ADVERTISEMENT

ಕಲಾವಿದರ ಮಾಸಾಶನ ₹5 ಸಾವಿರಕ್ಕೆ ಏರಿಕೆಗೆ ಪ್ರಯತ್ನ: ಸಚಿವ ಈಶ್ವರ ಖಂಡ್ರೆ ಭರವಸೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 12:55 IST
Last Updated 11 ಜನವರಿ 2025, 12:55 IST
   

ಬೀದರ್‌: ಎರಡು ದಿನಗಳ ಕಲ್ಯಾಣ ಕರ್ನಾಟಕ ವಿಭಾಗಮಟ್ಟದ ತತ್ವಪದಕಾರರ ಸಮಾವೇಶಕ್ಕೆ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಶನಿವಾರ ಚಾಲನೆ ನೀಡಲಾಯಿತು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟ, ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸಮಾವೇಶ, ಭಜನೆ ಸ್ಪರ್ಧೆ, ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಧಕರಿಗೆ ಸನ್ಮಾನ ಸಮಾರಂಭವೂ ಸಂಭ್ರಮದಿಂದ ಜರುಗಿತು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಿ, ಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರೊಂದಿಗೆ ಚರ್ಚಿಸಿ ಕಲಾವಿದರ ಮಾಶಾಸನ ಮೂರು ಸಾವಿರದಿಂದ ಐದು ಸಾವಿರಕ್ಕೆ ಏರಿಸಲು ಪ್ರಾಮಾಣಿಕವಾಗಿ ಪ್ರಯತ್ನ ನಡೆಸುತ್ತೇನೆ ಎಂದು ಆಶ್ವಾಸನೆ ನೀಡಿದಾಗ ಕರತಾಡನ ಮುಗಿಲು ಮುಟ್ಟಿತು.

ADVERTISEMENT

ತತ್ವಪದಕಾರರ ಸಮಾವೇಶದ ಅಂಗವಾಗಿ ಏರ್ಪಡಿಸಲಾಗುವ ಜನಪದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹51 ಸಾವಿರ ಬಹುಮಾನ ವೈಯಕ್ತಿಕವಾಗಿ ನೀಡುತ್ತೇನೆ ಎಂದು ಘೋಷಿಸಿದರು.

ಕಲಾವಿದರ ಸಂಭಾವನೆ ಹೆಚ್ಚಿಸಬೇಕೆನ್ನುವುದು ದೀರ್ಘಕಾಲೀನ ಬೇಡಿಕೆ. ಅದರ ಬಗ್ಗೆಯೂ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು. ಬೀದರ್‌ ನಗರದಲ್ಲಿ ಕಲಾವಿದರಿಗಾಗಿ ಸಮುದಾಯ ಭವನ ನಿರ್ಮಾಣಕ್ಕೆ 18 ಗುಂಟೆ ಜಮೀನು ಮಂಜೂರು ಮಾಡಿಸುವ ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.

ಆಧುನಿಕತೆ, ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಜನಪದ, ತತ್ಪಪದ, ಶರಣರು, ದಾಸರ ಹಾಡುಗಳನ್ನು ಕೇಳುತ್ತಿದ್ದರೆ ಮನಸ್ಸಿಗೆ ನೆಮ್ಮದಿಗೆ ಸಿಗುತ್ತದೆ. ದುರಾಸೆ ದುರ್ಗುಣಗಳಿಂದ ಸಂಬಂಧ‌ ಕಲುಷಿತಗೊಳ್ಳುತ್ತಿವೆ. ಇಂತಹ ಸನ್ನಿವೇಶದಲ್ಲಿ ಭಜನೆ, ತತ್ವಪದಗಳು ವ್ಯಕ್ತಿಯ ಮನಸ್ಸು, ಹೃದಯ ಶಾಂತಗೊಳಿಸುತ್ತವೆ ಎಂದರು.

ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಸೋನಾರೆ ಮಾತನಾಡಿ, ಪಾಶ್ಚಿಮಾತ್ಯ ಹಾಡುಗಾರರಿಗೆ, ನೃತ್ಯ ಮಾಡುವವರಿಗೆ ₹25 ಲಕ್ಷದ ವರೆಗೆ ಸಂಭಾವನೆ ನೀಡಲಾಗುತ್ತದೆ. ಆದರೆ, ದೇಶಿ ಸಂಸ್ಕೃತಿ ಉಳಿಸಿ ಬೆಳೆಸುವ ಜನಪದ ಕಲಾವಿದರ ಬದುಕು ದಯನೀಯವಾಗಿದೆ. ದೇಶಿ ಕಲಾವಿದರ ಸಂಭಾವನೆ ಕೂಡ ಹೆಚ್ಚಿಸಬೇಕು ಎಂದು ಮನವಿ ಮಾಡಿದರು.

ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ ವಹಿಸಿದ್ದರು. ಸಿದ್ಧರಾಮ ಬೆಲ್ದಾಳ ಶರಣರು ನೇತೃತ್ವ ವಹಿಸಿದ್ದರು. ಶಾಸಕ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ರಂಗ ಸಂಘಟಕ ಶ್ರೀನಿವಾಸ ಜಿ.ಕಪ್ಪಣ್ಣ, ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಧನ್ನೂರ, ಡಾ.ಸಿದ್ದಾರೆಡ್ಡಿ ಫೌಂಡೇಶನ್ ಗೌರವ ಅಧ್ಯಕ್ಷೆ ಡಾ. ಗುರಮ್ಮ ಸಿದ್ಧಾರೆಡ್ಡಿ, ನಫೇಡ್ ಸಂಸ್ಥೆ ನವದೆಹಲಿಯ ಉಪಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಯಾದಗಿರಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ್‌ ಚಿಮಕೋಡೆ, ಎಂಜಿನಿಯರ್‌ ಹಾವಶೆಟ್ಟಿ ಪಾಟೀಲ, ಪತ್ರಕರ್ತ ಮಾಳಪ್ಪ ಅಡಸಾರೆ, ನವಲಿಂಗ ಪಾಟೀಲ, ಒಕ್ಕೂಟದ ಕಾರ್ಯದರ್ಶಿ ಪ್ರಕಾಶ ಅಂಗಡಿ ಕನ್ಹಳ್ಳಿ, ಸುನೀಲ ಭಾವಿಕಟ್ಟಿ ಹಾಜರಿದ್ದರು. ಶಿವಕುಮಾರ ಪಾಂಚಾಳ ಹಾಗೂ ತಂಡದವರು ನಾಡಗೀತೆ ಹಾಡಿದರು. ಬಸವರಾಜ ಬಳ್ಳಾರಿ ಕುಚಿಪುಡಿ ನೃತ್ಯ ಪ್ರದರ್ಶಿಸಿದರು. ಬೆಳಿಗ್ಗೆ 11ಕ್ಕೆ ಆರಂಭಗೊಳ್ಳಬೇಕಿದ್ದ ಕಾರ್ಯಕ್ರಮ ಮಧ್ಯಾಹ್ನ 2.30ಕ್ಕೆ ಉದ್ಘಾಟನೆಯೊಂದಿಗೆ ಪ್ರಾರಂಭಗೊಂಡಿತು. ಸಚಿವರು ಮೂರೂವರೆ ಗಂಟೆ ವಿಳಂಬವಾಗಿ ಬಂದು ಉದ್ಘಾಟಿಸಿದರು.

ಸಾಧಕರಿಗೆ ಸನ್ಮಾನ

ಬಸವಲಿಂಗ ಪಟ್ಟದ್ದೇವರು, ರಾಜೇಂದ್ರ ಸಿಂಗ್ ಪವಾರ್, ಮಲ್ಲಿಕಾರ್ಜುನ ಬಿರಾದಾರ, ಸೂರಜ್‌ ಸಿಂಗ್ ರಾಜಪುತ, ಭೀಮಸಿಂಗ್ ರಾಠೋಡ್, ನರಸಪ್ಪ ಭೂತೇರ್, ಹೀರಾಚಂದ್ ವಾಘಮಾರೆ, ನರಸಿಂಹಲು ಡಪ್ಪೂರ್ ಅವರನ್ನು ಸನ್ಮಾನಿಸಲಾಯಿತು. ಸರ್ಕಾರದಿಂದ ನಾಮನಿರ್ದೇಶನಗೊಂಡ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯೆ ರಶ್ಮಿ ಎಸ್., ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ವಿನಯ್‌ ಮಾಳಗೆ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಂಜೀವಕುಮಾರ ಅತಿವಾಳೆ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಪತ್ರಿಕೆಗಳ ಆರ್ಥಿಕ ಸಾಮಾಜಿಕ ಸ್ಥಿತಿಗತಿ ಅಧ್ಯಯನ ಸಮಿತಿ ಸದಸ್ಯ ಪೃಥ್ವಿರಾಜ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.