ADVERTISEMENT

ರಾಜ್ಯ ಸರ್ಕಾರ ಅಸ್ಥಿರಗೊಳಿಸಲು ಹುನ್ನಾರ ಆರೋಪ; ಶೋಷಿತರ ಒಕ್ಕೂಟ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 11:01 IST
Last Updated 5 ಆಗಸ್ಟ್ 2024, 11:01 IST
<div class="paragraphs"><p>ಶೋಷಿತ ಸಮುದಾಯಗಳ ಒಕ್ಕೂಟದವರು ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು</p></div>

ಶೋಷಿತ ಸಮುದಾಯಗಳ ಒಕ್ಕೂಟದವರು ಬೀದರ್‌ನ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೋಮವಾರ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿದರು

   

ಬೀದರ್‌: ರಾಜ್ಯ ಸರ್ಕಾರವನ್ನು ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಅವರು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಶೋಷಿತ ಸಮುದಾಯಗಳ ಒಕ್ಕೂಟದಿಂದ ನಗರದಲ್ಲಿ ಸೋಮವಾರ ಪ್ರತಿಭಟನಾ ರ್‍ಯಾಲಿ, ರಸ್ತೆತಡೆ ನಡೆಸಲಾಯಿತು.

ನಗರದ ಬೊಮ್ಮಗೊಂಡೇಶ್ವರ ವೃತ್ತದಲ್ಲಿ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶೋಷಿತ ಸಮುದಾಯಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಪ್ರಮುಖ ಮಾರ್ಗಗಳಲ್ಲಿ ರ್‍ಯಾಲಿ ನಡೆಸಿದರು. ಮಾರ್ಗದುದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ, ಕಾಂಗ್ರೆಸ್‌ ಸರ್ಕಾರ ಪರ ಹಾಗೂ ಜೈ ಸಂವಿಧಾನ, ಜೈ ಭೀಮ್‌ ಎಂದು ಘೋಷಣೆಗಳನ್ನು ಹಾಕಿದರು. ದಿಕ್ಕಾರ ದಿಕ್ಕಾರ ರಾಜ್ಯಪಾಲರಿಗೆ ದಿಕ್ಕಾರ, ಬಿಜೆಪಿ–ಜೆಡಿಎಸ್‌ನವರಿಗೆ ದಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ತಮಟೆ ಬಾರಿಸಿ ಗಮನ ಸೆಳೆದರು.

ADVERTISEMENT

ನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಕೆಲಕಾಲ ರಸ್ತೆತಡೆ ನಡೆಸಿದರು. ಇದರಿಂದ ಕೆಲಸಮಯ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿ, ಸಾರ್ವಜನಿಕರು ಪರದಾಡಿದರು. ಆನಂತರ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದರು. ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ಸಲ್ಲಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಬದಲು ಕಿರಿಯ ಅಧಿಕಾರಿಯನ್ನು ಮನವಿ ಪತ್ರ ಸ್ವೀಕರಿಸಲು ಬಂದಾಗ, ಒಕ್ಕೂಟದವರು ಜಿಲ್ಲಾಧಿಕಾರಿಯವರೇ ಬಂದು ತೆಗೆದುಕೊಳ್ಳಬೇಕು ಎಂದು ಪಟ್ಟು ಹಿಡಿದಾಗ, ಶಿಲ್ಪಾ ಅವರು ಬಂದು ಮನವಿ ಸ್ವೀಕರಿಸಿದರು.

ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್‌ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರು ಕೈ ಹಾಕಿದರೆ ರಾಜಭವನಕ್ಕೆ ಮುತ್ತಿಗೆ ಹಾಕಲಾಗುವುದು. ರಾಜ್ಯದಲ್ಲಿ ಕೋಮುವಾದಿಗಳು, ಪಟ್ಟಭದ್ರ ಹಿತಾಸಕ್ತಿಗಳು ಅಧಿಕಾರದ ಆಸೆಗೆ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗಿವೆ. ಇದಕ್ಕಾಗಿ ಬಿಜೆಪಿ–ಜೆಡಿಎಸ್‌ ನಾಯಕರು ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರದ ಕುಮ್ಮಕ್ಕು ಕೂಡ ಇದ್ದು, ರಾಜ್ಯಪಾಲರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಒಕ್ಕೂಟದ ಮುಖಂಡರು ಆರೋಪಿಸಿದರು.

40 ವರ್ಷಗಳ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಸಿದ್ದರಾಮಯ್ಯನವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಒಂದೇ ಒಂದೂ ಕಪ್ಪು ಚುಕ್ಕೆಯಿಲ್ಲದ ಅವರಿಗೆ ರಾಜಕೀಯವಾಗಿ ಕಪ್ಪು ಮಸಿ ಬಳಿಯಲು ಬಿಜೆಪಿ–ಜೆಡಿಎಸ್‌ ರಾಜ್ಯ ನಾಯಕರು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ರಾಷ್ಟ್ರೀಯ ನಾಯಕರು ಇದಕ್ಕೆ ಕುಮ್ಮಕ್ಕು ಕೊಡುತ್ತಿದ್ದಾರೆ ಎಂದು ಆರೋಪ ಮಾಡಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಮತ್ತು ಮಹರ್ಷಿ ವಾಲ್ಮೀಕಿ ನಿಗಮದ ವಿವಾದದಲ್ಲಿ ಅನಗತ್ಯವಾಗಿ ಸಿದ್ದರಾಮಯ್ಯನವರ ಹೆಸರು ತಳಕು ಹಾಕುತ್ತಿರುವುದು ಖಂಡನಾರ್ಹ. ತಮ್ಮ ಮೇಲಿನ ಆರೋಪಕ್ಕೆ ಸ್ವತಃ ಸಿದ್ದರಾಮಯ್ಯನವರೇ ತನಿಖಾ ಆಯೋಗ ರಚಿಸಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ದೇವರಾಜ ಅರಸು, ವೀರಪ್ಪ ಮೊಯ್ಲಿ, ಎಸ್‌. ಬಂಗಾರಪ್ಪ, ಎನ್‌. ಧರ್ಮಸಿಂಗ್‌ ವಿರುದ್ಧವೂ ಇದೇ ರೀತಿಯ ಷಡ್ಯಂತ್ರ ನಡೆಸಲಾಗಿತ್ತು ಎಂದು ಆರೋಪಿಸಿದರು.

ಸಿದ್ದರಾಮಯ್ಯನವರ ಹಿಂದೆ ಶೋಷಿತ ಸಮುದಾಯಗಳು ಹಾಗೂ ಕಾಂಗ್ರೆಸ್‌ ಪಕ್ಷ ಬಂಡೆಯಂತೆ ನಿಂತಿದೆ. ಇದು ಕಳೆದ ಚುನಾವಣೆಯಲ್ಲೂ ಗೊತ್ತಾಗಿದೆ. ಆದರೆ, ಬಿಜೆಪಿ–ಜೆಡಿಎಸ್‌ನವರು ಸಿದ್ದರಾಮಯ್ಯನವರ ತೇಜೋವಧೆಯಲ್ಲಿ ತೊಡಗಿವೆ. ಈ ಕುತಂತ್ರ ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಮುಖಂಡರಾದ ಅಬ್ದುಲ್‌ ಮನ್ನಾನ್‌ ಸೇಠ್‌, ಬಸವರಾಜ ಮಾಳಗೆ, ರಮೇಶ ಡಾಕುಳಗಿ, ಡಾ. ರಾಜಶೇಖರ ಸೇಡಂಕರ್‌, ವಿಠ್ಠಲದಾಸ್‌ ಪ್ಯಾಗೆ, ಶ್ರೀಪತರಾವ್‌ ದೀನೆ, ಗೋವರ್ಧನ ರಾಠೋಡ್‌, ಜಾನ್‌ ವೇಸ್ಲಿ, ಅಶೋಕಕುಮಾರ ಮಾಳಗೆ, ತಾನಾಜಿ ಸಾಗರ, ದೇವಿದಾಸ ತುಮಕುಂಟೆ, ರಮೇಶ ಪೋರ್ಲ, ರಘುನಾಥ ಗಾಯಕವಾಡ, ಶಿವಕುಮಾರ ನೀಲಿಕಟ್ಟೆ, ಪ್ರದೀಪ್‌ ನಾಟೇಕರ್‌, ಸಂದೀಪ್‌ ಕಾಂಟೆ, ತುಮಕರಾಮ್‌ ಚಿಮಕೋಡೆ, ಲೋಕೇಶ ಮಿರ್ಜಾಪೂರ, ಚಂದ್ರಕಾಂತ ನಿರಾಟೆ ಮತ್ತಿತರರು ಪಾಲ್ಗೊಂಡಿದ್ದರು.

ಸಿದ್ದರಾಮಯ್ಯನವರನ್ನು ರಾಜಕೀಯವಾಗಿ ಮುಗಿಸಿ, ಶಾಶ್ವತವಾಗಿ ಹಿಂದುಳಿದ ವರ್ಗಗಳನ್ನು ಅಧಿಕಾರದಿಂದ ದೂರವಿಡಲು ನಡೆಸುತ್ತಿರುವ ಹುನ್ನಾರವಿದು.
–ಬಾಬುರಾವ್‌ ಪಾಸ್ವಾನ್‌, ಮುಖಂಡ, ಶೋಷಿತ ಸಮುದಾಯಗಳ ಒಕ್ಕೂಟ
ಸಿದ್ದರಾಮಯ್ಯನವರನ್ನು ಅಧಿಕಾರದಿಂದ ಕೆಳಗಿಳಿಸಿ ಹಿಂದುಳಿದ ವರ್ಗಗಳ ನಾಯಕತ್ವಕೋಡೆ, ಜಿಲ್ಲಾಧ್ಯಕ್ಷ, ಗ್ಯಾರಂಟಿ ಅನುಷ್ಠಾನ ಸಮಿತಿ
ಕೊನೆಗಾಣಿಸಲು ಹುನ್ನಾರ ನಡೆಸಿರುವುದು ಖಂಡನಾರ್ಹ. –ಅಮೃತರಾವ್‌ ಚಿಮ
ಸಿದ್ದರಾಮಯ್ಯನವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಹಿಂದುಳಿದವರು ಅಧಿಕಾರ ನಡೆಸಲು ಅಸಮರ್ಥರು ಎಂದು ಬಿಂಬಿಸುವ ಹುನ್ನಾರ ಖಂಡನೀಯ.
–ಅನಿಲ್‌ಕುಮಾರ್‌ ಬೇಲ್ದಾರ್‌, ಮುಖಂಡ, ಶೋಷಿತ ಸಮುದಾಯಗಳ ಒಕ್ಕೂಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.