ಬೀದರ್: ಇಸ್ಲಾಂ ಧರ್ಮದ ಪ್ರವರ್ತಕ ಹಜರತ್ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಿದರು.
ನಗರದ ಚೌಬಾರ ಸಮೀಪದ ಜುಮ್ಮಾ ಮಸೀದಿ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಸಿದ್ಧಿ ತಾಲೀಮ್, ನಯಾ ಕಮಾನ್, ಮಹಮೂದ್ ಗಾವಾನ್ ವೃತ್ತ, ಶಹಾಗಂಜ್, ಮೈಲೂರ್, ಚಿದ್ರಿ ಹಾಗೂ ಗ್ರಾಮೀಣ ಭಾಗಗಳ ಮಸೀದಿ, ದರ್ಗಾಗಳಲ್ಲಿ ಬೆಳಿಗ್ಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಬಳಿಕ ಮಹಮೂದ್ ಗಾವಾನ್ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಅಪಾರ ಸಂಖ್ಯೆಯ ಜನ ಪಾಲ್ಗೊಂಡಿದ್ದರು. ಹೆಚ್ಚಿನವರು ಕಾಲ್ನಡಿಗೆಯಲ್ಲಿ ಹೆಜ್ಜೆ ಹಾಕಿದರು. ಕೆಲವರು ಬೈಕ್ ಮೇಲೆ ಧ್ವಜಗಳನ್ನು ಬೀಸುತ್ತ ಘೋಷಣೆ ಹಾಕುತ್ತ ಶಾಂತಿಯುತವಾಗಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕಿರಿಯರಿಂದ ಹಿರಿಯರ ವರೆಗೆ ಎಲ್ಲ ವಯೋಮಾನದವರು ಪಾಲ್ಗೊಂಡಿದ್ದರು.
ಮೆರವಣಿಗೆಯುದ್ದಕ್ಕೂ ಪೈಗಂಬರ್ ಅವರ ಜೀವನ ಸಂದೇಶಗಳನ್ನು ಹೇಳಿದರು. ಕೆಲವರು ಕುರಾನ್ ಪಠಣ ಮಾಡಿದರು. ಕೆಲ ಸಂಘ ಸಂಸ್ಥೆಯವರು ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಪಾನಕ ವ್ಯವಸ್ಥೆ ಮಾಡಿದ್ದರು. ಪಂಜಾಬ್‌ನಲ್ಲಿ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಯುವಕರು ದೇಣಿಗೆ ಕೂಡ ಸಂಗ್ರಹಿಸಿದರು. ಎಲ್ಲ ಮಸೀದಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.
ಪೌರಾಡಳಿತ ಸಚಿವ ರಹೀಂ ಖಾನ್, ಮಹಾನಗರ ಪಾಲಿಕೆ ಅಧ್ಯಕ್ಷ ಮುಹಮ್ಮದ್ ಗೌಸ್, ಅಬ್ದುಲ್ ಮನ್ನಾನ್ ಸೇಠ್ ಮತ್ತಿತರರು ಪಾಲ್ಗೊಂಡಿದ್ದರು.
ಶಹಾಗಂಜ್, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ನಯಾ ಕಮಾನ್, ಸಿದ್ದಿ ತಾಲೀಮ್, ಚೌಬಾರ ಮೂಲಕ ಹಾದು ಜುಮ್ಮಾ ಮಸೀದಿ ಬಳಿ ಮೆರವಣಿಗೆ ಕೊನೆಗೊಂಡಿತು. ರಜಾ ದಿನವಾಗಿದ್ದರಿಂದ ಬಹುತೇಕ ಮಳಿಗೆಗಳು ಮಧ್ಯಾಹ್ನದ ವರೆಗೆ ಮುಚ್ಚಿದ್ದವು. ಜನರ ಸಂಚಾರ ಹೆಚ್ಚಿರದ ಕಾರಣ ಸಾರ್ವಜನಿಕರಿಗೆ ತೊಂದರೆ ಆಗಿರಲಿಲ್ಲ. ಮೆರವಣಿಗೆ ಹಾದು ಹೋಗುವವರೆಗೆ ಸಂಚಾರಿ ಪೊಲೀಸರು ಬೇರೆ ಮಾರ್ಗಗಳ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿದರು.
ಹುಲಸೂರ: ಪ್ರವಾದಿ ಮುಹಮ್ಮದ್ ಜನ್ಮದಿನದ ಪ್ರಯುಕ್ತ ಈದ್ ಮಿಲಾದ್ ಹಬ್ಬವನ್ನು ಪಟ್ಟಣ ಸೇರಿದಂತೆ ತಾಲ್ಲೂಕಿನಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಮುಸ್ಲಿಮರು ಪಟ್ಟಣದಲ್ಲಿ ಅದ್ದೂರಿ ಮೆರವಣಿಗೆ ನಡೆಸಿದರು. ಮಸೀದಿಯಲ್ಲಿ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧಾರ್ಮಿಕ ಗುರುಗಳಿಂದ ನಡೆದ ಪ್ರವಚನ ನಡೆಯಿತು.
ಬೆಳಗ್ಗೆ 11 ಗಂಟೆಗೆ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ದರ್ಗಾ ತಲುಪಿ ಸಮಾರೋಪಗೊಂಡಿತು.
ಮರವಣಿಗೆಯಲ್ಲಿ ತೊಟ್ಟಿದ್ದ ಮಕ್ಕಳು, ಯುವಕರು ಧಾರ್ಮಿಕ ಧ್ವಜಗಳನ್ನು ಹಿಡಿದು ಸಂಭ್ರಮಿಸಿದರು. ಯುವಕರು ಬೈಕ್‌ಗೆ ಧಾರ್ಮಿಕ ಧ್ವಜಗಳನ್ನು ಕಟ್ಟಿಕೊಂಡು ನಗರದ ಪ್ರಮುಖ ಬೀದಿಗಳಲ್ಲಿ ರ‍್ಯಾಲಿ ನಡೆಸಿದರು.
ಮೆರವಣಿಗೆ ಮಾರ್ಗದಲ್ಲಿ ಸಾರ್ವಜನಿಕರಿಗೆ ಜಿಲೇಬಿ, ಹಣ್ಣು, ಪಾನೀಯ, ಕುಡಿಯುವ ನೀರು ವಿತರಣೆ ಮಾಡಲಾಯಿತು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್ ಅವರಿಗೆ ಮುಸ್ಲಿಂ ಸಮಾಜದ ಮುಖಂಡರಿಂದ ಸನ್ಮಾನಿಸಲಾಯಿತು.
ಸಮಾಜದ ಮುಖಂಡರಾದ ಸೈಯದ್ ಇಸ್ಮಾಯಿಲ್, ಮನ್ಸೂರ್ ದಾವಲಜಿ, ಸೈಯದ್ ಅಖಿಲ, ಗುಲಾಂ ಬಡಾಯಿ, ಅಬ್ದುಲ್ ಹಮೀದ್, ಯುನುಸ್ ಹೆಡೆ, ಹಿಜಾಜ ಜಹಾಂಗೀರ್, ಇಕ್ರಾಮ್ ಠಾಕೂರ್, ಫಯಾಜ್ ದಾವಲಜಿ, ಶೇಕ್ ಫರೀದ್, ಹಕೀಮುಲ್ಲಾ, ಬಾಬಾ ನಿಲಂಗೆ, ಅಬ್ರಾರ್ ಸೌದಗರ್, ಮೈನೋದ್ದಿನ್, ಜೂನೆದ್, ತ್ರಿಂಬಕ ಜೀವಾಯಿ ಸೇರಿ ಇತರರು ಇದ್ದರು.
ಪಟ್ಟಣದ ಮಸೀದಿಗಳು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಭಾಲ್ಕಿ: ಪಟ್ಟಣದ ಜಾಧವ್ ಆಸ್ಪತ್ರೆ ಹಾಗೂ ಭಾಲ್ಕಿಕರ್ ಆಸ್ಪತ್ರೆಯಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬದ ನಿಮಿತ್ತ ಮಿಲಾದ್ ಕಮಿಟಿ ಹಾಗೂ ಎಂಐಎಂ ಶಿಕ್ಷಣ ಸಂಸ್ಥೆಯಿಂದ ರಕ್ತದಾನ ಶಿಬಿರ ನಡೆಯಿತು.
ಪ್ರಮುಖರಾದ ನಸೀರ್ ಸಾಬ್ ಮಾತನಾಡಿ, ರಕ್ತದಾನ ಪುಣ್ಯದ ಕಾರ್ಯವಾಗಿದ್ದು, ನಾವು ಮಾಡುವ ರಕ್ತದಾನ ಅಪಘಾತ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಅನೇಕರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಹೇಳಿದರು.
ಮಿಲಾದ್ ಕಮಿಟಿ ಅಧ್ಯಕ್ಷ ಎಂ. ಡಿ. ಅಬ್ರಾಮ್, ಎಂಐಎಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಡಿ.ರಫಿಕ್ ಇನಾಮದಾರ್, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ, ಡಾ.ಜಾಧವ ಸೇರಿದಂತೆ ಪ್ರಮುಖರು ಇದ್ದರು.
ಜನವಾಡ: ಬೀದರ್ ತಾಲ್ಲೂಕಿನ ವಿವಿಧೆಡೆ ಈದ್ ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಹಬ್ಬದ ನಿಮಿತ್ತ ಮುಸ್ಲಿಮರು ಜನವಾಡ, ಬಗದಲ್, ಕಮಠಾಣ, ಮನ್ನಳ್ಳಿ, ಅಲಿಯಂಬರ್ ಮೊದಲಾದ ಗ್ರಾಮಗಳ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಹಬ್ಬದ ಶುಭ ಕೋರಿದರು.
ಬಸವಕಲ್ಯಾಣ: ನಗರದಲ್ಲಿ ಈದ್ ಮಿಲಾದ್ ಅಂಗವಾಗಿ ಶುಕ್ರವಾರ ಕೋಟೆಯಿಂದ ಮುಖ್ಯ ರಸ್ತೆಯ ಮೂಲಕ ಬೃಹತ್ ಮೆರವಣಿಗೆ ನಡೆಯಿತು.
ಕೋಟೆ ಹತ್ತಿರದಲ್ಲಿ ಗಣೇಶ ಮಹಾಮಂಡಳದ ಪದಾಧಿಕಾರಿಗಳು ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಬ್ಯಾನರ್ ಅಳವಡಿಸಿ ವೇದಿಕೆ ನಿರ್ಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಧಾರ್ಮಿಕ ಮುಖಂಡರನ್ನು ಶಾಲು ಹೊದಿಸಿ ಪುಷ್ಪಮಾಲೆ ಹಾಕಿ ಸನ್ಮಾನಿಸಿದರು.
ಬಳಿಕ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜಾ ಬಾಗಸವಾರ್ ದರ್ಗಾ ಮುಖ್ಯಸ್ಥ ಜಿಯಾಪಾಶಾ ಜಾಗೀರದಾರ ಮಾತನಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ನಗರದ ಮಸೀದಿ ಮತ್ತು ದರ್ಗಾಗಳ ಮುಖ್ಯಸ್ಥರು ಹಾಗೂ ಇತರೆಡೆಯ ಧಾರ್ಮಿಕ ಮುಖಂಡರು ಭಾಗವಹಿಸಿದ್ದರು. ರಕ್ತದಾನ ಶಿಬಿರ: ಈದ್ ಮಿಲಾದ್ ಅಂಗವಾಗಿ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಮಿನಹಾಜ್ ನವಾಬ್ ಅವರು ನಗರದಲ್ಲಿ 6ನೇ ವರ್ಷದ ರಕ್ತದಾನ ಶಿಬಿರ ಆಯೊಜಿಸಿದ್ದರು. 230 ಯುವಕರು ರಕ್ತದಾನ ಮಾಡಿದರು. ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಮೌಲಾನಾ ಮೀರ ಫರ್ಕುಂದಾ ಅಲಿ ಉದ್ಘಾಟಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ವಿಜಯಸಿಂಗ್, ಜಿಯಾಪಾಶಾ ಜಾಗೀರದಾರ, ಅಬ್ದುಲ್ ಖಲೀಲ್ ಅಹ್ಮದ್, ಅಜರ ಅಲಿ, ಸತೀಶ ಮುಳೆ, ನರಸಿಂಗರೆಡ್ಡಿ ಗದ್ಲೇಗಾಂವ, ಬಬಲು ಶೇಖ್ ಉಮಾಪುರ, ಸೂರಜ್ ಪಾಟೀಲ, ದೀಪಕ ನಾಗದೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.