ಪ್ರೊ.ವಿಜಯಲಕ್ಷ್ಮಿ ಗಡ್ಡೆ ದಂಪತಿಗೆ ವಿಶೇಷ ಗೌರವ ಸನ್ಮಾನ ನಡೆಯಿತು
ಬಸವಕಲ್ಯಾಣದಲ್ಲಿ ಶನಿವಾರ ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಅವರಿಗೆ ಡಾ.ಬಿ.ವಿ.ಪಟೇಲ್ ಕಾಯಕ ಸೇವಾರತ್ನ ರಾಜ್ಯ ಪ್ರಶಸ್ತಿ ಮತ್ತು ಗೌತಮ ಶಿಂಧೆ, ಕೆ.ಜಿ.ಶರಣಪ್ಪ ಅವರಿಗೆ ಕಾಯಕ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗುರುನಾಥ ಗಡ್ಡೆ ಮತ್ತು ಪ್ರೊ.ವಿಜಯಲಕ್ಷ್ಮಿ ಗಡ್ಡೆ ದಂಪತಿಗೆ ವಿಶೇಷ ಗೌರವ ಸನ್ಮಾನ ನಡೆಯಿತು   

ಬಸವಕಲ್ಯಾಣ: ‘ಡಾ.ಬಿ.ವಿ.ಪಟೇಲ್ ಅವರು ಸ್ವಂತ ಹಣದಿಂದ ಖರೀದಿಸಿದ 13 ಎಕರೆ ಜಮೀನು ಸರ್ಕಾರದಿಂದ ₹ 700 ಕೋಟಿಯಲ್ಲಿ ಕಟ್ಟುತ್ತಿರುವ ಅನುಭವ ಮಂಟಪಕ್ಕೆ ಉಚಿತವಾಗಿ ನೀಡಲಾಗಿದೆ’ ಎಂದು ಸುಶೀಲಾದೇವಿ ಪಟೇಲ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕುಪೇಂದ್ರ ಪಾಟೀಲ ಹೇಳಿದರು.

ನಗರದ ಅನುಭವ ಮಂಟಪದಲ್ಲಿ ವಿಶ್ವ ಬಸವಧರ್ಮ ವಿಶ್ವಸ್ಥ ಮಂಡಳಿ ಮತ್ತು ಸುಶೀಲಾದೇವಿ ಬಿ.ಪಟೇಲ್ ಚಾರಿಟಬಲ್ ಟ್ರಸ್ಟ್‌ನಿಂದ ಶನಿವಾರ ಆಯೋಜಿಸಿದ್ದ ಸ್ಮರಣೋತ್ಸವ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ, ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಡಾ.ಬಿ.ವಿ.ಪಟೇಲ್ ಮತ್ತು ಸುಶೀಲಾದೇವಿ ಪಟೇಲ್ ದಂಪತಿ ಇಬ್ಬರೂ ವಿಶ್ವ ಬಸವಧರ್ಮ ಟ್ರಸ್ಟ್ ಅನುಭವ ಮಂಟಪದ ಅಧ್ಯಕ್ಷ ಆಗಿದ್ದರು. ಸ್ವಂತ ಆಸ್ತಿಯನ್ನು ಮಾರಾಟ ಮಾಡಿ ಮಂಟಪಕ್ಕೆ ಲಕ್ಷಾಂತರ ಹಣ ದೇಣಿಗೆ ನೀಡಿದ್ದಾರೆ. ಕಲ್ಯಾಣ ಮತ್ತು ಬಸವಣ್ಣನೆಂದರೆ ಅವರಿಗೆ ಪಂಚಪ್ರಾಣವಾಗಿತ್ತು. ಇಬ್ಬರ ಸಮಾಧಿಯೂ ಇಲ್ಲಿಯೇ ಇದೆ. ಅವರ ಹೆಸರಿನ ಟ್ರಸ್ಟ್‌ನಿಂದ ನೀಡಿದ ಸಹಾಯಧನದಿಂದ ಇದುವರೆಗೆ 12 ಜನರು ವೈದ್ಯರಾಗಿರುವುದು ಸಂತಸ ತಂದಿದೆ’ ಎಂದರು.

ADVERTISEMENT

ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ‘ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಮತ್ತು ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಪ್ರೋತ್ಸಾಹ ಮತ್ತು ಗೌರವಾದರದಿಂದ ಮನುಷ್ಯನಲ್ಲಿನ ದುರ್ಗುಣಗಳನ್ನು ತೆಗೆದುಹಾಕಬಹುದು’ ಎಂದರು.

ವಚನ ಪಿತಾಮಹ ಫ.ಗು.ಹಳಕಟ್ಟಿ ಪ್ರಶಸ್ತಿ ಪಡೆದಿರುವ ಗುರುನಾಥ ಗಡ್ಡೆ ಮತ್ತು ಪ್ರೊ.ವಿಜಯಲಕ್ಷ್ಮಿ ಗಡ್ಡೆ ದಂಪತಿಗಳ ವಿಶೇಷ ಗೌರವ ಸನ್ಮಾನ ನಡೆಯಿತು. ಮಾಜಿ ಸಚಿವ ಬಸವರಾಜ ಪಾಟೀಲ ಅಟ್ಟೂರ್ ಅವರಿಗೆ ‘ಡಾ.ಬಿ.ವಿ.ಪಟೇಲ್ ಕಾಯಕ ಸೇವಾರತ್ನ ರಾಜ್ಯ ಪ್ರಶಸ್ತಿ’ ನೀಡಲಾಯಿತು. ಸಿಡಿಪಿಒ ಗೌತಮ ಶಿಂಧೆ, ಕೆ.ಜಿ.ಶರಣಪ್ಪ ಗದ್ಲೇಗಾಂವ ಮತ್ತು ಸಂಜೀವಕುಮಾರ ಅಣವೀರ ಗೋಟೂರ್ ಇವರಿಗೆ ‘ಕಾಯಕ ಸೇವಾ ರತ್ನ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ನಾಲ್ವರು ಎಂ.ಬಿ.ಬಿ.ಎಸ್‌ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಲಾಯಿತು.

ಹುಲಸೂರ ಶಿವಾನಂದ ಸ್ವಾಮೀಜಿ, ನಿವೃತ್ತ ಪ್ರಾಚಾರ್ಯ ಅಶೋಕಕುಮಾರ ಶ್ರೀವಾಸ್ತವ, ರಮೇಶ ರಾಯಚೂರು, ವಿಜಯಕುಮಾರ, ಕಲ್ಯಾಣರಾವ್ ಮದರಗಾಂವಕರ್, ಸೂರ್ಯಕಾಂತ ಟೀಕೆಕರ್ ಮಾತನಾಡಿದರು. ಅನುಭವ ಮಂಟಪ ಸಂಚಾಲಕ ಶಿವಾನಂದ ಸ್ವಾಮೀಜಿ, ಡಾ.ಎಸ್.ಬಿ.ದುರ್ಗೆ, ಟ್ರಸ್ಟ್ ಕಾರ್ಯದರ್ಶಿ ಮಾಲತಿ ಎವಳೆ, ಕರುಣಾ ಖೇಣಿ, ಶಂಕರ ಮದರಗೈ ಮತ್ತಿತರರು ಉಪಸ್ಥಿತರಿದ್ದರು.

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸು ಕೆಲವರಿಗೆ ಸಹಿಸಲಾಗುತ್ತಿಲ್ಲ. ಎಷ್ಟೇ ಅಡೆತಡೆ ಬಂದರೂ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವವರೆಗೆ ಹೋರಾಟ ನಿಲ್ಲದು.
ಶಿವಾನಂದ ಸ್ವಾಮೀಜಿ ಹುಲಸೂರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.