ADVERTISEMENT

ಗುಟಕಾ ಸೇವನೆಯಿಂದ ಭಾರತದಲ್ಲೇ ಹೆಚ್ಚು ಸಾವು: ಈಶ್ವರ ಖಂಡ್ರೆ

ಅಂಗಾಂಗ ದಾನ, ನಶೆಮುಕ್ತ ಭಾರತ ಅಭಿಯಾನದಲ್ಲಿ ಸಚಿವ ಈಶ್ವರ ಬಿ. ಖಂಡ್ರೆ ಸಲಹೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 11:35 IST
Last Updated 17 ನವೆಂಬರ್ 2025, 11:35 IST
   

ಬೀದರ್‌: ‘ಗುಟಕಾ ಸೇವನೆಯಿಂದ ಭಾರತದಲ್ಲೇ ಅತಿ ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. ಜಗತ್ತಿನಲ್ಲೇ ಭಾರತದ ಮರಣ ಪ್ರಮಾಣ 1/3ರಷ್ಟಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ಬೆಂಗಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ಹಾಗೂ ಅದರ ಅಧೀನದ ಕಾಲೇಜುಗಳ ಸಹಯೋಗದಲ್ಲಿ ನಗರದ ಬ್ರಿಮ್ಸ್‌ನಲ್ಲಿ ಸೋಮವಾರ ಏರ್ಪಡಿಸಿದ್ದ ಅಂಗಾಂಗ ದಾನ ಹಾಗೂ ನಶೆಮುಕ್ತ ಭಾರತ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಯುವಕರು ಧೂಮಪಾನ, ಮದ್ಯಪಾನ, ಡ್ರಗ್ಸ್‌ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿ, ನಶೆಯ ದಾಸರಾಗುತ್ತಿದ್ಧಾರೆ. ವಿಶೇಷವಾಗಿ ಯಾರು ವೈದ್ಯಕೀಯ ವಿಜ್ಞಾನಗಳ ಕೋರ್ಸ್‌ನಲ್ಲಿ ತೊಡಗಿದ್ದಾರೋ ಅಂತಹವರೇ ಹೆಚ್ಚಿನ ಪ್ರಮಾಣದಲ್ಲಿ ದುಶ್ಚಟಗಳಿಗೆ ಈಡಾಗುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಸಾರಾಯಿ ಕುಡಿಯುವುದು ಸಾಮಾನ್ಯವಾಗಿದೆ. 30 ವರ್ಷದೊಳಗಿನವರು ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಇದಕ್ಕೆಲ್ಲ ಕಾರಣ ದುಶ್ಚಟಗಳು ಎಂದು ಎಚ್ಚರಿಸಿದರು.

ADVERTISEMENT

ನಶೆಯ ದಾಸರಾದವರಿಗೆ ಹೇಗೆ ಬದುಕಬೇಕೆಂಬುದು ಗೊತ್ತಾಗುವುದಿಲ್ಲ. ನಶೆಗೆ ಹಣ ಸಿಗದಿದ್ದರೆ ಕುಟುಂಬದವರನ್ನೇ ಕೊಲೆ ಮಾಡಲು ಹೇಸುವುದಿಲ್ಲ. ಇದರಿಂದ ಅವನಷ್ಟೇ ಅಲ್ಲ, ಅವನ ಇಡೀ ಕುಟುಂಬ ಹಾಳಾಗುತ್ತದೆ. ಪ್ರತಿವರ್ಷ ನಮ್ಮ ದೇಶದಲ್ಲಿ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಗಿಂತ ಹೆಚ್ಚಿನ ಜನ ನಶೆಯಿಂದ ಸಾವನ್ನಪ್ಪುತ್ತಿದ್ದಾರೆ. ನಶೆ ಮಾಡಿ ವಾಹನ ಓಡಿಸುತ್ತಿರುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿವೆ ಎಂದು ಹೇಳಿದರು.

ನಶೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹೆಚ್ಚಿನ ಜನಜಾಗೃತಿ ಮೂಡಿಸುವ ಅಗತ್ಯವಿದೆ. ಬಾಯಿ ಕ್ಯಾನ್ಸರ್‌ ರೋಗಿಗಳ ಬಳಿಗೆ ಒಯ್ದು ವಿದ್ಯಾರ್ಥಿಗಳಿಗೆ ಸಾಕ್ಷಾತ್‌ ತೋರಿಸಬೇಕು. ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚಿಸಿದ್ದೇನೆ. ಅಂಗಾಂಗ ದಾನ ಮಹಾದಾನವಾಗಿದ್ದು, ಅದರ ಬಗ್ಗೆಯೂ ಜನ ಚಿಂತಿಸಬೇಕು ಎಂದು ಹೇಳಿದರು.

ಆರ್‌ಜಿಯುಎಚ್‌ಎಸ್‌ ಕುಲಪತಿ ಡಾ. ಭಗವಾನ್‌ ಬಿ.ಎಸ್‌. ಮಾತನಾಡಿ, ಪಂಜಾಬ್‌, ಹಿಮಾಚಲ ಪ್ರದೇಶ, ದೇಶದ ನೈರುತ್ಯ ರಾಜ್ಯಗಳಲ್ಲಿ ನಶೆ ಸಾಮಾನ್ಯವಾಗಿತ್ತು. ಮನೆಯ ಹಿತ್ತಲಲ್ಲೇ ಗಾಂಜಾ ಬೆಳೆಸುತ್ತಿದ್ದರು. ಈಗ ಅದು ಕೇರಳ, ಕರ್ನಾಟಕದಲ್ಲಿ ಆಗುತ್ತಿದೆ. ದೇಶದ ಎಲ್ಲಾ ಭಾಗಗಳ ವಿದ್ಯಾರ್ಥಿಗಳು ಬೆಂಗಳೂರಿಗೆ ಉನ್ನತ ಶಿಕ್ಷಣಕ್ಕಾಗಿ ಬರುತ್ತಿರುವುದರಿಂದ ಇಲ್ಲೂ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚಾಗಲು ಪ್ರಮುಖ ಕಾರಣ ಎಂದರು.

ಉತ್ತಮ ಜೀವನಶೈಲಿ, ಉತ್ತಮ ಶಿಕ್ಷಣ ಹಾಗೂ ಉತ್ತಮ ಆರೋಗ್ಯಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಶೆಗೆ ಒಳಗಾಗುವುದನ್ನು ತಪ್ಪಿಸಲು ಪ್ರತಿ ಕಾಲೇಜಿನಲ್ಲಿ ಟಾಸ್ಕ್‌ಫೋರ್ಟ್‌ ರಚಿಸಲು ತೀರ್ಮಾನಿಸಲಾಗಿದೆ. ಕಾಲೇಜು ಆಡಳಿತ ಮಂಡಳಿಯವರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಅವರ ಪೋಷಕರು, ಪೊಲೀಸರು ಈ ಟಾಸ್ಕ್‌ಫೋರ್ಸ್‌ನಲ್ಲಿ ಇರುತ್ತಾರೆ. ಅಲ್ಲದೇ ಪ್ರತಿ ವರ್ಷ ಆಯಾ ಕಾಲೇಜುಗಳಿಂದ ಇದರ ಬಗ್ಗೆ ವರದಿ ತರಿಸಿಕೊಂಡು ನಿಗಾ ವಹಿಸಲಾಗುವುದು ಎಂದು ಹೇಳಿದರು.

ದೇಶದಲ್ಲಿ ಪ್ರತಿವರ್ಷ 2.50 ಲಕ್ಷ ಜನರ ಅಂಗಾಂಗಗಳು ಬೇಕು. ಆದರೆ, 70ರಿಂದ 80 ಸಾವಿರ ಅಂಗಾಂಗಗಳು ಲಭ್ಯವಾಗುತ್ತಿವೆ. ಅಂಗಾಂದ ದಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜನ ಸ್ವಯಂಪ್ರೇರಣೆಯಿಂದ ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಸಬೇಕು. ಗರ್ಭ ಕರುಳು ಕಂಠದ ಕ್ಯಾನ್ಸರ್‌ ತಡೆಗೆ ಪ್ರತಿ ಲಸಿಕೆಗೆ ₹2 ಸಾವಿರ ಇದೆ. ಜನಪ್ರತಿನಿಧಿಗಳ ಮೂಲಕ ದೇಣಿಗೆ ಸಂಗ್ರಹಿಸಿ, ಲಸಿಕೆ ಪೂರೈಸಲು ಚಿಂತಿಸಲಾಗುತ್ತಿದೆ ಎಂದರು.

ಪೌರಾಡಳಿತ ಸಚಿವ ರಹೀಂ ಖಾನ್‌, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಬ್ರಿಮ್ಸ್‌ ನಿರ್ದೇಶಕ ಶಿವಕುಮಾರ ಶೆಟಕಾರ್‌, ಬೀದರ್‌ ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್‌ ಗೌಸ್‌, ಆರ್‌ಜಿಯುಎಚ್‌ಎಸ್‌ ಸಿಂಡಿಕೆಟ್‌ ಸದಸ್ಯರಾದ ಡಾ. ರಫೀಕ್‌, ಡಾ. ಗೋಪಾಲ್‌ ರೆಡ್ಡಿ, ಡಾ. ಮಹೇಂದ್ರ, ಡಾ. ಶ್ರೀನಿವಾಸ್‌ ವೇಲು ಹಾಜರಿದ್ದರು. ಅಶ್ವಿನಿ ಸ್ವಾಗತ ಗೀತೆ ಹಾಡಿದರೆ, ಡಾ. ಮಹೇಶ ತೊಂಡಾರೆ ಸ್ವಾಗತಿಸಿದರು. ಚಂದ್ರಕಾಂತ ಗಾದಗಿ ಉದ್ದೇಶ ವಿವರಿಸಿದರು. ಮುರಳೀಧರ ಏಕಲಾರಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಆರ್‌ಜಿಯುಎಚ್‌ಎಸ್‌ ವ್ಯಾಪ್ತಿಯಲ್ಲೇ ಶೇ 40ರಷ್ಟು ವಿದ್ಯಾರ್ಥಿಗಳಿಂದ ನಶೆ’

‘ಬೆಂಳೂರಿನ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಎಚ್‌ಎಸ್‌) ವ್ಯಾಪ್ತಿಯ ಕಾಲೇಜುಗಳ ಶೇ 40ರಷ್ಟು ವಿದ್ಯಾರ್ಥಿಗಳು ನಶೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ವಿಷಯ ತಿಳಿದು ಅಚ್ಚರಿಯಾಗಿದೆ’ ಎಂದು ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.

ನಮ್ಮ ದೇಶದಲ್ಲಿ ಶೇ 65ರಷ್ಟು ಯುವಜನಾಂಗ ಇದೆ. ಯುವಶಕ್ತಿ ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು. ಹಿಂದೆ ನಮ್ಮ ಪೂರ್ವಜರಿಗೆ ಸಂಸ್ಕಾರಯುತ ಶಿಕ್ಷಣವಿತ್ತು. ಆದರೆ, ಈಗ ನಮ್ಮ ಯುವಕರು ಪಾಶ್ಚಿಮಾತ್ಯ ಶಿಕ್ಷಣ, ಅಲ್ಲಿನ ಜೀವನಶೈಲಿ ಅನುಕರಣೆ ಮಾಡುತ್ತಿರುವುದರಿಂದ ನಶೆಯ ದಾಸರಾಗುತ್ತಿದ್ದಾರೆ ಎಂದರು.

2 ಕಿ.ಮೀ ವಾಕಥಾನ್‌; ಸಂತೋಷ್‌ ಲಾಡ್‌ ಚಾಲನೆ

ಅಂಗಾಂಗ ದಾನ ಹಾಗೂ ನಶೆಮುಕ್ತ ಭಾರತ ಅಭಿಯಾನದ ಅಂಗವಾಗಿ ಬೀದರ್‌ ನಗರದಲ್ಲಿ ಸೋಮವಾರ ಬೆಳಿಗ್ಗೆ 2 ಕಿ.ಮೀ ವಾಕಥಾನ್‌ ನಡೆಯಿತು. ನಗರದ ಜಿಲ್ಲಾ ನೆಹರೂ ಕ್ರೀಡಾಂಗಣದಿಂದ ಆರಂಭಗೊಮಡ ವಾಕಥಾನ್‌ ಪ್ರಮುಖ ಮಾರ್ಗಗಳ ಮೂಲಕ ಬ್ರಿಮ್ಸ್‌ವರೆಗೆ ನಡೆಯಿತು. ಬ್ರಿಮ್ಸ್‌ ಹಾಗೂ ವಿವಿಧ ನರ್ಸಿಂಗ್‌ ಕಾಲೇಜಿನ ಬೋಧಕ–ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ವಾಕಥಾನ್‌ಗೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ಅಂಗಾಂಗ ದಾನದಿಂದ ಸಮಾಜಕ್ಕೆ ದೊಡ್ಡ ಪ್ರಯೋಜನವಾಗುತ್ತದೆ. ಹತ್ತು ವರ್ಷಗಳಲ್ಲಿ 1.07 ಲಕ್ಷ ಯುವಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡ್ರಗ್ಸ್‌ ಸೇರಿದಂತೆ ಇತರೆ ಕಾರಣಗಳಿಂದ ಇದಾಗಿದೆ. ಫಾರ್ಮಾಸ್ಯುಟಿಕಲ್ಸ್ ಡ್ರಗ್ಸ್‌, ಕೊಕೇನ್‌ ಸೇರಿದಂತೆ ಹಲವಾರು ಡ್ರಗ್ಸ್‌ಗಳಿಗೆ ಜನ ದಾಸರಾಗುತ್ತಿದ್ದಾರೆ. ಅಂಡಮಾನ್‌ ಮತ್ತು ನಿಕೋಬಾರ್‌ನಲ್ಲಿ ಇತ್ತೀಚೆಗೆ ₹35 ಸಾವಿರ ಕೋಟಿ ಡ್ರಗ್ಸ್‌ ಜಪ್ತಿ ಮಾಡಲಾಗಿದೆ. ಇತರೆ ಮಹಾನಗರಗಳಲ್ಲೂ ಇದೇ. ₹3ರಿಂದ ₹4 ಲಕ್ಷ ಕೋಟಿ ಡ್ರಗ್ಸ್‌ ವಹಿವಾಟು ನಡೆಯುತ್ತಿದೆ. ಆದಕಾರಣ ಯುವಜನಾಂಗ ಅದರ ದಾಸರಾಗಿ ಜೀವನ ಹಾಳು ಮಾಡಿಕೊಳ್ಳಬಾರದು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.