ADVERTISEMENT

ದೇವಸ್ಥಾನಕ್ಕೆ ಹಣ ನೀಡಿದರೆ ಅವಿರೋಧ ಆಯ್ಕೆ!

ಅಧಿಕಾರಿಗಳ ಕಣ್ಣು ತಪ್ಪಿಸಿ ತೆರೆಮರೆಯಲ್ಲಿ ನಡೆದಿದೆ ಸಂಧಾನ

ಚಂದ್ರಕಾಂತ ಮಸಾನಿ
Published 10 ಡಿಸೆಂಬರ್ 2020, 5:36 IST
Last Updated 10 ಡಿಸೆಂಬರ್ 2020, 5:36 IST
ಚಿತ್ರ
ಚಿತ್ರ   

ಬೀದರ್: ದೇವಸ್ಥಾನಗಳಿಗೆ ದೇಣಿಗೆ ನೀಡಿದ ವ್ಯಕ್ತಿಗಳನ್ನೇ ಗ್ರಾಮ ಪಂಚಾಯಿತಿಗಳಿಗೆ ಅವಿರೋಧ ಆಯ್ಕೆ ಮಾಡುವ ಪ್ರಕ್ರಿಯೆ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಇಂದಿಗೂ ತೆರೆಮರೆಯಲ್ಲಿ ಮುಂದುವರಿದಿರುವುದನ್ನು ಗ್ರಾಮಗಳ ಹಿರಿಯರು ಬಹಿರಂಗ ಪಡಿಸಿದ್ದಾರೆ. ಬೀದರ್‌, ಔರಾದ್‌ ಹಾಗೂ ಭಾಲ್ಕಿ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಹಿಂದೆ ದೇವಸ್ಥಾನ ಅಭಿವೃದ್ಧಿಗೆ ಹಣ ಕೊಟ್ಟ ಅನೇಕರನ್ನು ಅವಿರೋಧ ಆಯ್ಕೆ ಮಾಡಿರುವುದು ಖಚಿತಪಟ್ಟಿದೆ.

ಬೀದರ್‌ ತಾಲ್ಲೂಕಿನ ಆಣದೂರ ಗ್ರಾಮದ ವಾರ್ಡ್‌ವೊಂದರಲ್ಲಿ ಮೂರು ಅವಧಿಯಿಂದ ಅವಿರೋಧ ಆಯ್ಕೆ ನಡೆಯುತ್ತಿದೆ. ಕಾರಣ ವಿಚಾರಿಸಿದಾಗ ಪ್ರಾರ್ಥನಾ ಮಂದಿರ ಹಾಗೂ ಕಮಾನು ನಿರ್ಮಿಸಲು ಒಪ್ಪಿಕೊಂಡವರನ್ನೇ ಅವಿರೋಧ ಆಯ್ಕೆ ಮಾಡಿರುವುದು ಗೊತ್ತಾಗಿದೆ.

ಆಣದೂರಲ್ಲಿ ಸ್ವಪ್ರತಿಷ್ಠೆಗಾಗಿ ಮೂವರು ಸ್ಪರ್ಧಿಸಲು ನಿರ್ಧರಿಸಿದ್ದರು. ಆದರೆ, ಗ್ರಾಮದ ಮುಖಂಡರು ಅದಕ್ಕೆ ಅವಕಾಶ ಕೊಡದೆ ಸ್ವಾಗತ ಕಮಾನು ಕಟ್ಟುವ ಭರವಸೆ ನೀಡುವ ವ್ಯಕ್ತಿಗಳು ಮಾತ್ರ ಸ್ಪರ್ಧಿಸಬೇಕು ಎಂದು ಷರತ್ತು ವಿಧಿಸಿದರು ಎನ್ನಲಾಗಿದೆ. ಹೀಗಾಗಿ ಇಬ್ಬರು ಕಣದಿಂದ ಹಿಂದೆ ಸರಿದರು. ಅವಿರೋಧ ಆಯ್ಕೆಯಾದ ಒಬ್ಬರು ಸ್ವಾಗತ ಕಮಾನು ನಿರ್ಮಿಸಿದರು ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಔರಾದ್ ತಾಲ್ಲೂಕಿನ ತೇಗಂಪುರ ಗ್ರಾಮದಲ್ಲಿ ಎರಡು ಸ್ಥಾನಗಳಿಗೆ ಪ್ರತಿ ಬಾರಿ ಅವಿರೋಧ ಆಯ್ಕೆ ನಡೆ ಯುತ್ತಿದೆ. ಗ್ರಾಮದ ರೇವಪ್ಪಯ್ಯ ದೇವಸ್ಥಾನ ಅಭಿವೃದ್ಧಿಗೆ ಹೆಚ್ಚು ಹಣ ನೀಡಿದವರನ್ನು ಅವಿರೋಧ ಆಯ್ಕೆ ಮಾಡುವ ಪ್ರಕ್ರಿಯೆಗೆ ಈಗಲೂ ತೆರೆಮರೆಯಲ್ಲಿ ತಯಾರಿ ನಡೆದಿದೆ ಎಂದು ಹೇಳಲಾಗುತ್ತಿದೆ. ಕಳೆದ ಬಾರಿ ಇಲ್ಲಿ ದೇವಸ್ಥಾನಕ್ಕೆ ಹಣ ನೀಡಿದವರನ್ನು ಅವಿರೋಧ ಆಯ್ಕೆ ಮಾಡಲಾಗಿತ್ತು.

ಭಾಲ್ಕಿ ತಾಲ್ಲೂಕಿನ ಹಲಬರ್ಗಾ ಪಂಚಾಯಿತಿ ವ್ಯಾಪ್ತಿಯ ತರನಳ್ಳಿಯಲ್ಲಿ ಮೂವರು ಸದಸ್ಯರ ಆಯ್ಕೆಗೂ ಇದೇ ಪದ್ಧತಿ ಅನುಸರಿಸಲಾಗುತ್ತಿದೆ. ಇಲ್ಲಿ ಪಂಚಾಯಿತಿಗೆ ಸ್ಪರ್ಧಿಸುವವರು ರೇವಪ್ಪಯ್ಯ ಮಂದಿರದ ಅಭಿವೃದ್ಧಿಗೆ ಕನಿಷ್ಠ ₹2 ಲಕ್ಷ ಠೇವಣಿ ನೀಡಬೇಕು. ಗುಪ್ತ ಸಭೆಯಲ್ಲಿ ಹೆಚ್ಚು ಹಣ ನೀಡಲು ಒಪ್ಪಿದವರನ್ನು ಅವಿರೋಧ ಆಯ್ಕೆಗೆ ಶಿಫಾರಸು ಮಾಡಲಾಗುತ್ತದೆ ಎನ್ನುತ್ತಾರೆ ಗ್ರಾಮದ ಕೆಲವರು.

‘ಸುಖಾಸುಮ್ಮನೆ ಅರ್ಜಿ ಹಾಕುವವರಿಗೆ ಕಡಿವಾಣ ಹಾಕಲು ಗ್ರಾಮಸ್ಥರು ತಂತ್ರಗಾರಿಕೆ ರೂಪಿಸಿ ಆಕಾಂಕ್ಷಿಗಳು ಮೊದಲು ಗ್ರಾಮಸ್ಥರ ಬಳಿ ₹2 ಲಕ್ಷ ಠೇವಣಿ ಇಡಬೇಕು. ಹೆಚ್ಚು ಹಣ ನೀಡಿ ವ್ಯಕ್ತಿ ಆಯ್ಕೆಯಾದ ನಂತರ ಠೇವಣಿ ಇಟ್ಟ ಇನ್ನುಳಿದವರ ಮೊತ್ತದಿಂದ ಶೇಕಡ 10ರಷ್ಟು ಕಡಿತಗೊಳಿಸಿ ಮರಳಿಸಲು ನಿರ್ಧರಿಸಿದ್ದಾರೆ. ಎಲ್ಲವೂ ಅಧಿಕಾರಿಗಳಿಗೆ ಗೊತ್ತಾಗದ ರೀತಿಯಲ್ಲೇ ನಡೆಯುತ್ತಿದೆ. ಮಾಹಿತಿ ಬಹಿರಂಗ ಪಡಿಸಿದರೆ ಸಮಾಜದಿಂದ ಹೊರ ಹಾಕುವ ಭಯ ಇರುವ ಕಾರಣ ಗ್ರಾಮದ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ’ ಎಂದು ಕೆಲವರು ಹೇಳಿದರು.

‘ಗ್ರಾಮದಲ್ಲಿ ಆರ್ಥಿಕವಾಗಿ ಬಲಾಢ್ಯವಾಗಿರುವ ವ್ಯಕ್ತಿಗಳು ಧರ್ಮದ ಹೆಸರಿನಲ್ಲಿ ಬ್ಲ್ಯಾಕ್‌ಮೇಲ್‌ ಮಾಡಿ ಪಂಚಾಯಿತಿ ಮೇಲೆ ಪರೋಕ್ಷ ಹಿಡಿತ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲವಾಗಿರುವ ವ್ಯಕ್ತಿಗಳು ಸ್ಪರ್ಧಿಸದಂತೆ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳ ಬೇಕು’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿಜಯಕುಮಾರ ಸೋನಾರೆ ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.