ADVERTISEMENT

'ಸಂಸ್ಕೃತಿ ಉಳಿಸುವ ಕಾರ್ಯಕ್ರಮವೇ ಜಾನಪದ ಜಗಲಿ'

ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 14:08 IST
Last Updated 28 ಡಿಸೆಂಬರ್ 2020, 14:08 IST
ಬೀದರ್‌ನಲ್ಲಿ ನಡೆದ ‘ಜಾನಪದ ಜಗಲಿ’ ಕಾರ್ಯಕ್ರಮದಲ್ಲಿ ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಮಾತನಾಡಿದರು
ಬೀದರ್‌ನಲ್ಲಿ ನಡೆದ ‘ಜಾನಪದ ಜಗಲಿ’ ಕಾರ್ಯಕ್ರಮದಲ್ಲಿ ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಮಾತನಾಡಿದರು   

ಬೀದರ್: ‘ಸಮಾನ ಮನಸ್ಕ ಹೃದಯಗಳನ್ನು ಬೆಸೆಯಲು ಹಾಗೂ ದೇಸಿ ಸಂಸ್ಕೃತಿಯನ್ನು ಬೆಳೆಸಲು ರೂಪಿಸಲಾದ ಶಿಸ್ತುಬದ್ಧವಾದ ಯೋಜನೆಯೇ ಜಾನಪದ ಜಗಲಿ ಕಾರ್ಯಕ್ರಮ’ ಎಂದು ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಬಣ್ಣಿಸಿದರು.

ಕರ್ನಾಟಕ ಜಾನಪದ ಪರಿಷತ್ತು, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘ, ಕರ್ನಾಟಕ ಸಾಹಿತ್ಯ ಸಂಘದ ಆಶ್ರಯದಲ್ಲಿ ಪ್ರತಾಪನಗರದಲ್ಲಿ ನಡೆದ ‘ಜಾನಪದ ಜಗಲಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

'ಜಾನಪದ ಹಾಡುಗಳ ಮೂಲಕವೇ ನಾವು ನೃತ್ಯವನ್ನು ಆರಂಭ ಮಾಡುತ್ತೇವೆ. ನಮ್ಮ ನೃತ್ಯಾಲಯದಲ್ಲಿ ಮಕ್ಕಳಿಗೆ ಜನಪದ ಭರತನಾಟ್ಯ, ದೇಶಿ ಹಾಡುಗಳ ಮೇಲೆ ಹೆಚ್ಚು ನೃತ್ಯ ಅಭ್ಯಾಸ ಮಾಡಿಸುತ್ತೇವೆ. ನೃತ್ಯದ ಮೂಲಕ ಜನಪದ ಸಂಸ್ಕೃತಿಯನ್ನು ಹೆಚ್ಚು ಹೆಚ್ಚು ಬೆಳೆಸಬಹುದು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ರಾಜಕುಮಾರ ಹೆಬ್ಬಾಳೆ ಅವರು ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಪದ ಸಂಸ್ಕೃತಿ ಹಾಗೂ ಜನಪದ ಕಲಾವಿದರ ಉಳಿವಿಗೆ ಶ್ರಮಿಸುತ್ತಿದ್ದಾರೆ’ ಎಂದು ತಿಳಿಸಿದರು.

ಮೆಥೋಡಿಸ್ಟ್ ಪದವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆ ಅರುಣಾ ಸುಲ್ತಾನಪುರೆ ಮಾತನಾಡಿ, ‘ಆಧುನಿಕರಣ ಮತ್ತು ಯಾಂತ್ರಿಕರಣದ ಭರದಲ್ಲಿ ಜಾನಪದ ಶೈಲಿಯಲ್ಲಿ ನಡೆಯುತ್ತಿದ್ದ ಮದುವೆಗಳು ಕಡಿಮೆಯಾಗುತ್ತಿವೆ. ಎಣ್ಣೆ ಹಚ್ಚುವ ಹಾಡು, ಗುಗ್ಗಳ ಹಾಡು, ಮದುಮಕ್ಕಳಿಗೆ ಆಟ ಆಡಿಸುವವರಿಲ್ಲದೆ ಕೇವಲ ಒಂದು ದಿನದಲ್ಲಿ ಮದುವೆ ಕಾರ್ಯವನ್ನು ಮುಗಿಸುತ್ತಿದ್ದೇವೆ’ ಎಂದರು.

‘ಅನುಕೂಲಸಿಂಧು ವಾತಾವರಣ ನಿರ್ಮಿಸಿಕೊಂಡು ಸಂಸ್ಕೃತಿಯನ್ನು ಹಾಳುಗೆಡವುತ್ತಿದ್ದೇವೆ. ಹಿಂದೆ ಹಿರಿಯರು ತುಂಬಿದ ಮನೆಗೆ ಹೆಣ್ಣು ಕೊಡಬೇಕೆಂದು ಆಸೆಪಡುತ್ತಿದ್ದರು. ಆದರೆ, ಇಂದಿನವರು ಯಾರೂ ದಿಕ್ಕಿಲ್ಲದ ಮನೆಗೆ ತಮ್ಮ ಮಗಳನ್ನು ಮದುವೆ ಮಾಡಿಕೊಡುತ್ತಿದ್ದಾರೆ’ ಎಂದರು.

‘ಹಿಂದೆ ಗ್ರಾಮದಲ್ಲಿ ಒಂದು ಮದುವೆ ಮಾಡಿದರೆ ಕುಂಬಾರ, ಕಂಬಾರ, ಬಡಿಗ, ಮಡಿವಾಳ ಹೀಗೆ ಹಲವಾರು ಜನರು ಬದುಕುತ್ತಿದ್ದರು. ಆದರೆ ಇಂದು ಅನರ್ಥ ಆಚರಣೆಯಿಂದ ಸಂಸ್ಕೃತಿಯನ್ನೇ ಮರೆಯುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪತ್ರಾಂಕಿತ ಅಧಿಕಾರಿ ಬಾಬುರಾವ್ ಗೊಂಡ ಮಾತನಾಡಿ, ‘ಕಜಾಪ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಸಂತಾಜಿ ಸ್ವಾಗತಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕ ಮಾತನಾಡಿದರು. ಮಹಾರುದ್ರ ಡಾಕುಳಗೆ ನಿರೂಪಿಸಿದರು. ಮೀರಾ ಖೇಣಿ ವಂದಿಸಿದರು.

ಜೈಭವಾನಿ, ನೀಲಾಂಬಿಕಾ ಹಾಗೂ ಮದರ್ ತೆರೆಸಾ ಮಹಿಳಾ ತಂಡದವರು ಜಾನಪದ ಗಾಯನ ನಡೆಸಿಕೊಟ್ಟರು. ಸಾವಿತ್ರಿಬಾಯಿ ಹೆಬ್ಬಾಳೆ, ಸುನೀತಾ ಕೂಡ್ಲಿಕರ್, ಮಹಾನಂದ ಮಡಕಿ, ಪ್ರಕಾಶ ಕನ್ನಾಳೆ, ಶಿವಶರಣಪ್ಪ ಗಣೇಶಪುರ, ಎಸ್.ಬಿ.ಕುಚಬಾಳ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.