ADVERTISEMENT

ಬೀದರ್‌: ಶಾಲೆಯಲ್ಲಿ ನಕಲಿ ದಾಖಲಾತಿ ಹಾವಳಿ

ಮಕ್ಕಳ ಹೆಸರಲ್ಲಿ ಸರ್ಕಾರಿ ಸವಲತ್ತುಗಳ ಪ್ರಯೋಜನ ಯಾರಿಗೆ?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 28 ಫೆಬ್ರುವರಿ 2025, 6:06 IST
Last Updated 28 ಫೆಬ್ರುವರಿ 2025, 6:06 IST
   

ಬೀದರ್‌: ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಕ್ಕಳು ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ನಕಲಿ ದಾಖಲಾತಿ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 2,252 ಮಕ್ಕಳು ನಕಲಿ ದಾಖಲಾತಿ ಪಡೆದಿರುವುದು ಸರ್ಕಾರದ ಅಧಿಕೃತ ದಾಖಲಾತಿಗಳಲ್ಲಿಯೇ ಇದೆ. ಬೀದರ್‌ ತಾಲ್ಲೂಕು ವ್ಯಾಪ್ತಿಯಲ್ಲಿ ಅತಿ ಹೆಚ್ಚು ನಕಲಿ ದಾಖಲಾತಿಗಳಿದ್ದರೆ, ಔರಾದ್‌ ತಾಲ್ಲೂಕಿನಲ್ಲಿ ಕಡಿಮೆಯಿದೆ.

ಒಂದೇ ಮಗು ಅಥವಾ ವಿದ್ಯಾರ್ಥಿ ಎರಡೂ ಕಡೆ ದಾಖಲಾತಿ ಪಡೆದಿರುವುದು ಗೊತ್ತಿದ್ದರೂ, ವಿದ್ಯಾರ್ಥಿ ಹೆಸರಲ್ಲಿ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಸಹಜವಾಗಿಯೇ ಒಂದು ಕಡೆಯಲ್ಲಿ ವಿದ್ಯಾರ್ಥಿ ಭೌತಿಕವಾಗಿದ್ದು, ನೇರ ಅದರ ಪ್ರಯೋಜನ ಪಡೆಯುತ್ತಾನೆ. ಇನ್ನೊಂದು ಶಾಲೆಯಲ್ಲಿ ಮಗುವಿನ ಹೆಸರಿನಲ್ಲಿ ಸಿಗುವ ಸೌಲಭ್ಯಗಳು ಯಾರಿಗೆ ತಲುಪುತ್ತಿವೆ? ಯಾರು ಅದರ ಲಾಭ ಪಡೆಯುತ್ತಿದ್ದಾರೆ? ಎಂಬುದು ಅನುಮಾನಕ್ಕೆ ಕಾರಣವಾಗಿದೆ.

ADVERTISEMENT

ಸರ್ಕಾರವು, ಪ್ರತಿ ವಿದ್ಯಾರ್ಥಿಗೂ ಪುಸ್ತಕ, ಹಾಲು, ಮೊಟ್ಟೆ, ಶೂ, ಬ್ಯಾಗ್‌ ಸೇರಿದಂತೆ ಇತರೆ ಸೌಕರ್ಯಗಳನ್ನು ಒದಗಿಸುತ್ತಿದೆ. ಹಾಗಿದ್ದರೆ 2,252 ವಿದ್ಯಾರ್ಥಿಗಳ ಹೆಸರಿನಲ್ಲಿ ಸರ್ಕಾರದಿಂದ ಬರುತ್ತಿರುವ ಈ ಎಲ್ಲ ವಸ್ತುಗಳು ಎಲ್ಲಿಗೆ ಹೋಗುತ್ತಿವೆ?

ಕೆಲವರು ಗ್ರಾಮೀಣ ಮೀಸಲಾತಿ ಸೌಲಭ್ಯ ಪಡೆಯುವ ಕಾರಣದಿಂದ ಎರಡು ಕಡೆ ದಾಖಲಾತಿ ಪಡೆದಿರುವುದು ಗೊತ್ತಾಗಿದೆ. ಪೋಷಕರು ಅವರ ಮಕ್ಕಳಿಗೆ ನಗರ ಪ್ರದೇಶದಲ್ಲಿ ಉತ್ತಮ ಖಾಸಗಿ ಶಾಲೆಯಲ್ಲಿ ಸೇರಿಸಿರುತ್ತಾರೆ. ಆದರೆ, ಗ್ರಾಮೀಣ ಕೃಪಾಂಕ ಸೌಲಭ್ಯಕ್ಕಾಗಿ ಜಿಲ್ಲೆಯ ಯಾವುದಾದರೂ ಮೂಲೆಯ ಒಂದು ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಪಡೆದಿರುತ್ತಾರೆ. ಒಂದು ದಿನವೂ ಮಗು ಶಾಲೆಗೆ ಹೋಗಿರುವುದಿಲ್ಲ. ಇದೆಲ್ಲ ಶಾಲೆ ಮುಖ್ಯಶಿಕ್ಷಕರಿಗೆ ಗೊತ್ತಿದ್ದರೂ ಮೌನವಾಗಿರುತ್ತಾರೆ. ಹಣದ ವಹಿವಾಟು ಕೂಡ ಇದರ ಹಿಂದಿದೆ ಎಂಬ ಆರೋಪಗಳು ಕೇಳಿ ಬಂದಿವೆ.

‘ಯಾವುದೇ ವಿದ್ಯಾರ್ಥಿ ಎರಡು ಕಡೆ ದಾಖಲಾತಿ ಪಡೆದಿದ್ದರೆ ಪೋಷಕರನ್ನು ಕರೆದು ವಿಚಾರಿಸಿ, ಎಚ್ಚರಿಕೆ ಕೊಟ್ಟು ಒಂದು ಕಡೆಯ ದಾಖಲಾತಿ ರದ್ದುಪಡಿಸಬೇಕು. ಆದರೆ, ಶಿಕ್ಷಣ ಇಲಾಖೆ ಆ ಕೆಲಸವನ್ನೇಕೆ ಮಾಡುತ್ತಿಲ್ಲ. ಸರ್ಕಾರದ ಸೌಲಭ್ಯ, ಅನುದಾನ ದುರ್ಬಳಕೆ ಕೂಡ ಆಗುವ ಸಾಧ್ಯತೆ ಇದರಲ್ಲಿ ಹೆಚ್ಚಿದೆ. ಗ್ರಾಮೀಣ ಮೀಸಲಾತಿ ಸೌಲಭ್ಯ ಪಡೆಯುವ ವಿಚಾರ ಗುಟ್ಟಾಗೇನೂ ಉಳಿದಿಲ್ಲ. ಹೀಗಿರುವಾಗ ಶಿಕ್ಷಣ ಇಲಾಖೆ ತುರ್ತಾಗಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಒತ್ತಾಯಿಸಿದ್ದಾರೆ.

‘ಸರ್ಕಾರಿ ಶಾಲೆಗಳಿರುವುದು ಬಡ ಮಕ್ಕಳಿಗಾಗಿ. ಆದರೆ, ಅವರ ಹೆಸರಿನಲ್ಲಿ ಸಿರಿವಂತರು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಎರಡೆರಡು ಕಡೆ ದಾಖಲಾತಿ ಹೊಂದಿದವರ ವಿರುದ್ಧ ಕ್ರಮಕ್ಕೆ ವಿಶೇಷ ಅಭಿಯಾನ ನಡೆಸಬೇಕು. ಈ ವಿಚಾರವನ್ನು ಆಯೋಗ ಗಂಭೀರವಾಗಿ ತೆಗೆದುಕೊಳ್ಳಲಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.