ADVERTISEMENT

ಬೀದರ್ | ಮಳೆಗೆ ಬೆಳೆ ಹಾಳು: ಸಂಕಷ್ಟದಲ್ಲಿ ರೈತರು

ಬಸವರಾಜ ಎಸ್.ಪ್ರಭಾ
Published 8 ಸೆಪ್ಟೆಂಬರ್ 2025, 5:11 IST
Last Updated 8 ಸೆಪ್ಟೆಂಬರ್ 2025, 5:11 IST
ಭಾಲ್ಕಿ ತಾಲ್ಲೂಕಿನ ಡಾವರಗಾಂವ ಗ್ರಾಮದ ಹೊಲವೊಂದರಲ್ಲಿ ಮಳೆ ನೀರು ತುಂಬಿಕೊಂಡು ಬೆಳೆ ಹಾಳಾಗಿರುವುದು
ಭಾಲ್ಕಿ ತಾಲ್ಲೂಕಿನ ಡಾವರಗಾಂವ ಗ್ರಾಮದ ಹೊಲವೊಂದರಲ್ಲಿ ಮಳೆ ನೀರು ತುಂಬಿಕೊಂಡು ಬೆಳೆ ಹಾಳಾಗಿರುವುದು   

ಭಾಲ್ಕಿ: ಹೊಲದಲ್ಲಿನ ಬೆಳೆಗಳು ನಳನಳಿಸುತ್ತಿದ್ದು, ರಾಶಿಗೆ ಸ್ವಲ್ಪದಿನ ಉಳಿದಿದ್ದವು. ಆರ್ಥಿಕವಾಗಿ ಸುಧಾರಣೆ ಕಾಣಬಹುದು ಎಂದುಕೊಂಡಿದ್ದೆವು. ಆದರೆ ಈಚೆಗೆ ಸುರಿದ ಭಾರಿ ಮಳೆ ಮತ್ತು ಕಾರಂಜಾ ಜಲಾಶಯದಿಂದ ಮಾಂಜ್ರಾ ನದಿಯ ಪ್ರವಾಹದಿಂದಾಗಿ ಬೆಳೆಗಳು ಸಂಪೂರ್ಣ ನೀರು ಪಾಲಾದವು. ಪ್ರವಾಹಕ್ಕೆ ಬದುಕು ಕೊಚ್ಚಿಕೊಂಡು ಹೋದಂತಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ...ಇವು ತಮ್ಮ ಹೊಲಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾಳಾಗಿರುವ ರೈತರ ನೋವಿನ ನುಡಿಗಳು.

ಮಾಂಜ್ರಾ ನದಿ ಪಾತ್ರದಲ್ಲಿರುವ ನೆಲವಾಡ, ಡಾವರಗಾಂವ, ಕಟ್ಟಿತೂಗಾಂವ, ಮಾಸಿಮಾಡ, ಕುಂಟೆ ಸಿರ್ಸಿ, ಗೋಧಿಹಿಪ್ಪರಗಾ, ದಾಡಗಿ ಸೇರಿದಂತೆ ಅನೇಕ ಗ್ರಾಮಗಳ ಅನ್ನದಾತರ ಜಮೀನುಗಳಲ್ಲಿ ನೀರು ನಿಂತಿದೆ. ಹೊಲಗಳಲ್ಲಿ ಬೆಳೆದ ಉದ್ದು, ಹೆಸರು, ಸೋಯಾ ಅವರೆ, ತೊಗರಿ ಸೇರಿದಂತೆ ತೋಟಗಾರಿಕೆ ಬೆಳೆಗಳಾದ ಟೊಮೆಟೊ, ಈರುಳ್ಳಿ, ಮೆಣಸಿನಕಾಯಿ, ಪಪ್ಪಾಯ ಸೇರಿದಂತೆ ಇತರ ಬೆಳೆಗಳು ಸಂಪೂರ್ಣ ನೀರು ಪಾಲಾಗಿವೆ.

‘8 ಎಕರೆ ಪ್ರದೇಶದಲ್ಲಿ ಸೋಯಾ ಅವರೆ, ಉದ್ದು, ತೊಗರಿ ಬೆಳೆ ಬೆಳೆಯಲು ಬಿತ್ತನೆ ಸೇರಿ ಇತರ ಕೃಷಿ ಚಟುವಟಿಕೆಗಳಿಗೆ ಸುಮಾರು ₹1 ಲಕ್ಷ ಲಾಗೋಡಿ ಹಾಕಿದ್ದೇನೆ. ಈಗ ಸಂಪೂರ್ಣ ಭೂಮಿ ನೀರು ಪಾಲು ಆಗಿರುವುದರಿಂದ ನನಗೆ ದಿಕ್ಕು ತೋಚದಂತಾಗಿದೆ. ನಮ್ಮ ಗ್ರಾಮದ ಸುಮಾರು 600 ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದೆ. ಸರ್ಕಾರ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ನೀಡುವ ಮೂಲಕ ಕಷ್ಟದಲ್ಲಿರುವ ಅನ್ನದಾತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದು ಡಾವರಗಾಂವ ಗ್ರಾಮದ ರೈತರಾದ ಅಶೋಕ ಜೇವರಗೆ, ವಿಶ್ವನಾಥ ಕುಂಬಾರ, ಗಿರಿ ಮಲ್ಲಾಪುರೆ, ಉಮೇಶ ಬಿರಾದರ, ರಮೇಶ ಬಿರಾದಾರ ಆಗ್ರಹಿಸಿದರು.

ADVERTISEMENT

‘ಹೊಲದಲ್ಲಿ ಇನ್ನು ಮೂರು ಅಡಿವರೆಗೆ ನೀರು ನಿಂತಿರುವುದರಿಂದ ಹಿಂಗಾರು ಬೆಳೆಗಳ ಬಿತ್ತನೆ ಆಗದಂತಹ ಸಂಕಷ್ಟದ ಸ್ಥಿತಿಯಿದೆ. ಹೊಲದ ತುಂಬೆಲ್ಲ ನೀರು ನಿಂತಿರುವುದರಿಂದ ಪ್ರಾಣಿಗಳಿಗೆ ಆಹಾರದ ಸಂಕಷ್ಟ ಎದುರಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಅನ್ನದಾತರ ಸಮಸ್ಯೆಯ ಪರಿಹಾರದ ಜೊತೆಗೆ ಮೂಕ ಪ್ರಾಣಿಗಳ ಕಷ್ಟಕ್ಕೂ ಸ್ಪಂದಿಸಬೇಕು ಎಂದು ನೆಲವಾಡ ಗ್ರಾಮದ ರೈತ ರಾಜಕುಮಾರ ತೊಗರೆ, ವಿನಾಯಕ ಪಾಟೀಲ, ರಾಜೇಂದ್ರ ಕಂದಗೂಳೆ ಒತ್ತಾಯಿಸಿದರು.

‘ತೋಟಗಾರಿಕೆ ಬೆಳೆಗಳಿಗೆ ಹಾನಿ: ಆಗಸ್ಟ್‌ನಲ್ಲಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ಸುಮಾರು 337 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ನಿಟ್ಟೂರ(ಬಿ), ಹಲಬರ್ಗಾ, ಭಾಲ್ಕಿ ಹೋಬಳಿಗಳಲ್ಲಿ ಬೆಳೆದ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಗೀಡಾಗಿವೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಾರುತಿ ಜಾಬನೂರ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಂಜ್ರಾ ನದಿಗೆ ಹರಿದ 6.5 ಟಿಎಂಸಿ ನೀರು ಈಚೆಗೆ ಸುರಿದ ಭಾರಿ ಮಳೆಯಿಂದಾಗಿ ಕಾರಂಜಾ ಜಲಾಶಯಕ್ಕೆ ಸುಮಾರು 9.5 ಟಿಎಂಸಿ ನೀರಿನ ಒಳಹರಿವು ಇತ್ತು. ಹೀಗಾಗಿ ಜಲಾಶಯದ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದ 6.5 ಟಿಎಂಸಿ ನೀರನ್ನು ಮಾಂಜ್ರಾ ನದಿಗೆ ಹರಿಸಲಾಗಿದೆ ಎಂದು ಕಾರಂಜಾ ಯೋಜನೆ ಕಾರ್ಯಪಾಲಕ ಎಂಜಿನಿಯರ್‌ ವಿಜ್ಞೇಶ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಭಾಲ್ಕಿ ತಾಲ್ಲೂಕಿನ ಡಾವರಗಾಂವ ಗ್ರಾಮದ ಹೊಲವೊಂದರಲ್ಲಿ ಮಳೆ ನೀರು ತುಂಬಿಕೊಂಡು ಬೆಳೆ ಹಾಳಾಗಿರುವುದು
ಭಾಲ್ಕಿ ತಾಲ್ಲೂಕಿನ ನೆಲವಾಡ ಗ್ರಾಮದ ವಿನಾಯಕ ಪಾಟೀಲ ಅವರ ಹೊಲದಲ್ಲಿ ನೀರು ತುಂಬಿಕೊಂಡು ಬೆಳೆ ಹಾಳಾಗಿರುವುದನ್ನು ತೋರಿಸುತ್ತಿರುವ ರೈತರು

ಭಾಲ್ಕಿ ತಾಲ್ಲೂಕಿನಲ್ಲಿ 33 ಸಾವಿರ ಎಕರೆ ಬೆಳೆ ಹಾನಿ ಮಾಂಜ್ರಾ ನದಿ ಪ್ರವಾಹದಲ್ಲಿ ಮುಳುಗಿದ ಬೆಳೆ ಪ್ರತಿ ಹೆಕ್ಟೇರ್‌ಗೆ ₹ 50 ಸಾವಿರ ಪರಿಹಾರಕ್ಕೆ ಆಗ್ರಹ

ತಹಶೀಲ್ದಾರ್ ಕಚೇರಿಗೆ ಎರಡು ಸಾರಿ ಮನವಿ ಸಲ್ಲಿಸಿದರೂ ಹೊಲಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ. ಬೆಳೆ ಹಾನಿ ಸಂಬಂಧ ವಿಮೆ ಕಂಪನಿಗೆ ದೂರು ಸಲ್ಲಿಸಿದರೂ ಪರಿಶೀಲಿಸಲು ಬಂದಿಲ್ಲ
ರಾಜಕುಮಾರ ಶೇರಿಕಾರ ರೈತ ಡಾವರಗಾಂವ
ರೈತರ ಬೆಳೆಗಳು ಸಂಪೂರ್ಣ ಹಾಳಾಗಿವೆ. ಪ್ರಾಣಿಗಳ ಆಹಾರಕ್ಕಾಗಿ ಕೂಡಿಟ್ಟಿದ್ದ ಕಣಕಿ ಹುಲ್ಲಿನ ಬಣವೆಗಳು ಸಹ ನೀರಿನಲ್ಲಿ ಕೊಚ್ಚಿ ಹೋಗಿವೆ. ಅವುಗಳಿಗೆ ಆಹಾರದ ವ್ಯವಸ್ಥೆ ಮಾಡಬೇಕು
ರಾಜಕುಮಾರ ತೊಗರೆ ರೈತ ನೆಲವಾಡ
ತಾಲ್ಲೂಕಿನ ಒಂದು ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು ಮಳೆಗೆ 33 ಸಾವಿರ ಎಕರೆ ಪ್ರದೇಶದ ಬೆಳೆ ಹಾನಿಯಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪ್ರಕಾರ ₹ 11 ಕೋಟಿ ಪರಿಹಾರ ಸಿಗುವ ಸಾಧ್ಯತೆಯಿದೆ
ಪಿ.ಎಂ. ಮಲ್ಲಿಕಾರ್ಜುನ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.