ADVERTISEMENT

ಮಾಲಿನ್ಯ ರಹಿತ ಪರಿಸರ ಎಲ್ಲರ ಗುರಿಯಾಗಲಿ

ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆಯಲ್ಲಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 14:07 IST
Last Updated 23 ನವೆಂಬರ್ 2022, 14:07 IST
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ವಿಜ್ಞಾನ ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ ಉದ್ಘಾಟಿಸಿದರು
ಭಾಲ್ಕಿ ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ವಿಜ್ಞಾನ ಪಿಯು ಕಾಲೇಜಿನಲ್ಲಿ ಬುಧವಾರ ನಡೆದ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮವನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ ಉದ್ಘಾಟಿಸಿದರು   

ಭಾಲ್ಕಿ: ‘ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಮಾಲಿನ್ಯ ರಹಿತ ಪರಿಸರ ನಿರ್ಮಾಣ ನಮ್ಮೆಲ್ಲರ ಗುರಿಯಾಗಬೇಕು’ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಮಲ್ಲಿಕಾರ್ಜುನ ಅಂಬಲಿ ಹೇಳಿದರು.

ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ವಿಜ್ಞಾನ ಪಿಯು ಕಾಲೇಜಿನಲ್ಲಿ ಬುಧವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪೊಲೀಸ್ ಇಲಾಖೆ, ವಕೀಲರ ಸಂಘ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಾಯು ಮಾಲಿನ್ಯ ಜಾಗೃತಿ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಮ್ಲಜನಕ ಬದುಕಿನ ಮೂಲ. ಅದು ಇಲ್ಲದೆ ಬದುಕುವುದು ಅಸಾಧ್ಯ. ಹಾಗಾಗಿ, ಎಲ್ಲರಿಗೆ ಉತ್ತಮ ಪ್ರಾಣವಾಯು ದೊರಕುವಂತಾಗಲು ಹೆಚ್ಚೆಚ್ಚು ಗಿಡ, ಮರಗಳನ್ನು ನೆಟ್ಟು ಬೆಳೆಸುವುದು ನಮ್ಮೆಲ್ಲರ ಆದ್ಯತೆಯಾಗಬೇಕು. ವಾಯು ಮಾಲಿನ್ಯ ತಡೆಗೆ ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸಬೇಕು ಎಂದು ತಿಳಿಸಿದರು.

ADVERTISEMENT

ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಗಾಳಿ, ಆಹ್ಲಾದಕರ ವಾತಾವರಣ ದೊರಕಬೇಕೆಂದು ಡಾ.ಬಸವಲಿಂಗ ಪಟ್ಟದ್ದೇವರು ಸುಮಾರು ಇಪ್ಪತ್ತು ಸಾವಿರ ಗಿಡಗಳನ್ನು ಬೆಳೆಸಿರುವುದು ಮಾದರಿ ಕಾರ್ಯ ಎಂದು ಶ್ಲಾಘಿಸಿದರು.

ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ್ ಜಾಫರ್ ಸಾದಿಕ್ ಮಾತನಾಡಿ,‘ವಾಹನಗಳಿಂದ ಹೊರ ಸೂಸುವ ಹೊಗೆ ಶೇ 82 ರಷ್ಟು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ವಾಯು ಮಾಲಿನ್ಯ ತಡೆಯಲು ವಾಹನಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ನಮ್ಮ ಇಲಾಖೆಯಿಂದ ವಾಯು ಮಾಲಿನ್ಯ ನಿಯಂತ್ರಣಕ್ಕೆ ವಾಹನವೊಂದಕ್ಕೆ ಮೂರು ಗಿಡ ನೀಡಿ ಅವುಗಳನ್ನು ಬೆಳೆಸಲು ವಾಹನ ಮಾಲೀಕರಿಗೆ ತಿಳಿ ಹೇಳುತ್ತಿದ್ದೇವೆ’ ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷೆ ಆರತಿ ತಿವಾರಿ, ಕಾರ್ಯದರ್ಶಿ ಸುನಿತಾ ಮಡ್ಡೆ, ಪ್ರಮುಖರಾದ ಕೈಲಾಸ ಮಡ್ಡೆ, ಅನಂತಕುಮಾರ, ಬಿ.ಮಹಾದೇವ ಹಾಗೂ ಅರ್ಜುನ ಇದ್ದರು.

ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಮಧುಕರ ಗಾಂವ್ಕರ್ ನಿರೂಪಿಸಿದರು. ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.