ಬೀದರ್: ‘ಸಾಕ್ಷರತೆ ಪ್ರಮಾಣ ಹೆಚ್ಚಿಸಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ’ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್. ಬಿರಾದಾರ ತಿಳಿಸಿದರು.
ಇಲ್ಲಿನ ಬಿ.ವಿ.ಭೂಮರಡ್ಡಿ ಕಾಲೇಜಿನಿಂದ ನಗರದ ಓಡವಾಡ ಅಗ್ರಹಾರದ ಅನಂತಶಯನ ದೇವಾಲಯದಲ್ಲಿ ಬುಧವಾರ ನಡೆದ ಎನ್‌ಎಸ್‌ಎಸ್ ವಾರ್ಷಿಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಕನಿಷ್ಠ ಅಂಚೆ ಪತ್ರಗಳನ್ನು ಓದುವಂತೆ ಪ್ರತಿಯೊಬ್ಬರೂ ಸಾಕ್ಷರರಾದರೆ ಉತ್ತಮ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಶ್ರಮಿಸಬೇಕು. ಅಜ್ಞಾನ ಹೋದರೆ ಅಂಧಕಾರ ತೊಲಗಿದಂತೆ ಎಂದು ಹೇಳಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ ಎಸ್. ವಾಲಿ ಮಾತನಾಡಿ, ತಮ್ಮ ಮನೆ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಬೇಕು. ಮೂಢನಂಬಿಕೆಗಳ ಬಗ್ಗೆ ತಿಳಿಸಬೇಕು. ಉತ್ತಮ ಶಿಕ್ಷಣದ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಬೀದರ್ ವಿಶ್ವವಿದ್ಯಾಲಯದ ಎನ್.ಎಸ್.ಎಸ್. ಯೋಜನಾಧಿಕಾರಿ ರವೀಂದ್ರ ಗಬಾಡೆ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಕೋಟೆ, ಎನ್.ಎಸ್.ಎಸ್. ಅಧಿಕಾರಿ ದೀಪಾ ರಾಗ, ಬಸವರಾಜ ಬಿರಾದಾರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.