ADVERTISEMENT

ಸೋಯಾ, ತೊಗರಿ, ಕಬ್ಬು ಮಾಹಿತಿ ಕೇಳಿದ ರೈತರು

ಕೃಷಿಕರಲ್ಲಿ ಆಸಕ್ತಿ ಕೆರಳಿಸಿದ ಜೆಎಸ್–355, ಫುಲೆಸಂಗಮ್‌

ಚಂದ್ರಕಾಂತ ಮಸಾನಿ
Published 17 ಮೇ 2022, 16:26 IST
Last Updated 17 ಮೇ 2022, 16:26 IST
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ   

ಬೀದರ್‌: ಜಿಲ್ಲೆಗೆ ಮುಂಗಾರು ಪ್ರವೇಶಿಸಲು ಮೂರು ವಾರ ಮಾತ್ರ ಬಾಕಿ ಇದೆ. ಜಿಲ್ಲೆಯಲ್ಲಿ ಒಂದು ಬಾರಿ ಮಾತ್ರ ಅಕಾಲಿಕ ಮಳೆ ಸುರಿದಿದೆ. ಮುಂಗಾರು ಬಿತ್ತನೆಗೆ ರೈತರು ಅಲ್ಲಲ್ಲಿ ಭೂಮಿ ಹದಗೊಳಿಸಲು ಶುರು ಮಾಡಿದ್ದಾರೆ. ಜಿಲ್ಲೆಯಲ್ಲಿ ಬಹುತೇಕ ರೈತರು ಸೋಯಾ ಬೆಳೆದಿದ್ದರೂ ‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಸೋಯಾಕ್ಕೆ ಸಂಬಂಧಪಟ್ಟ ಅನುಮಾನಗಳನ್ನು ನಿವಾರಿಸಿಕೊಂಡರು. ಪರ್ಯಾಯ ಬೆಳೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.

ಮಳೆಗಾಲ ಸಮೀಪಿಸುತ್ತಿದ್ದರೂ ತಾಲ್ಲೂಕು ಮಟ್ಟದಲ್ಲಿ ಕೃಷಿ ಅಧಿಕಾರಿಗಳು ರೈತರಿಗೆ ಸಮರ್ಪಕ ಮಾಹಿತಿ ಕೊಡುತ್ತಿಲ್ಲ ಎನ್ನುವ ದೂರುಗಳು ಸಹ ಕೇಳಿ ಬಂದವು. ಹೊಸ ತಳಿಯ ಸೋಯಾ, ಬಿತ್ತನೆ ವಿಧಾನ ಹಾಗೂ ಸಮಗ್ರ ಕೃಷಿ ಪದ್ಧತಿ ಬಗ್ಗೆ ಕೃಷಿ ವಿಜ್ಞಾನಿಯಿಂದ ಭರಪೂರ ಮಾಹಿತಿ ಆಲಿಸಿದರು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಹಾಗೂ ಜನವಾಡದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸುನೀಲಕುಮಾರ ಎನ್.ಎಂ ಅವರು ರೈತರ ಎಲ್ಲ ಬಗೆಯ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸಿದರು.

* * *

ADVERTISEMENT

ಪ್ರಶ್ನೆ: ಸೋಯಾಗೆ ಪರ್ಯಾಯವಾಗಿ ಏನು ಬೆಳೆಯಬಹುದು?

ಡಾವರಗಾಂವದ ರಾಜಶೇಖರ ಶೇರಿಕಾರ್

ಉ: ಪ್ರಸ್ತುತ ಸೋಯಾ ಬೆಳೆಯೇ ಸೂಕ್ತವಾಗಿದೆ. ಹೊಲದಲ್ಲಿ ಎರಡು ಸಾಲಿನ ಮುಕರಿ ತೆಗೆದು ಬೀಜ ಊರಬೇಕು. 10 ಸೆಂ.ಮೀ ಅಂತರದಲ್ಲಿ ನಾಟಿ ಮಾಡಿದರೆ ಫಸಲು ಚೆನ್ನಾಗಿ ಬರುತ್ತದೆ. ಬಿತ್ತನೆಗೆ ಕಡಿಮೆ ಬೀಜ ತಗಲುತ್ತದೆ. ಉತ್ತಮ ಇಳುವರಿ ಸಹ ಬರುತ್ತದೆ.


* ತೊಗರಿ ಹೂವು ಒಣಗುತ್ತಿದೆ. ಏನು ಮಾಡಬೇಕು?

ರಾಜಶೇಖರ

ಉ: ಸಕಾಲದಲ್ಲಿ ನೀರು ಕೊಟ್ಟರೆ ಸಮಸ್ಯೆ ಇರುವುದಿಲ್ಲ. ಬೇರಿಗೆ ನೀರು ಕಡಿಮೆಯಾದಾಗ ಹೂವು ಒಣಗುತ್ತದೆ. ಹೂವು ಬಿಡುವ ಹಂತದಲ್ಲಿ ಬೆಳೆಗೆ ನೀರು ಕೊಡಬೇಕು.


* ಕಬ್ಬಿನಲ್ಲಿ ಅಂತರ ಬೆಳೆಯಾಗಿ ಸೋಯಾ ಬೆಳೆಯಬಹುದಾ?

ಚಿಟಗುಪ್ಪದ ವಿಠ್ಠಲರಾವ್‌

ಉ: ಕಬ್ಬಿನಲ್ಲಿ ಕಡಿಮೆ ಅವಧಿಗೆ ಬರುವ ಬೆಳೆಗಳನ್ನು ಬೆಳೆಯಬಹುದಾಗಿದೆ. ಉದ್ದು ಬಿತ್ತನೆ ಮಾಡುವುದು ಒಳ್ಳೆಯದು.


* ಕೃಷಿ ಇಲಾಖೆಯವರು ಸರಿಯಾಗಿ ಮಾಹಿತಿ ಕೊಡುತ್ತಿಲ್ಲ. ನಿಮ್ಮಿಂದಾದರೂ ಮಾಹಿತಿ ದೊರಕಬಹುದೆ?

ಔರಾದ್‌ ತಾಲ್ಲೂಕಿನ ಧನರಾಜ್ ಮುಸ್ತಾಪುರ

ಉ: ಕೃಷಿ ಇಲಾಖೆ ಅಧಿಕಾರಿಗಳು ಸಾಮಾನ್ಯವಾಗಿ ಮಾಹಿತಿ ಕೊಡುತ್ತಾರೆ. ನೇರವಾಗಿ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ಕೊಟ್ಟು ತಮಗೆ ಬೇಕಿರುವ ಮಾಹಿತಿ ಪಡೆಯಬಹುದಾಗಿದೆ. ಕೃಷಿ ವಿಜ್ಞಾನ ಕೇಂದ್ರದಿಂದಲೂ ರೈತರಿಗೆ ಅಗತ್ಯ ಮಾಹಿತಿ ಪೂರೈಸಲಾಗುವುದು.


* ಮೂರು ಎಕರೆ ಪ್ರದೇಶದಲ್ಲಿ ಸೋಯಾ ಬಿತ್ತನೆ ಮಾಡುವ ವಿಚಾರವಿದೆ. ಇದಕ್ಕೆ ಮಾರ್ಗದರ್ಶನ ಕೊಡಿ

ಭಾಲ್ಕಿ ತಾಲ್ಲೂಕಿನ ಚಂದಾಪುರದ ಮಾರುತಿ

ಉ: ಸೋಯಾದ ಜೆಎಸ್‌–335 ತಳಿ ಒಳ್ಳೆಯ ಇಳುವರಿ ಕೊಡುತ್ತದೆ. ಒಂದು ಎಕರೆಗೆ 8 ಕೆ.ಜಿ. ಸಲ್ಫರ್‌, 1ರಿಂದ 2 ಟನ್‌ ತಿಪ್ಪೆ ಗೊಬ್ಬರ, ಸಕಾಲದಲ್ಲಿ ಸಾರಜನಕ, ಪೊಟ್ಯಾಶ್‌ ಬಳಸಿದರೆ ಕಾಳಿನಲ್ಲಿ ಎಣ್ಣೆ ಅಂಶ ಹೆಚ್ಚಾಗಲಿದೆ. ಸಮಗ್ರ ಬೆಳೆ ನಿರ್ವಹಣೆ ಪದ್ಧತಿ ಮೂಲಕ ಹೆಚ್ಚಿನ ಇಳುವರಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕೆವಿಕೆಗೆ ಭೇಟಿಕೊಡಿ.


* ಈ ಬಾರಿ ಶುಂಠಿ ಬೆಳೆಯಲು ನಿರ್ಧರಿಸಿದ್ದೇನೆ. ಇದು ಶುಂಠಿ ಬೆಳೆಗೆ ಸಕಾಲವೇ?

ಬೆನಕನಳ್ಳಿಯ ಸಂಜಯ ಚವಾಣ್‌

ಉ: ಶುಂಠಿ ಬೆಳೆಯುವ ಮೊದಲು ಮಣ್ಣು ಪರೀಕ್ಷೆ ಮಾಡಿಸಿಕೊಳ್ಳಬೇಕು. ಶುಂಠಿ ಬೆಳೆಗೆ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಹವಾಮಾನದಲ್ಲಿ ಏರುಪೇರಾದರೂ ಇಳುವರಿ ಕಡಿಮೆಯಾಗುತ್ತದೆ. ಯಾವುದಕ್ಕೂ ಒಮ್ಮೆ ಕೃಷಿ ಅಧಿಕಾರಿಗಳೊಂದಿಗೆ ಸಮಾಲೋಚಿಸುವುದು ಒಳ್ಳೆಯದು.


* ಪ್ರ: ಸೋಯಾಕ್ಕೆ ಯಾವ ಗೊಬ್ಬರ ಬಳಸಬೇಕು?

ಬಾಲೂರಿನ ವಿಠ್ಠಲರಾವ್ ಪಾಟೀಲ

ಉ: ಪ್ರತಿ ಹೆಕ್ಟೇರ್‌ಗೆ 40 ಕೆ.ಜಿ ಸಾರಜನಕ, 80 ಕೆ.ಜಿ ರಂಜಕ, 25 ಕೆ.ಜಿ. ಪೊಟ್ಯಾಶ್ ಹಾಗೂ ಒಂದು ಕ್ವಿಂಟಲ್ ಜಿಪ್ಸಂ ಬಳಸಬೇಕು.


*ಪ್ರ: ಒಣಗುತ್ತಿರುವ ತೊಗರಿ ಬೆಳೆಗೆ ಯಾವ ಗೊಬ್ಬರ ಕೊಡಬೇಕು?

ಬೆಂಗಳೂರಿನ ಗುರುದೇವ

ಉ: ತೇವಾಂಶ ಇದ್ದರೆ ಬೆಳೆ ಒಣಗುವುದಿಲ್ಲ. ತೇವಾಂಶ ಕಡಿಮೆಯಾದರೆ ಹೂವು ಒಣಗುತ್ತದೆ. ರೈತರು ಬೆಳೆಯ ಮೇಲೆ ಸೂಕ್ಷ್ಮ ನಿಗಾ ವಹಿಸಬೇಕು. ಸಕಾಲದಲ್ಲಿ ನೀರು ಕೊಟ್ಟು ಹಾನಿ ಆಗುವುದನ್ನು ತಪ್ಪಿಸಿಕೊಳ್ಳಬೇಕು.


* ಪ್ರಶ್ನೆ: ಯಾವ ತಳಿಯ ಸೋಯಾ ಬೀಜ ಬೆಳೆಯಬೇಕು. ಹೇಗೆ ಬಿತ್ತನೆ ಮಾಡಬೇಕು.

ನಿರ್ಣಾದ ಸುನೀಲ ರೆಡ್ಡಿ

ಉ: ಜಿಲ್ಲೆಗೆ ಜೆಎಸ್–355 ಸೋಯಾ ಅವರೆ ಸೂಕ್ತವಾಗಿದೆ. ಬೀಜಗಳನ್ನು 6ರಿಂದ 10 ಸೆಂ. ಮೀ ಅಂತರದಲ್ಲಿ ಊರಬೇಕು. ಹನಿ ನೀರಾವರಿ ಸಹ ಬಳಸಬಹುದು. ಇದರಿಂದ ಬೀಜ ಕಡಿಮೆ ಬಳಕೆಯಾಗಲಿದೆ. ಇಳುವರಿ ಹೆಚ್ಚು ಬರಲಿದೆ.


* ಪ್ರ: ಕಬ್ಬಿಗೆ ಪರ್ಯಾಯ ಬೆಳೆ ಯಾವುದು?

ಬಸವಕಲ್ಯಾಣ ತಾಲ್ಲೂಕಿನ ಹಂದ್ರಾಳದ ಮಹಾದೇವ ರೆಡ್ಡಿ

ಉ: ರೈತರು ಲಾಭ ಹೆಚ್ಚಿಸಿಕೊಳ್ಳಲು ಮಿಶ್ರ ಬೇಸಾಯ ಮಾಡಬೇಕು. ಕಬ್ಬು ಬೆಳೆಯಲ್ಲಿ ಮೂರು ತಿಂಗಳು ಮೊದಲು ತರಕಾರಿ ಬೆಳೆದು ಲಾಭ ಗಳಿಸಬೇಕು.


* ಪ್ರ: ಕಬ್ಬಿನ ಇಳುವರಿ ಕಡಿಮೆಯಾಗಿದೆ. ಏನು ಮಾಡಬೇಕು?

ಹುಮನಾಬಾದ್ ತಾಲ್ಲೂಕಿನ ಕಲ್ಲೂರಿನ ಜಗನ್ನಾಥ ಜುನ್ನಾ

ಉ: ಕಬ್ಬಿನಲ್ಲಿ ಸಕ್ಕರೆ ಅಂಶ ಕಡಿಮೆ ಇದ್ದರೆ ಕಬ್ಬು ಬೆಳೆಯುವುದು ಸರಿಯಲ್ಲ. ಆದಷ್ಟು ಬೇಗ ಮಣ್ಣು ಪರೀಕ್ಷೆ ಮಾಡಿಸಿಕೊಂಡು ನಂತರ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ನಿರ್ಧಾರ ತೆಗೆದುಕೊಳ್ಳವುದು ಒಳ್ಳೆಯದು.


* ಪ್ರ: ಮಹಾರಾಷ್ಟ್ರದ ಫುಲೆಸಂಗಮ್‌ ಸೋಯಾ ತಳಿ ನಮ್ಮ ಜಿಲ್ಲೆಗೆ ಸೂಕ್ತವಾಗಿದೆಯೇ?

ಭಾಲ್ಕಿಯ ಕಾಶೀನಾಥ ಮೀನಕೇರಾ

ಉ: ಫುಲೆಸಂಗಮ್‌ ಬಿತ್ತನೆ ಮಾಡಿದರೆ ಫಸಲು ಕೈಗೆ ಬರಲು ಹೆಚ್ಚು ಸಮಯಬೇಕಾಗುತ್ತದೆ. ಬಿತ್ತನೆ ಮಾಡಿದ 110 ದಿನಗಳ ನಂತರ ಇಳುವರಿ ಕೊಡುತ್ತದೆ. ಹೂವು ಬಿಡುವ ಹಂತದಲ್ಲಿ ನೀರು ಕೊಡಲೇ ಬೇಕು. ಇಲ್ಲದಿದ್ದರೆ ಕಾಯಿ ಕಟ್ಟುವುದಿಲ್ಲ. ರೈತರೇ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.


‌* ಪ್ರ: ರೈತರಿಗೆ ಆಫ್‌ಲೈನ್‌ ತರಬೇತಿ ಕೊಡಲು ಸಾಧ್ಯವಿದೆಯೇ?

ಬೀದರ್‌ನ ಶಾಂತಮ್ಮ ಮೂಲಗೆ

ಉ: ಕೋವಿಡ್ ಇದ್ದ ಕಾರಣ ಆಫ್‌ಲೈನ್‌ ತರಬೇತಿ ಕೊಡಲು ಸಾಧ್ಯವಾಗಿಲ್ಲ. ಗೂಗಲ್‌ ಮೀಟ್‌ ಮೂಲಕ ರೈತರಿಗೆ ತರಬೇತಿ ಕೊಡಲಾಗಿದೆ. ಆಫ್‌ಲೈನ್‌ ತರಬೇತಿ ನೀಡುವಂತೆ ರೈತರು ಒತ್ತಾಯಿಸುತ್ತಿದ್ದಾರೆ. ಶೀಘ್ರದಲ್ಲೇ ಪ್ರತಿ ತಾಲ್ಲೂಕಿನಲ್ಲಿ ತರಬೇತಿ ಏರ್ಪಡಿಸಲಾಗುವುದು.


* ಮಾವು, ಪೇರಲ್‌ಕಾಯಿ ಗಿಡ ಇವೆ. ಸರಿಯಾಗಿ ಕಾಯಿ ಬಿಡುತ್ತಿಲ್ಲ. ಯಾವ ಗೊಬ್ಬರ ಕೊಡಬೇಕು?

ಗಾದಗಿಯ ಅನಿಲಕುಮಾರ

ಉ: ಕೃಷಿ ವಿಜ್ಞಾನ ಕೇಂದ್ರಕ್ಕೆ ಬಂದು ಇನ್ನಷ್ಟು ವಿವರಗಳನ್ನು ಒದಗಿಸಿದರೆ ಪರಿಶೀಲಿಸಲಾಗುವುದು. ಸ್ಥಳಕ್ಕೆ ಭೇಟಿ ಕೊಟ್ಟ ನಂತರ ಯಾವ ಗೊಬ್ಬರ ಕೊಡಬೇಕು ಎನ್ನುವ ಕುರಿತು ಸಲಹೆ ನೀಡಲಾಗುವುದು.‌

ಸೋಯಾ ಹೊಸ ತಳಿ, ಬೆಳೆ ಬದಲಾವಣೆ ಕುರಿತು ಬ್ಯಾಲಹಳ್ಳಿಯ ನಿರ್ಮಲಕಾಂತ ಪಾಟೀಲ, ನಿರ್ಣಾದ ದೀಪಕ ಮೋಹನ್ ರೆಡ್ಡಿ, ಖಟಕಚಿಂಚೋಳಿಯ ಉಮೇಶ, ಧೂಪತಮಹಾಗಾಂವದ ಮಹೇಶಕುಮಾರ ಪ್ರಶ್ನೆಗಳನ್ನು ಕೇಳಿದರು. ಹಳ್ಳಿಖೇಡದ ವೀರಣ್ಣ ಉಪ್ಪಿನ್‌ ಅವರು ಅರಿಸಿಣ ಮಾರುಕಟ್ಟೆಯ ಬಗ್ಗೆ ವಿಚಾರಿಸಿದರೆ, ಕೆಲವರು ತೊಗರಿ ಬೆಳೆಯ ಕುರಿತ ಗೊಂದಲ ನಿವಾರಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.