ಬೀದರ್: ಕಬ್ಬಿನ ಬಾಕಿ ಹಣ ಉಳಿಸಿಕೊಂಡಿರುವ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಪ್ರತಿ ಟನ್ ಕಬ್ಬಿಗೆ ₹2,700 ಪಾವತಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೀದರ್ ಜಿಲ್ಲಾ ಘಟಕ ಆಗ್ರಹಿಸಿದೆ.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ₹2,700 ಮೇ ಮೊದಲ ವಾರದಲ್ಲಿ ಪಾವತಿಸಲಾಗುವುದು ಎಂದು ಆಶ್ವಾಸನೆ ನೀಡಲಾಗಿತ್ತು. ಅದರ ಪ್ರಕಾರ, ಜಿಲ್ಲಾಧಿಕಾರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುವುದನ್ನು ಕೈಬಿಡಲಾಗಿತ್ತು. ಈಗ ಮೊದಲ ವಾರ ಕಳೆದು ಹೋಗಿದೆ. ಆದರೆ, ಇದುವರೆಗೆ ಹಣ ಪಾವತಿಸಿಲ್ಲ. ಕೂಡಲೇ ಹಣ ಪಾವತಿಗೆ ಕ್ರಮ ಕೈಗೊಳ್ಳಬೇಕೆಂದು ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರಿಗೆ ರೈತ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿ ಒತ್ತಾಯಿಸಿದರು.
ಮೇ ತಿಂಗಳು ಮುಗಿಯುವುದರೊಳಗೆ ರೈತರ ಖಾತೆಗೆ ಹಣ ಜಮೆ ಮಾಡದಿದ್ದಲ್ಲಿ ಘೇರಾವ್ ಹಾಕಿ ಪ್ರತಿಭಟನೆ ನಡೆಸಲಾಗುವುದು. ಯಾವುದೇ ಅಹಿತಕರ ಘಟನೆ ಜರುಗಿದರೆ ಅದಕ್ಕೆ ತಾವೇ ಹೊಣೆಗಾರರು ಎಂದು ಮನವಿಯಲ್ಲಿ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆಯವರಿಗೆ ತಿಳಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ರಾಜಕುಮಾರ ಪಾಟೀಲ, ಬಾಬುರಾವ್ ಜೋಳದಾಬಕಾ, ಚಂದ್ರಶೇಖರ ಜಮಖಂಡಿ, ನೀಲಕಂಠ ಬುಯ್ಯಾ, ವಿಶ್ವನಾಥ ಧರಣೆ, ಶಿವರಾಜ ಡೊಂಗರಗಾಂವ್ ಮತ್ತಿತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.