
ಹುಲಸೂರ: ಸಮೀಪದ ಭಾಲ್ಕಿ ತಾಲ್ಲೂಕಿನ ಮೇಹಕರ ಗ್ರಾಮದಲ್ಲಿ ಭಾನುವಾರ ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೆರೆ ಅವರ ನೇತೃತ್ವದಲ್ಲಿ ಗ್ರಾಮದ ಒತ್ತುವರಿ ಮಾಡಲಾದ ಜಾಗವನ್ನು ಪೊಲೀಸ್ ಬಿಗಿ ಬಂದೋಬಸ್ತ್ ಮೂಲಕ ಹದ್ದುಬಸ್ತು ಕಾರ್ಯಾಚರಣೆ ನಡೆಸಲಾಯಿತು.
ಗ್ರಾಮದಲ್ಲಿ ಈ ಹಿಂದೆ ಸರ್ಕಾರಿ ಕಚೇರಿಗಳು ನಿರ್ಮಾಣ ಮಾಡಲು ಜಾಗದ ಕೊರತೆ ಹಿನ್ನೆಲೆಯ್ಲಿ ಹಲವು ವರ್ಷಗಳಿಂದ ಸಾರ್ವಜನಿಕರಿಂದ ಅತಿಕ್ರಮಣಗೊಂಡ ಸುಮಾರು 20 ಗುಂಟೆಗಿಂತ ಹೆಚ್ಚು ಜಾಗವನ್ನು ತೆರವುಗೊಳಿಸಿ ಹದ್ದುಬಸ್ತು ಮಾಡಿಕೊಂಡರು. ಕೆಲವರ ಆಕ್ಷೇಪ ಹೊರತುಪಡಿಸಿ ಬಹುತೇಕರು ಕಾರ್ಯಾಚರಣೆಗೆ ಸಹಕಾರ ನೀಡಿದರು.
ಈ ವೇಳೆ ಸ್ಥಳೀಯ ಮುಖಂಡ ಅಶೋಕ ಪಾಟೀಲ ಮಾತನಾಡಿ, ‘ಸರ್ಕಾರ ಈಗಾಗಲೇ ಈ ಜಾಗದಲ್ಲಿ ಸಾರ್ವಜನಿಕರಿಗೆ ಉಳಿಯಲು ಹಕ್ಕುಪತ್ರ ನೀಡಿದ್ದು, ಅಂತಹ ಫಲಾನುಭವಿಗಳಿಗೆ ಯಾವುದೇ ರೀತಿಯ ತೊಂದರೆ ನೀಡದೆ ಕಾರ್ಯಾಚರಣೆ ಮಾಡಬೇಕು. ಸರ್ಕಾರಿ ಕಚೇರಿ ಮಾಡಲು ಜಾಗದ ಕೊರತೆ ಇದ್ದರೆ ನಾನೇ ಒಂದು ಎಕರೆ ಜಮೀನು ಕೊಡಲು ಸಿದ್ಧನಿದ್ದೇನೆ’ ಎಂದರು.
ಗ್ರಾಮಸ್ಥ ಪ್ರಮೋದ ತೇಲಂಗ್ ಮಾತನಾಡಿ, ‘ಸರ್ಕಾರ ನಮಗೆ ವಾಸ ಮಾಡಲು ಹಕ್ಕುಪತ್ರ ನೀಡಿದ್ದು, ಈಗ ನಮಗೆ ಮನೆ ಬಿಟ್ಟು ಹೋಗಿ ಎಂದರೆ ಹೇಗೆ, ಸರ್ಕಾರದ ಹಕ್ಕು ಪತ್ರಕ್ಕೆ ಬೆಲೆ ಇಲ್ಲವೇ’ ಎಂದರು.
ತಹಶೀಲ್ದಾರ್ ಮಲ್ಲಿಕಾರ್ಜುನ್ ವಡ್ಡನಕೆರೆ ಮಾತನಾಡಿ, ‘ಈಗಾಗಲೇ ವಾಸ ಮಾಡಲು ಹಕ್ಕುಪತ್ರ ನೀಡಲಾಗಿತ್ತು, ಆದರೆ ಸಾರ್ವಜನಿಕರು ಮುಖ್ಯ ರಸ್ತೆಯ ಪಕ್ಕದಲ್ಲಿ ಅಂಗಡಿ - ಮುಂಗಟ್ಟುಗಳನ್ನು ನಿರ್ಮಿಸಿ ಹೆಚ್ಚಿನ ಬಾಡಿಗೆ ಹಣ ಪಡೆಯುತ್ತಿದ್ದು, ಹಕ್ಕುಪತ್ರ ರದ್ದುಗೊಳಿಸಲು ಮೇಲಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಒತ್ತುವರಿಗೊಂಡ ಜಮೀನನ್ನು ಜೆಸಿಬಿ ಮೂಲಕ ತೆರವು ಮಾಡಿ ಹದ್ದುಬಸ್ತು ಕಾರ್ಯಾಚರಣೆ ಮಾಡಲಾಗಿದೆ’ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಸೂರ್ಯಕಾಂತ ಬಿರಾದಾರ, ಲೋಕೋಪಯೋಗಿ ಜೆಇ ಅಲ್ತಾಫ್, ಗ್ರಾಮೀಣ ಸಿಪಿಐ ಹನುಮರೆಡ್ಡಿ, ಪಿಎಸ್‌ಐಗಳಾದ ಸುದರ್ಶನ ರೆಡ್ಡಿ, ಪ್ರಭಾಕರ ಪಾಟೀಲ, ವಿಶ್ವ, ಎಎಸ್‌ಐ ಶರಣಪ್ಪಾ ಪಟ್ನೆ, ಕಂದಾಯ ನಿರೀಕ್ಷಕ ಮುಲ್ಲಾ ಸಾಬ್, ಗ್ರಾಮ ಲೆಕ್ಕಾಧಿಕಾರಿ ರಫೀಕ್, ಪ್ರಭಾರ ಪಿಡಿಒ ಧನರಾಜ, ಪೊಲೀಸ್ ಇಲಾಖೆಯ ಅಧಿಕಾರಿಗಳು ಸೇರಿ ಹಲವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.