ADVERTISEMENT

ಕಾಂಗ್ರೆಸ್ ಯಾರಿಗೆ ಟಿಕೆಟ್‌ ಕೊಟ್ಟರೂ ಗೆಲ್ಲಿಸಿ: ಜಮೀರ್ ಅಹಮ್ಮದ್

ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 16:06 IST
Last Updated 4 ಫೆಬ್ರುವರಿ 2023, 16:06 IST
ಜಮೀರ್ ಅಹಮ್ಮದ್ ಖಾನ್
ಜಮೀರ್ ಅಹಮ್ಮದ್ ಖಾನ್   

ಬೀದರ್‌: ‘ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್‌ ಕೊಟ್ಟರೂ ಅವರ ಪರ ಮತ ಚಲಾಯಿಸಬೇಕು. ಒಟ್ಟಾರೆ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರುವಂತೆ ಮಾಡಬೇಕು’ ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಮನವಿ ಮಾಡಿದರು.

ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಪ್ರಯುಕ್ತ ಬೀದರ್‌ನ ಗಣೇಶ ಮೈದಾನದಲ್ಲಿ ಆಯೋಜಿಸಿದ್ದ ಬೀದರ್‌ ಹಾಗೂ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಶಾಸಕರ ಯಾವುದೇ ಕ್ಷೇತ್ರದಲ್ಲಿ ಕೋಮು ಗಲಭೆ ನಡೆದಿಲ್ಲ. ಆದರೆ, ಎಲ್ಲೆಲ್ಲಿ ಬಿಜೆಪಿ ಶಾಸಕರು ಇರುವರೋ ಅಲ್ಲಿ ಗಲಭೆಗಳು ನಡೆದಿರುವುದನ್ನು ಕಂಡಿದ್ದೇವೆ. ಕಾಂಗ್ರೆಸ್‌ ಅಧಿಕಾರ ಅವಧಿಯಲ್ಲಿ ಅಲ್ಪಸಂಖ್ಯಾತರಿಗೆ ನೀಡಿದಷ್ಟು ಅನುದಾನ ಬೇರೆ ಪಕ್ಷದವರು ಕೊಟ್ಟಿಲ್ಲ’ ಎಂದು ಹೇಳಿದರು.

ADVERTISEMENT

ಮಾಜಿ ಶಾಸಕ ಅಶೋಕ ಖೇಣಿ ಮಾತನಾಡಿ, ‘ಕಾಂಗ್ರೆಸ್‌ ಸರ್ಕಾರ ಬೀದರ್‌ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗೆ ₹ 2,231 ಕೋಟಿ ಅನುದಾನ ಒದಗಿಸಿತ್ತು. ಈಗ ಅಭಿವೃದ್ಧಿ ಕುಂಠಿತಗೊಂಡಿದೆ’ ಎಂದರು.

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕಾರಂಜಾ ಸಂತ್ರಸ್ತರಿಗೆ ವೈಜ್ಞಾನಿಕ ಪರಿಹಾರ ಕೊಡಬೇಕು. ಬಿಎಸ್‌ಎಸ್‌ಕೆ ಪುನಶ್ಚೇತನಕ್ಕೆ ಅನುದಾನ ಒದಗಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ರಹೀಂ ಖಾನ್‌ ಮಾತನಾಡಿ, ‘ಧರ್ಮಸಿಂಗ್‌ ಅವರು ಬ್ರಿಮ್ಸ್‌ ಆಸ್ಪತ್ರೆಗೆ ಹಣ ಕೊಟ್ಟರೆ, ಸಿದ್ದರಾಮಯ್ಯ ಅವರು ಬೀದರ್‌ ಎಂಜಿನಿಯರಿಂಗ್ ಕಾಲೇಜಿಗೆ ಹಣ ಕೊಟ್ಟಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳಾಗಿವೆ’ ಎಂದು ತಿಳಿಸಿದರು.

‘ಬೀದರ್‌ ಕ್ಷೇತ್ರದಲ್ಲಿ ಒಮ್ಮೆ ಗೆದ್ದವರು ಮತ್ತೆ ಚುನಾಯಿತರಾಗಿಲ್ಲ. ಆದರೆ, ನಾನು ಒಂದೇ ಕ್ಷೇತ್ರದಿಂದ

ಮೂರು ಬಾರಿ ಆಯ್ಕೆಯಾಗಿದ್ದೇನೆ. ಮತದಾರರ ಹೃದಯದಲ್ಲಿ ಇರುವೆ. ಅವರ ಹೃದಯದಿಂದ ನನ್ನನ್ನು ಬೇರ್ಪಡಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಕೆಲವರು ಸುಳ್ಳು ಆರೋ‍ಪ ಮಾಡುತ್ತಿದ್ದಾರೆ. ಜನ ಗಾಂಧಿ ಹಾಗೂ ಬಸವಣ್ಣನನ್ನೂ ಬಿಟ್ಟಿಲ್ಲ. ನಾನಂತೂ ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದೇನೆ’ ಎಂದು ಹೇಳಿದರು.

‘ಕೆಲವರು ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಕೆಲ ಯುಟ್ಯೂಬ್‌ ವರದಿಗಾರರು ತಪ್ಪು ಮಾಹಿತಿ ಹರಿಯ ಬಿಡುತ್ತಿದ್ದಾರೆ. ಅಂಥವರಿಗೆ ಪಾಠ ಕಲಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.