ADVERTISEMENT

‘ಅಗ್ನಿಶಾಮಕ’ ಠಾಣೆಯಲ್ಲಿ ನೀರಿನ ಸಮಸ್ಯೆ!

ಕೊಳವೆಬಾವಿ ಕೆಟ್ಟು ಒಂದು ವರ್ಷವಾದರೂ ದುರಸ್ತಿ ಗೋಜಿಗೆ ಹೋಗದ ಪುರಸಭೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 12:21 IST
Last Updated 17 ಮೇ 2022, 12:21 IST
ಹುಮನಾಬಾದ್ ಪಟ್ಟಣದ ಅಗ್ನಿಶಾಮಕ ಠಾಣೆ
ಹುಮನಾಬಾದ್ ಪಟ್ಟಣದ ಅಗ್ನಿಶಾಮಕ ಠಾಣೆ   

ಹುಮನಾಬಾದ್: ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಬೆಂಕಿ ನಂದಿಸಿ ಅನಾಹುತ ತಪ್ಪಿಸಬೇಕಾದ ಅಗ್ನಿಶಾಮಕ ಠಾಣೆಯಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ.

ಇಲ್ಲಿನ ವಾಂಜರಿ ಬಡಾವಣೆಯಲ್ಲಿರುವ ಅಗ್ನಿಶಾಮಕ ಠಾಣೆಯಲ್ಲಿ ಪುರಸಭೆ ಕೊಳವೆಬಾವಿ ಕೊರೆಯಿಸಿದೆ. ಈ ಕೊಳವೆಬಾವಿಯ ಪೈಪ್ ಹಾಗೂ ಮೋಟಾರ್ ದುರಸ್ತಿಗೆ ಬಂದ ಕಾರಣ ನೀರಿನ ಸಮಸ್ಯೆ ಎದುರಾಗಿದೆ.

‘ಒಂದು ವರ್ಷದ ಹಿಂದೆ ಠಾಣೆಯಲ್ಲಿಯ ಕೊಳವೆಬಾವಿ ಕೆಟ್ಟು ಹೋಗಿದೆ. ಈ ಕುರಿತು ಅನೇಕ ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದೇವೆ. ಆದರೂ ಪ್ರಯೋಜನವಾಗಿಲ್ಲ’ ಎಂದು ಠಾಣಾಧಿಕಾರಿ ಶಿವರಾಜ ಹೇಳುತ್ತಾರೆ.

ADVERTISEMENT

ಖಾಸಗಿ ಕೊಳವೆಬಾವಿ ಮೊರೆ: ‘ಠಾಣೆಗೆ ಪುರಸಭೆ ವತಿಯಿಂದ ನಲ್ಲಿ ಸಂಪರ್ಕ ನೀಡಲಾಗಿದೆ. ಅದರಲ್ಲಿ ಒಂದೊಂದು ಸಾರಿ ಸರಿಯಾಗಿ ನೀರು ಬರುವುದಿಲ್ಲ. ಅಗ್ನಿ ಅವಘಡದ ತುರ್ತು ಕರೆ ಬಂದರೆ ಖಾಸಗಿ ಕೊಳವೆಬಾವಿಗಳ ಮೊರೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಠಾಣೆಯಲ್ಲಿನ ಕೊಳವೆಬಾವಿ ದುರಸ್ತಿ ಮಾಡಿ ಸಬೇಕು’ ಎಂದು ಅಗ್ನಿ ಶಾಮಕ ದಳದ ಸಿಬ್ಬಂದಿ ಸುನೀಲಕುಮಾರ ಮನವಿ ಮಾಡಿದರು.

‘ಠಾಣಾಧಿಕಾರಿ ಕೊಳವೆಬಾವಿ ದುರಸ್ತಿ ಮಾಡಿಸುವಂತೆ ಒಂದು ವರ್ಷದಲ್ಲಿ ಮೂರು–ನಾಲ್ಕು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ನಿರ್ಲಕ್ಷ್ಯ ಮಾಡುತ್ತಿರುವುದು ಎಷ್ಟು ಸರಿ? ತಕ್ಷಣ ಮೋಟಾರ್ ದುರಸ್ತಿ ಮಾಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪುರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಜಯ ಕರ್ನಾಟಕ ಜನಪರ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ವಿಶಾಲ ಧೊಮಾಳೆ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.