
ಹುಲಸೂರ: ಪಟ್ಟಣ ತಾಲ್ಲೂಕು ಕೇಂದ್ರವಾಗಿ 8 ವರ್ಷಗಳು ಕಳೆಯುತ್ತ ಬಂದರೂ ಇಲ್ಲಿಯವರೆಗೂ ಅಗ್ನಿಶಾಮಕ ಠಾಣೆ ಇಲ್ಲದಿರುವುದು ಅಪಾಯವನ್ನು ಹೆಚ್ಚು ಮಾಡುತ್ತಿದೆ. ಹೆಚ್ಚುತ್ತಿರುವ ಅಗ್ನಿ ಅವಘಡಗಳ ಜೊತೆಗೆ ಅಗತ್ಯ ಮೂಲಸೌಕರ್ಯ ಒದಗಿಸದಿರುವುದು ಸರ್ಕಾರದ ಸ್ಪಷ್ಟ ನಿರ್ಲಕ್ಷ್ಯ ಎನ್ನುವುದು ಸಾರ್ವಜನಿಕರ ಆಕ್ರೋಶ.
ತಾಲ್ಲೂಕು ವ್ಯಾಪ್ತಿಯಲ್ಲಿ ಸುಮಾರು 18 ಹಳ್ಳಿಗಳು 7 ಪಂಚಾಯಿತಿಗಳು ಬರುತ್ತವೆ. ಬೇಸಿಗೆ ಕಾಲದಲ್ಲಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಎಲ್ಲಿಯಾದರೂ ಅಗ್ನಿ ಅವಘಡ ಸಂಭವಿಸಿದರೆ ದೂರದ ಬಸವಕಲ್ಯಾಣ ಇಲ್ಲವೇ ಭಾಲ್ಕಿಯಿಂದ ಅಗ್ನಶಾಮಕ ದಳದವರು ಬರಬೇಕು.
ಅಷ್ಟು ದೂರದಿಂದ ಅಗ್ನಿಶಾಮಕ ವಾಹನ ಬರುವುದರ ಒಳಗೆ ಜಮೀನುಗಳು, ಹುಲ್ಲಿನ ಬಲುವೆಗಳು ಹಾಗೂ ಮನೆಯಲ್ಲಿ ವಿದ್ಯುತ್‌ನಿಂದ ಅವಘಡ ಸಂಭವಿಸಿದರೆ ಸಂಪೂರ್ಣವಾಗಿ ವಸ್ತುಗಳು, ಧಾನ್ಯಗಳು, ಹಣ ಇತ್ಯಾದಿಗಳು ಅಗ್ನಿ ಜ್ವಾಲೆಗೆ ಧಗಧಗಿಸಿ ಸುಟ್ಟು ಕರಕಲಾಗುತ್ತದೆ ಎಂದು ತಾಲ್ಲೂಕಿನ ರೈತರು ದೂರಿದ್ದಾರೆ.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್, ಬೇಸಿಗೆಯ ತೀವ್ರ ಉಷ್ಣತೆ, ಅಡುಗೆಮನೆಯ ಅವಘಡಗಳು, ಒಣಹುಲ್ಲು ಹಾಗೂ ಗೋದಾಮುಗಳಲ್ಲಿ ಸಂಭವಿಸುತ್ತಿರುವ ಬೆಂಕಿ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿವೆ. ಬಸವಕಲ್ಯಾಣ ಮತ್ತು ಭಾಲ್ಕಿ ತಾಲ್ಲೂಕಿನಿಂದ ಕೆಲ ಗ್ರಾಮಗಳು 40 ರಿಂದ 50 ಕಿಲೋ ಮೀಟರ್ ದೂರದಲ್ಲಿವೆ. ಅಗ್ನಿಶಾಮಕ ಸೇವೆ ತುರ್ತು ಸಂದರ್ಭಗಳಲ್ಲಿ ನಿಮಿಷಗಳಲ್ಲಿ ಸ್ಪಂದಿಸಬೇಕಾದರೆ, ತಾಲ್ಲೂಕಿನ ಜನರು ಗಂಟೆಗಳ ಕಾಲ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಿಳಂಬವೇ ಆಸ್ತಿ ನಷ್ಟಕ್ಕಿಂತಲೂ ಹೆಚ್ಚಿನದಾಗಿ ಜೀವಹಾನಿಯ ಅಪಾಯವನ್ನು ಹೆಚ್ಚಿಸುತ್ತಿದೆ ಎಂಬುದು ಸ್ಥಳೀಯರ ಆಕ್ಷೇಪವಾಗಿದೆ.
ತಾಲ್ಲೂಕಿಗೆ ಅಗ್ನಿಶಾಮಕ ಠಾಣೆ ಬೇಕೆಂಬ ಬೇಡಿಕೆ ವರ್ಷಗಳಿಂದಲೂ ಕೇಳಿಬರುತ್ತಿದ್ದರೂ, ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆ ಇದನ್ನು ಕಡೆಗಣಿಸುತ್ತಿರುವುದು ಗಂಭೀರ ಪ್ರಶ್ನೆ ಎಬ್ಬಿಸಿದೆ. ಅಗ್ನಿಶಾಮಕ ಠಾಣೆ ಸ್ಥಾಪನೆ ಐಷಾರಾಮಿ ಸೌಲಭ್ಯವಲ್ಲ ಇದು ಜನಜೀವನ, ಆಸ್ತಿ ಮತ್ತು ಭವಿಷ್ಯವನ್ನು ರಕ್ಷಿಸುವ ಅನಿವಾರ್ಯ ವ್ಯವಸ್ಥೆ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು, ಹುಲಸೂರು ತಾಲ್ಲೂಕಿಗೆ ತುರ್ತು ಆಧಾರದ ಮೇಲೆ ಅಗ್ನಿಶಾಮಕ ಠಾಣೆ ಮಂಜೂರು ಮಾಡಬೇಕೆಂದು ಜನತೆ ಆಗ್ರಹಿಸಿದ್ದಾರೆ.
ಹುಲಸೂರ ತಾಲ್ಲೂಕ ಕೇಂದ್ರದಲ್ಲಿ ಅಗ್ನಿಶಾಮಕ ದಳವಿಲ್ಲದಿರುವುದು ಜನಪ್ರತಿನಿಧಿಗಳ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕೂಡಲೇ ತಾಲ್ಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಬೇಕುಸಂದೀಪ ಮೂಕಿಂದೆ ಗ್ರಾಮ ಕ್ರಾಂತಿ ಸೇನೆ ರಾಜ್ಯದ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.