ADVERTISEMENT

ಹುಲಸೂರ | ನಾಟಕದ ಮೂಲಕ ಪಠ್ಯ ಕಲಿಕೆ: ಸರ್ಕಾರಿ ಶಾಲೆಯಲ್ಲಿ ಭಿನ್ನ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:30 IST
Last Updated 5 ಸೆಪ್ಟೆಂಬರ್ 2025, 6:30 IST
ಹುಲಸೂರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಠ್ಯದ ‘ಬಿಲ್ಲುಹಬ್ಬ’ ನಾಟಕ ಪ್ರದರ್ಶಿಸಿದರು
ಹುಲಸೂರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಠ್ಯದ ‘ಬಿಲ್ಲುಹಬ್ಬ’ ನಾಟಕ ಪ್ರದರ್ಶಿಸಿದರು   

ಹುಲಸೂರ: ಪಟ್ಟಣದ ಗಾಂಧಿ ವೃತ್ತದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳು ಪಠ್ಯವನ್ನು ರಂಗ ಪ್ರಯೋಗದ ಮೂಲಕ ಅಭ್ಯಸಿಸುವ ಮೂಲಕ ಭಿನ್ನ ಪ್ರಯೋಗಕ್ಕೆ ಇಳಿದಿದ್ದಾರೆ.

ಕನ್ನಡ ಭಾಷಾ ಪಠ್ಯದಲ್ಲಿ ಎಚ್‌.ಎಸ್‌. ವೆಂಕಟೇಶಮೂರ್ತಿ ರಚಿತ ‘ಬಿಲ್ಲುಹಬ್ಬ’ ನಾಟಕವನ್ನು ಮುಖ್ಯಶಿಕ್ಷಕ ಹಾಗೂ ಸಹ ಶಿಕ್ಷಕರ ಮಾರ್ಗದರ್ಶನದಿಂದ ಮಕ್ಕಳು ಅಭಿನಯದ ಮೂಲಕ ಮನದಟ್ಟು ಮಾಡಿದ್ದಾರೆ. ತರಗತಿಯ ಕೊಠಡಿಯಲ್ಲೇ ನಾಟಕ ಪ್ರದರ್ಶಿಸಿದ್ದಾರೆ. ನಾಟಕದುದ್ದಕ್ಕೂ ಅಭಿನಯದಲ್ಲಿ ಮಕ್ಕಳು ಚಾಣಾಕ್ಷತೆ ಮೆರೆದಿದ್ದಾರೆ. ಕೃಷ್ಣನಿಂದ ಕಂಸನ ವಧೆಯ ಸಂದರ್ಭವನ್ನು ನಾಟಕ ಪ್ರಸ್ತುತಪಡಿಸುತ್ತದೆ.

‘ವಸುದೇವ ಹಾಗೂ ದೇವಕಿಯ ಬಂಧನದ ಸ್ಥಳಕ್ಕೆ ಪ್ರವೇಶಿಸುವ ಕಂಸನ ದ್ವೇಷಭರಿತ ವಿನೀತ ಭಾವನೆಗಳ ಪ್ರದರ್ಶನ, ವಸುದೇವ ಹಾಗೂ ದೇವಕಿ ಕೈಗೆ ಸರಪಳಿ ಬಿಗಿದ ಸನ್ನಿವೇಶದಲ್ಲಿಯೂ ಕೃಷ್ಣನ ಇರುವಿಕೆ ಬಗ್ಗೆ ಸ್ಪಷ್ಟತೆ ನೀಡದ ಸಂಭಾಷಣಾ ಶೈಲಿ, ಕಂಸನ ಹತಾಶೆಯ ಮಾತುಗಳು ನೈಜ ಸನ್ನಿವೇಶ ಸೃಷ್ಟಿಸಿದಂತೆ ಕಂಡವು. ಒಟ್ಟಾರೆ ಪಠ್ಯವನ್ನು ರಂಗ ಪ್ರಯೋಗದಲ್ಲಿ ಮೂಡಿಸಿದ್ದು ಸಂತಸ ನೀಡಿದೆ’ ಎನ್ನುತ್ತಾರೆ ತರಬೇತಿ ನೀಡಿದ ಶಿಕ್ಷಕರಾದ ಶಾಂತಾಬಾಯಿ ಹಾಗೂ ವಿಜಯಕುಮಾರ

ADVERTISEMENT

‘ಪೌರಾಣಿಕ ತೊಡುಗೆಯನ್ನು ಉಡುಗೆ-ಮನೆಯಿಂದಲೇ ತಯಾರಿಸಿ ತಂದೆವು. ಆಭರಣ, ಕಿರೀಟಗಳನ್ನು ಶಿಕ್ಷಕರು ಕೊಡಿಸಿದರು. ಒಂದೆರಡು ದಿನ ಪಠ್ಯಪುಸ್ತಕ ಓದಿಯೇ ಅಭ್ಯಾಸ ಮಾಡಿದೆವು. ನಂತರ ಪುಸ್ತಕ ಇಲ್ಲದೆ ನಿರರ್ಗಳವಾಗಿ ಸಂಭಾಷಣೆ ಪ್ರಸ್ತುತಪಡಿಸಲು ಶ್ರದ್ಧೆ ವಹಿಸಿದೆವು. ಓದುವ ಏಕತಾನತೆಯಿಂದ ಹೊರಬಂದು ಅಭಿನಯದ ಮೂಲಕ ಪಠ್ಯ ಕಲಿಕೆಗೆ ಮುಂದಾಗಿದ್ದು ಹೊಸ ಅನುಭವ ನೀಡಿತು’ ಎನ್ನುತ್ತಾರೆ ಕಂಸನ ಪಾತ್ರಧಾರಿ ಸಾಕ್ಷಿ ಹಳ್ಳಿಕೆಡೆ.

‘ಅಭಿನಯದಿಂದ ಸಹೃದಯರ ಮನ ಗೆಲ್ಲಬಹುದು. ಮನರಂಜನೆ ಜತೆಯಲ್ಲಿ ಮನಪರಿವರ್ತನೆಗೂ ಕಾರಣವಾಗುತ್ತದೆ. ನಾಟಕಗಳು ಕಾಲದ ಸಾಮಾಜಿಕ, ರಾಜಕೀಯ ವ್ಯವಸ್ಥೆಗೆ ಕೈಗನ್ನಡಿ. ಪೌರಾಣಿಕ ನಾಟಕಗಳು ಅಂದಿನ ಆಡಳಿತ ವ್ಯವಸ್ಥೆ, ಧೈರ್ಯ, ಭಯ, ಆತಂಕ, ತಲ್ಲಣಗಳನ್ನು ಚಿತ್ರಿಸುತ್ತವೆ’ ಎಂದು ಮುಖ್ಯಶಿಕ್ಷಕ ರಾಜಪ್ಪಾ ನಂದೊಡೆ ಹೇಳಿದರು.

‘ಶಾಲಾ ವಾರ್ಷಿಕೋತ್ಸವಗಳಲ್ಲಿ ಅಬ್ಬರದ ಸಂಗೀತದ ನಡುವೆ ಸಿನಿಮಾ ಗೀತೆಗಳಿಗೆ ನೃತ್ಯ ಮಾಡುವುದೇ ಆಗಿದೆ. ನಾಡಿನ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ನಾಟಕಗಳಿಗೆ ಪ್ರೋತ್ಸಾಹ ಇಲ್ಲದಂತಾಗಿದೆ. ಅಬ್ಬರ, ಆಡಂಬರದ ನಡುವೆ ವಿದ್ಯಾರ್ಥಿಗಳ ಇಂತಹ ರಂಗಪ್ರಯೋಗ ಭರವಸೆ ಮೂಡಿಸುತ್ತದೆ’ ಎಂದು ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಶಿವರಾಜ ಖಪಲೆ ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಮಕ್ಕಳು ನಾಟಕದ ಮೂಲಕ ಪಠ್ಯ ಕಲಿಯುತ್ತಿದ್ದು ಭಿನ್ನ ಪ್ರಯೋಗ. ಮುಖ್ಯ ಶಿಕ್ಷಕ ಹಾಗೂ ಸಹ ಶಿಕ್ಷಕರಿಂದ ಆಗುತ್ತಿರುವ ಈ ಪ್ರಯೋಗ ತುಂಬಾ ಸಂತಸ ತಂದಿದೆ.
ಸಿದ್ದವೀರಯ್ಯ ರುದನೂರ ಕ್ಷೇತ್ರ ಶಿಕ್ಷಣಾಧಿಕಾರಿ ಹುಲಸೂರ
ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಕಾರಣ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಗತಿಯಾಗುತ್ತಿದೆ. ಹಾಜರಾತಿ ಹೆಚ್ಚಾಗುತ್ತಿದೆ. ವಿಶೇಷವಾಗಿ ಶಾಲೆಯ ಮೇಲೆ ಪಾಲಕರ ಪ್ರೀತಿ ಹೆಚ್ಚಿದೆ
ರಾಜಪ್ಪಾ ನಂದೊಡೆ ಮುಖ್ಯಶಿಕ್ಷಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.