ADVERTISEMENT

ಔರಾದ್ | ಅಮರೇಶ್ವರ ಜಾತ್ರೆ: ಇತಿಹಾಸದ ಪುಟ ಸೇರಿದ ಒಂಟೆ ವೈಭವ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 6:02 IST
Last Updated 16 ಫೆಬ್ರುವರಿ 2026, 6:02 IST
<div class="paragraphs"><p>ಔರಾದ್ ಪಟ್ಟಣದಲ್ಲಿ ನಡೆಯುವ ಒಂಟೆ ಜಾತ್ರೆ ಸಾಂದರ್ಭಿಕ ಚಿತ್ರ&nbsp;</p></div>

ಔರಾದ್ ಪಟ್ಟಣದಲ್ಲಿ ನಡೆಯುವ ಒಂಟೆ ಜಾತ್ರೆ ಸಾಂದರ್ಭಿಕ ಚಿತ್ರ 

   

ಔರಾದ್: ಒಮ್ಮೆ ರಾಜ್ಯದ ಏಕೈಕ ಒಂಟೆ ಜಾತ್ರೆ ಎಂಬ ಖ್ಯಾತಿ ಪಡೆದಿದ್ದ ಔರಾದ್‌ ಅಮರೇಶ್ವರ ಜಾತ್ರೆ ಇಂದು ತನ್ನ ವಿಶಿಷ್ಟ ಒಂಟೆ ವೈಭವವನ್ನು ಕಳೆದುಕೊಂಡು ಇತಿಹಾಸದ ಪುಟ ಸೇರಿದೆ. ಕಾಲ ಬದಲಾವಣೆಯೊಂದಿಗೆ ಸಂಪ್ರದಾಯಗಳ ಮಗ್ಗಲುಗಳು ಬದಲಾಗಿವೆ.

ಅಪರೂಪವಾಗಿ ಕಾಣಸಿಗುವ ಒಂಟೆಗಳ ಮೆರವಣಿಗೆ, ಅಲಂಕೃತ ಸಿಂಗಾರ, ಗ್ರಾಮೀಣ ಜನರ ಕೌತುಕ—ಇವೆಲ್ಲವೂ ಅಮರೇಶ್ವರ ಜಾತ್ರೆಯ ವೈವಿದ್ಯ ಗುರುತುಗಳಾಗಿದ್ದವು. ದೂರದ ಊರುಗಳಿಂದ ಒಂಟೆಗಳನ್ನು ತರಿಸಿ, ಜಾತ್ರೆ ಮೈದಾನದಲ್ಲಿ ಪ್ರದರ್ಶನ–ವ್ಯಾಪಾರ ನಡೆಸಲಾಗುತ್ತಿತ್ತು. ಕೃಷಿ, ಸಾರಿಗೆ ಹಾಗೂ ವ್ಯಾಪಾರಿಕ ಉದ್ದೇಶಗಳಿಗೆ ಒಂಟೆಗಳ ಖರೀದಿ–ಮಾರಾಟ ಇಲ್ಲಿ ನಡೆಯುತ್ತಿತ್ತು. ಈಗಲೂ ಇಲ್ಲಿ ವಾರಕ್ಕೊಮ್ಮೆ ನಡೆಯುವ ಜಾನುವಾರು ಸಂತೆ ಹಾಗೂ ವರ್ಷಕೊಮ್ಮೆ ನಡೆಯುವ ಪಶು ಪ್ರದರ್ಶನ ಜಾತ್ರೆ ವೈಭವ ಗಟ್ಟಿಯಾಗಿಸಿದೆ ಎನ್ನುತ್ತಾರೆ ಇಲ್ಲಿಯ ಅಮರೇಶ್ವರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ಬಸವರಾಜ ದೇಶಮಖ.

ADVERTISEMENT

ಅಮರೇಶ್ವರ ಜಾತ್ರೆಯ ವೈಶಿಷ್ಟ್ಯ ಉಳಿಸಬೇಕಾದರೆ ಒಂಟೆ ಜಾತ್ರೆ ಪರಂಪರೆಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ ಅಗತ್ಯ. ಪ್ರವಾಸೋದ್ಯಮದ ದೃಷ್ಟಿಯಿಂದಲೂ ಇದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಬಹುದು. ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಕೈಜೋಡಿಸಿದರೆ ಇತಿಹಾಸದ ಪುಟ ಸೇರಿರುವ ಈ ವೈಭವಕ್ಕೆ ಹೊಸ ಜೀವ ತುಂಬಬಹುದು ಎಂಬ ಆಶಾಭಾವ ಇಲ್ಲಿಯ ಪ್ರಜ್ಞಾವಂತರಲ್ಲಿ ವ್ಯಕ್ತವಾಗಿದೆ.

ಅಮರೇಶ್ವರ ದೇವಸ್ಥಾನದ ಪರಿಚಯ

ಔರಾದ್ ಪಟ್ಟಣದಲ್ಲಿರುವ ಅಮರೇಶ್ವರ ದೇವಸ್ಥಾನ ಬೀದರ್ ಜಿಲ್ಲಾ ಕೇಂದ್ರದಿಂದ 45 ಕಿ.ಮೀ. ಹಾಗೂ ರಾಜಧಾನಿ ಬೆಂಗಳೂರಿನಿಂದ 777 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನ 10ನೇ ಶತಮಾನದಲ್ಲಿ ನಿರ್ಮಾಣ ಆಗಿದೆ. ದೇವಾಲಯದ ವಿನ್ಯಾಸವು ಸಾಂಪ್ರದಾಯಿಕ ದ್ರಾವಿಡ ಶೈಲಿಯನ್ನು ಅನುಸರಿಸುತ್ತದೆ ಮತ್ತು ಸೂಕ್ಷ್ಮವಾಗಿ ಕೆತ್ತಿದ ಕಂಬಗಳು ಹಾಗೂ ದೊಡ್ಡ ಸಭಾಂಗಣವನ್ನು ಹೊಂದಿದೆ.

ಔರಾದ್ ದೇವಸ್ಥಾನದ ಗರ್ಭ ಗುಡಿಯಲ್ಲಿನ ಅಮರೇಶ್ವರ ಪ್ರತಿಮೆ

ಸ್ಥಳೀಯರು ಹೇಳುವ ಪ್ರಕಾರ ಸಂತ ಅಮರೇಶ್ವರ ದೇವರು 10ನೇ ಶತಮಾನಕ್ಕೂ ಮೊದಲು ಹಲವು ವರ್ಷಗಳ ಕಾಲ ಇಲ್ಲಿ ಧ್ಯಾನ ಮಾಡಿದ್ದರು. ಹತ್ತಿರದ ಯನಗುಂದ ಗ್ರಾಮದಿಂದ ಹಸುಗಳು ಪ್ರತಿದಿನ ಮೇಯಲು ಕಾಡಿಗೆ ಹೋಗುತ್ತಿದ್ದವು. ಒಂದು ದಿನ ಅಮರೇಶ್ವರ ದೇವರು ಧ್ಯಾನದಲ್ಲಿದ್ದಾಗ ಒಂದು ಹಸು ತನ್ನ ಬಳಿ ರೂಪುಗೊಂಡಿದ್ದ ಇರುವೆ ಗೂಡಿಗೆ ಹಾಲುಣಿಸುತ್ತಿರುವುದು ಕಂಡುಬಂತು. ಹಸು ಮನೆಗೆ ಹಿಂದಿರುಗಿದಾಗ, ಅದರ ಕೆಚ್ಚಲು ಖಾಲಿಯಾಗಿತ್ತು. ಇದನ್ನು ಗಮನಿಸಿದ ರೈತನು ಹಸುವನ್ನು ಹಿಂಬಾಲಿಸಿ ಕಾಡಿಗೆ ಹೋಗಲು ನಿರ್ಧರಿಸಿದನು. ಹಸು ಒಂದು ನಿರ್ದಿಷ್ಟ ದಿಬ್ಬದ ಮೇಲೆ ನಿಂತಿತ್ತು. ಮತ್ತು ಅದರ ಹಾಲು ನೆಲದಲ್ಲಿದ್ದ ಸಣ್ಣ ರಂಧ್ರಕ್ಕೆ ಹರಿಯಿತು. ಕುತೂಹಲದಿಂದ ರೈತ ಅಗೆದು ನೋಡಿದಾಗ ಒಂದು ಲಿಂಗ ಕಂಡುಬಂತು. ಬಳಿಕ ಗ್ರಾಮಸ್ಥರು ಈ ಲಿಂಗವನ್ನು ಉದ್ಭವ ಲಿಂಗ ಎಂದು ಪೂಜಿಸಲು ಆರಂಭಿಸಿದರು ಎಂಬ ಪ್ರತೀತಿ ಇದೆ.

ಪ್ರತಿ ವರ್ಷ ಮಹಾಶಿವರಾತ್ರಿ ಸಂದರ್ಭದಲ್ಲಿ ಅಮರೇಶ್ವರ ಜಾತ್ರೆ ನಡೆಯುತ್ತದೆ. ಪಕ್ಕದ ಮಹಾರಾಷ್ಟ್ರ ಹಾಗೂ ತೆಲಂಗಾಣ ಸೇರಿದಂತೆ ವಿವಿಧೆಡೆಯ ಭಕ್ತರು ಬಂದು ಜಾತ್ರೆಯುಲ್ಲಿ ಪಾಲ್ಗೊಳ್ಳುತ್ತಾರೆ.

ದೇವಸ್ಥಾನ ಅಭಿವೃದ್ಧಿ ಮರೀಚಿಕೆ
ಶಿಥಿಲಗೊಂಡ ಮಹಾದ್ವಾರ ನಿರ್ಮಾಣ ಸೇರಿದಂತೆ ಅಮರೇಶ್ವರ ದೇವಸ್ಥಾನ ಅಭಿವೃದ್ಧಿ ಆಗಬೇಕು ಎಂಬುದು ಭಕ್ತರ ಬಯಕೆ. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗಾಗಿ ₹ 2 ಕೋಟಿ ಯೋಜನಾ ವರದಿ ಕಳುಹಿಸಲಾಗಿದೆ. ಆದರೆ ಸರ್ಕಾರದಿಂದ ಅನುಮತಿ ಸಿಗದೆ ಕಾಮಗಾರಿ ಆರಂಭವಾಗಿಲ್ಲ. ಅಮರೇಶ್ವರ ದೇವಸ್ಥಾನ ಅಭಿವೃದ್ಧಿಗಾಗಿ ಸಾಮಾಜಿಕ ಹೋರಾಟಗಾರ ಗುರುನಾಥ ವಡ್ಡೆ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.